ನಮ್ಮೆಲ್ಲರಿಗೂ ನಮ್ಮದೇ ಆದ ವೇಗಗಳಿವೆ. ಬದುಕು ನಮ್ಮ ನಮ್ಮ ಸಹಜ ವೇಗದಲ್ಲಿ ಮುಂದುವರೆಯಬೇಕು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತ
ಎಷ್ಟು ಸೂಕ್ಷ್ಮ, ಎಷ್ಟು ನಿಖರ
ಸೃಷ್ಟಿಕರ್ತನೆಂದರೆ,
ಜಗತ್ತಿನ ಪ್ರತಿಯೊಂದು ಘಟನೆಯೂ
ನಿರ್ಧಾರಿತ ರೀತಿಯಲ್ಲೇ
ನಿಗದಿತ ಸಮಯದಲ್ಲೇ ಸಂಭವಿಸುವುದು.
ಒಂದು ನಿಮಿಷ ಕೂಡ
ಆಚೀಚೆ ಆಗುವ ಅವಕಾಶವಿಲ್ಲ.
ಯಾರಿಗೂ, ಯಾವುದಕ್ಕೂ
ಗಡಿಯಾರ,
ಆದ್ಯತೆಯನ್ನು ನೀಡುವುದಿಲ್ಲ
ವಂಚನೆಯನ್ನೂ ಮಾಡುವುದಿಲ್ಲ.
ಕಾಲ ಹಾಕಿದ ಗೆರೆಯನ್ನು
ಪ್ರೇಮ ಮತ್ತು ಸಾವು
ದಾಟಿದ ಉದಾಹರಣೆಗಳೇ ಇಲ್ಲ.
~ ಶಮ್ಸ್
ಒಮ್ಮೆ ನೀವು ನಿಮ್ಮ ಸರಿಯಾದ ಲಯವನ್ನು ಕಂಡುಕೊಂಡಿರೆಂದರೆ ನಿಮ್ಮಿಂದ ಹೆಚ್ಚು ಹೆಚ್ಚು ಸಂಗತಿಗಳು ಸಾಧ್ಯವಾಗುವವು. ಆಗ ನಿಮ್ಮ ಕ್ರಿಯೆಗಳು ಹೆಕ್ಟಿಕ್ ಆಗಲಾರವು, ಅವು ಸುರಳಿತವಾಗಿ ಮುಂದುವರೆಯುವವು. ಕೆಲವರು ನಿಧಾನಕ್ಕೆ ಕೆಲಸ ಮಾಡುತ್ತಾರೆ, ಆದರೆ ಅವರ ನಿಧಾನತೆಗೆ ಅದರದೇ ಆದ ಕ್ವಾಲಿಟಿ ಇದೆ. ಮತ್ತು ಇವು ಅತ್ಯುತ್ತಮ ಕ್ವಾಲಿಟಿಗಳು. ವೇಗದಿಂದ ಕೆಲಸ ಮಾಡುವವರು ಹೆಚ್ಚು ಕೆಲಸ ಮಾಡಬಹುದು, ಹೆಚ್ಚು ಉತ್ಪಾದಿಸಬಹುದು ಆದರೆ ಇದರ ಕ್ವಾಲಿಟಿ ಉತ್ತಮವಾಗಿರುವುದು ಕಷ್ಟ. ನಿಧಾನಗತಿಯ ಕೆಲಸಗಾರ ಗುಣಾತ್ಮಕವಾಗಿ ಹೆಚ್ಚು ಪರಿಪೂರ್ಣ. ಅವನ ಸಂಪೂರ್ಣ ಸಾಮರ್ಥ್ಯ ಗುಣಾತ್ಮಕ ಆಯಾಮದಲ್ಲಿ ಮೂವ್ ಆಗುವುದು. ಉತ್ಪಾದನೆ ಹೆಚ್ಚು ಇರದಿರಬಹದು ಆದರೆ ಸಂತೃಪ್ತಿಗೆ ಸಂಖ್ಯೆ ಮಾನದಂಡವಲ್ಲ.
