ಆಧ್ಯಾತ್ಮಿಕ ವಿಜ್ಞಾನದ ಮಹಾ ರಹಸ್ಯವೆಂದರೆ, ಸಂಗತಿಯೊಂದನ್ನು ಮಾಡದೇ, ಆಗಲು ಅವಕಾಶ ಮಾಡಿ ಕೊಡುವುದು. ಹೀಗೆ ಸಂಗತಿಗಳನ್ನು ಮಾಡದೇ, ಆಗಲು ಅವಕಾಶ ಮಾಡಿಕೊಡುವುದಕ್ಕೆ ಅಪಾರ ತಿಳುವಳಿಕೆ ಮತ್ತು ಅರಿವು ಅತ್ಯಗತ್ಯ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಅಧಿಕಾರ ಚಲಾಯಿಸುವ ಹುಕಿ ಇಲ್ಲದಿರುವುದರಿಂದ
ಸಂತ ಭಾರಿ ಶಕ್ತಿಶಾಲಿ.
ಸದಾ ಅಧಿಕಾರದ ಚಿಂತೆ ಮಾಡುತ್ತಾರಾದ್ದರಿಂದ
ಸಾಮಾನ್ಯರು ನಿರಂತರ ವಂಚಿತರು.
ಸಂತ ಏನೂ ಮಾಡುವುದಿಲ್ಲವಾದರೂ
ಮಾಡಲು ಏನೂ ಉಳಿದಿರುವುದಿಲ್ಲ.
ಸಾಮಾನ್ಯರು ಸದಾ ಕೆಲಸದಲ್ಲಿ ನಿರತರಾದರೂ
ಮಾಡುವುದು ಮುಗಿಯುವುದೇ ಇಲ್ಲ.
ಅಂತಃಕರುಣಿ ಏನೋ ಮಾಡುತ್ತಾನಾದರೂ
ಏನೋ ಮಾಡುವುದು ಉಳಿದುಹೋಗಿರುತ್ತದೆ.
ನ್ಯಾಯವಂತ ಎಷ್ಟೋ ಮಾಡುತ್ತಾನಾದರೂ
ಎಷ್ಟೋ ಹಾಗೆಯೇ ಉಳಿಸಿರುತ್ತಾನೆ.
ಆಚಾರವಂತರು ಅಷ್ಟಿಷ್ಟು ಮಾಡುತ್ತಾರಾದರೂ
ಜನ ತಲೆದೂಗದಿದ್ದಾಗ, ತೋಳು ಮೇಲೇರಿಸುತ್ತಾರೆ.
ತಾವೋ ಮರೆಯಾದಾಗ ನ್ಯಾಯ ಉಳಿದುಕೊಳ್ಳುತ್ತದೆ.
ನ್ಯಾಯ ಮರೆಯಾದಾಗ ನೈತಿಕತೆ ಹುಟ್ಟಿಕೊಳ್ಳುತ್ತದೆ.
ನೈತಿಕತೆ ಮರೆಯಾದಾಗ ಆಚರಣೆಯ ಮರವಣಿಗೆ.
ಆಚರಣೆ, ನಂಬಿಕೆಯ ಹೊಟ್ಟು
ಅರಾಜಕತೆಯ ಆರಂಭ.
ಅಂತೆಯೇ ಸಂತನಿಗೆ
ಮೇಲ್ನೋಟಕ್ಕಿಂತ ಒಳನೋಟದಲ್ಲಿ ಆಸಕ್ತಿ.
ಹೂವಿಗಿಂತ ಹಣ್ಣಿನ ಬಗ್ಗೆ ಆಸ್ಥೆ.
ಸ್ವಂತ ಅಭಿಪ್ರಾಯಗಳಿಗಿಂತ
ನಿಜ ಸ್ಥಿತಿಯ ಮೇಲೆ ಹೆಚ್ಚು ಗಮನ.
ಅಂತೆಯೇ ಸಂತ
ಎಲ್ಲ ಭ್ರಮೆಗಳಿಂದ ಮುಕ್ತ.
~ ಲಾವೋತ್ಸೇ
ನಮ್ಮ ಕಡೆಯಿಂದ ಯಾವ ಮಾಡುವಿಕೆಗೆ ಅವಕಾಶ ಇರಬಾರದು, ಏಕೆಂದರೆ ಈ ಮಾಡುವಿಕೆಯಲ್ಲಿ ನಮ್ಮ ಗೊಂದಲಮಯ ಮೈಂಡ್ ಭಾಗವಹಿಸುತ್ತಿರುತ್ತದೆ. ಹೀಗೆ ಮಾಡಿದ್ದು ಆಳವಾಗಿ ಇರುವುದು ಸಾಧ್ಯವಿಲ್ಲ ಏಕೆಂದರೆ ನಮ್ಮ ಮೈಂಡ್ ನ ಆಳ ತೀರ ಕಡಿಮೆ.