ನಿಮ್ಮಿಂದ ಕಡಿಮೆ ಸಂಖ್ಯೆಯದಾದರೂ, ಸುಂದರವಾದ, ಪರಿಪೂರ್ಣವಾದ ಸಂಗತಿಗಳು ಸಾಧ್ಯವಾಗುವವಾದರೆ, ನಿಮಗೆ ಖುಶಿಯಾಗುತ್ತದೆ, ನೀವು ತೃಪ್ತರಾಗುತ್ತೀರಿ. ಹಲವಾರು ಸಂಗತಿಗಳಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೀವು ಒಂದೇ ಸಂಗತಿಯಲ್ಲಿ ತೊಡಗಿಸಿಕೊಂಡು ಅದರಲ್ಲಿಯೇ ನೀವು ಪೂರ್ಣ ತೃಪ್ತಿಯನ್ನು ಕಂಡುಕೊಳ್ಳುವಿರಾದರೆ, ಅಷ್ಟು ಸಾಕು. ನೀವು ಹಲವಾರು ಸಂಗತಿಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು ನಿಮಗೆ ಯಾವುದೂ ತೃಪ್ತಿ ನೀಡಲಿಲ್ಲವಾದರೆ ಏನು ಪ್ರಯೋಜನ?
ಕೆಲವು ಮೂಲಭೂತ ಸಂಗತಿಗಳನ್ನು ಅರಿತುಕೊಳ್ಳುವುದು ಒಳ್ಳೆಯದು. ಒಂದು ಮನುಷ್ಯ ಸ್ವಭಾವ ಎನ್ನುವಂಥದು ಯಾವುದೂ ಇಲ್ಲ, ಎಷ್ಟು ಮನುಷ್ಯರಿದ್ದಾರೋ ಅಷ್ಟು ಮಾನವ ಸ್ವಭಾವಗಳಿವೆ. ಆದ್ದರಿಂದ ಒಂದು ಮಾನದಂಡ ಎನ್ನುವುದು ಇಲ್ಲ.
“ ನಸ್ರುದ್ದೀನ್, ನೀನು ದಿನಾ ಆಫೀಸ್ ಗೆ ಲೇಟ್ ಆಗಿ ಬರ್ತೀಯಾ. ಆಸೀಫ್ ಮನೆ ಇಲ್ಲಿಂದ 5 ಮೈಲಿ ದೂರ ಆದರೂ ಅವನು ಸರಿಯಾದ ಸಮಯಕ್ಕೆ ಆಫೀಸ್ ಗೆ ಬರ್ತಾನೆ, ನಿನ್ನ ಮನೆ ಪಕ್ಕದ್ದೇ ಆದರೂ ನೀನು ದೀನಾ ಲೇಟ್. ಇದು ದೊಡ್ಡ ತಮಾಷೆ “
ನಸ್ರುದ್ದೀನ್ ನ ಬಾಸ್ ದಬಾಯಿಸುತ್ತಿದ್ದರು .
“ ಇದರಲ್ಲಿ ತಮಾಷೆ ಏನಿಲ್ಲ ಬಾಸ್. ಆಸೀಫ್ ಗೆ ಲೇಟ್ ಆದರೆ ಅವ ಓಡುತ್ತ ಆಫೀಸ್ ಗೆ ಬರಬಹುದು ಆದರೆ ನನಗೆ ಲೇಟ್ ಆದರೆ ನಾನು ಓಡಲು ಶುರು ಮಾಡುವಷ್ಟರಲ್ಲಿ ಆಫೀಸಿನಲ್ಲಿರುತ್ತೇನೆ. ನನ್ನ ಮನೆ ಪಕ್ಕದೇ. ಇದು ನನ್ನ ಡಿಸ್ಅಡ್ವಾಂಟೇಜ್, ನಾನೇನು ಮಾಡಲಿ? “
ನಸ್ರುದ್ದೀನ್, ತನ್ನ ಸಮಜಾಯಿಷಿ ನೀಡಿದ.
********************************