ಹೀಗೆ ಗಮನಿಸುವುದರಿಂದ, ಮತ್ತು ಈ ಕುರಿತು ತಿಳುವಳಿಕೆಯನ್ನು ಹೊಂದುವುದರಿಂದ, ಹೊಸದೊಂದು ಅಪ್ರೋಚ್ ಸಾಧ್ಯವಾಗುತ್ತದೆ – the approach of letting go. ಅಧ್ಯಾತ್ಮಿಕ ವಿಜ್ಞಾನದ ಮಹಾ ರಹಸ್ಯವೆಂದರೆ, ಸಂಗತಿಯೊಂದನ್ನು ಮಾಡದೇ, ಆಗಲು ಅವಕಾಶ ಮಾಡಿ ಕೊಡುವುದು. ಹೀಗೆ ಸಂಗತಿಗಳನ್ನು ಮಾಡದೇ, ಆಗಲು ಅವಕಾಶ ಮಾಡಿಕೊಡುವುದಕ್ಕೆ ಅಪಾರ ತಿಳುವಳಿಕೆ ಮತ್ತು ಅರಿವು ಅತ್ಯಗತ್ಯ. ಮೈಂಡ್ ಗೆ ನಿರಂತರವಾಗಿ ಹಸ್ತಕ್ಷೇಪ ಮಾಡುವ ಹುಕಿ. ಅದು ತನ್ನ ಬಯಕೆಗಳೊಂದಿಗೆ ಆಗಮಿಸುತ್ತದೆ ಮತ್ತು ಅದು ಸಂಗತಿಗಳು ತನ್ನ ಬಯಕೆಗಳಂತೆ ನಡೆಯಬೇಕೆಂದು ಬಯಸುತ್ತದೆ. ಇದು ಎಲ್ಲ ಸಮಸ್ಯೆಯ ಮೂಲ. ನಾವುಗಳು ಈ ಮಹಾ ಅಸ್ತಿತ್ವದ ಸಣ್ಣ ಸಣ್ಣ ತುಣುಕುಗಳು ಮಾತ್ರ. ವಿಷಯ ಹೀಗಿರುವಾಗ ನಮ್ಮ ಐಡಿಯಾಗಳ ಮೂಲಕವೇ ಎಲ್ಲ ನಡೆಯಬೇಕೆನ್ನುವುದು ಮೂರ್ಖತನ. ಇಡಿಯಟ್ ಎನ್ನುವ ಪದದ ಅರ್ಥವೇ ಇದು – ತನ್ನದೇ ಆದ ಐಡಿಯಾವನ್ನು ಹೊಂದುವುದು ಮತ್ತು ಅದನ್ನು ಎಲ್ಲದರ ಮೇಲೆ ಹೇರುವುದು.
ಇದು ಹೇಗೆಂದರೆ ಅಪಾರ ಸಮುದ್ರದಲ್ಲಿ ಅಲೆಯೊಂದು ತನ್ನ ಮನಸಿಗೆ ಬಂದಂತೆ ನಡೆದುಕೊಳ್ಳಲು ಬಯಸುವಂತೆ. ಈ ಅಲೆ, ಅಪಾರ ಸಮುದ್ರದ ಒಂದು ಸಣ್ಣ ಭಾಗ ಮಾತ್ರ. ಅದು ಸಮುದ್ರದ ಮೇಲೆ ಅವಲಂಬಿತವಾಗಿದೆ ಮತ್ತು ಆಗಿಲ್ಲ ಕೂಡ. ಏಕೆಂದರೆ ಇದು ಸಮುದ್ರದಿಂದ ಹೊರತಾಗಿಲ್ಲ. ಹಾಗೆ ನೋಡಿದರೆ ಈ ಅಲೆಗೆ ಸ್ವಂತ ಅಸ್ತಿತ್ವವೇ ಇಲ್ಲ ಅದು ಸಮುದ್ರದ ಅಭಿವ್ಯಕ್ತಿ ಮಾತ್ರ. ನಾವು ಕೂಡ ಹಾಗೆಯೇ. ಇದು ನಮಗೆ ಅರ್ಥವಾದರೆ ನಾವು ಎಲ್ಲ ಆತಂಕಗಳಿಂದ ಮುಕ್ತರಾಗುತ್ತೇವೆ. ಆಗ ನಮಗೆ ಯಾವ ಗುರಿಯೂ ಇಲ್ಲ, ನಾವು ಎಲ್ಲೂ ಹೋಗಬೇಕಿಲ್ಲ, ಏನೂ ಆಗಬೇಕಿಲ್ಲ. ಆಗ ವಿಫಲತೆಯ, ಹತಾಶೆಯ ಯಾವ ಸಾಧ್ಯತೆಯೂ ಇಲ್ಲ. ಆಗ ಒಂದು ಮಹಾ ಪ್ರಶಾಂತತೆ ನಮ್ಮೊಳಗೆ ನೆಲೆಯಾಗುವುದು…. ಇದು ಸಂಪೂರ್ಣ ಶರಣಾಗತಿಯ ಅರ್ಥ; ಮಹಾ ನಂಬಿಕೆಯ ಅರ್ಥ. ಆಗ ಬದುಕು ಸಂಪೂರ್ಣ ಹೊಸ ಬಣ್ಣವನ್ನು ಹೊಂದುತ್ತದೆ. ಆಗ ಎಲ್ಲ ಒತ್ತಡಗಳಿಂದ ಹೊರತಾದ, ಸಂಪೂರ್ಣ ಪ್ರಶಾಂತತೆಯ, ಸಮಾಧಾನದ ಬದುಕು ಸಾಧ್ಯ.

