ಎಲ್ಲ ಅಧ್ಯಾತ್ಮಿಕ ಸೀಕರ್ ಗಳ ಸಮಸ್ಯೆಯೇ ಇದು : ಒಮ್ಮಿಲ್ಲ ಒಮ್ಮೆ ಮೈಂಡ್ ತನ್ನ ತಂತ್ರಗಳನ್ನು ಪ್ರಯೋಗಿಸಲಾರಂಭಿಸುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾರೋ ಒಬ್ಬರಿಗೆ ಬೆಳಕು ಕಾಣಿಸಿದರೆ, ಇನ್ಯಾರಿಗೋ ಸದ್ದು ಕೇಳಿಸುತ್ತದೆ, ಮತ್ತ್ಯಾರಿಗೋ ವಿಚಿತ್ರ ಅನುಭವವಾಗುತ್ತದೆ. ಆಗ ಅಹಂ ಹೇಳುತ್ತದೆ, “ ಇದು ಮಹತ್ವದ ಅನುಭವ, ಇದು ಕೇವಲ ನಿನಗೆ ಮಾತ್ರ ಆಗುತ್ತಿದೆ. ಇದು ಅಪರೂಪ . ನೀವು ವಿಶೇಷ ವ್ಯಕ್ತಿಯಾಗಿರುವುದರಿಂದ ನಿನಗೆ ಈ ಅನುಭವಗಳಾಗುತ್ತಿವೆ”. ಆಗ ನೀವು ನಿಮ್ಮ ಮೈಂಡ್ ನ ಜೊತೆ ಸಹಕರಿಸಲು ಶುರು ಮಾಡುತ್ತೀರಿ.
ಈ ಕುರಿತು ಯಾವ ಗಮನವನ್ನು ನೀಡಬೇಡಿ, ಸುಮ್ಮನೇ ನಿರ್ಲಕ್ಷ್ಯ ಮಾಡಿ! ಈ ಎಲ್ಲದರಿಂದ ನಾವು ಸಂಪೂರ್ಣವಾಗಿ ಖಾಲೀ ಆಗಬೇಕು. ಅಧ್ಯಾತ್ಮಿಕ ಎನ್ನಬಹುದಾದ ಏಕೈಕ ಅನುಭವವೆಂದರೆ ಅದು ಶೂನ್ಯದ ( nothingness ) ಅನುಭವ, ಖಾಲೀತನದ ಅನುಭವ, ಯಾವುದನ್ನ ಸೂಫಿಗಳು ಫನಾ ಎನ್ನುತ್ತಾರೆಯೋ, ಅಹಂ ಮಾಯವಾಗುವಿಕೆಯ ಆ ಅನುಭವ. ಕೇವಲ ಇದು ಮಾತ್ರ ಅಧ್ಯಾತ್ಮಿಕ ಅನುಭವ ಬಾಕಿ ಎಲ್ಲವೂ ಮೈಂಡ್ ನ ಟ್ರಿಕ್ ಗಳು. ಮೈಂಡ್ ಹಲವಾರು ತಂತ್ರಗಳನ್ನು ಹೂಡುತ್ತದೆ. ಹಲವು ಭ್ರಮಾತ್ಮಕ ಅನುಭವಗಳನ್ನು ಸಾಧ್ಯ ಮಾಡುತ್ತದೆ. ಬುದ್ಧ ಅಥವಾ ಕ್ರಿಸ್ತ ನಿಮಗೆ ಕಾಣತೊಡಗುತ್ತಾರೆ. ಮೈಂಡ್ ಗೆ ತೆರೆದ ಕಣ್ಣುಗಳಿಂದಲೂ ಕನಸು ಕಾಣುವ ಸಾಮರ್ಥ್ಯವಿದೆ. ಜೀಸಸ್ ನಿಮ್ಮ ಕಣ್ಣ ಮುಂದೆ ನಿಂತಿರುವಾಗ ನಂಬದಿರುವುದು ಹೇಗೆ ಸಾಧ್ಯ? ಆದರೆ ಜೀಸಸ್ ಅಲ್ಲಿ ಇಲ್ಲ, ಇದು ಕೇವಲ ನಿಮ್ಮ ಮೈಂಡ್ ನ ಪ್ರೊಜೆಕ್ಷನ್.
ಆದ್ದರಿಂದಲೇ ಝೆನ್ ಮಾಸ್ಟರ್ ಗಳು ಹೇಳೋದು, “ ಎಲ್ಲಾದರೂ ನಿಮಗೆ ಬುದ್ಧ ಕಾಣಿಸಿದರೆ, ಮೊದಲು ಅವನನ್ನು ಕೊಲ್ಲಿ”. ಅವರು ಹೇಳೋದು ಸಂಪೂರ್ಣ ಸತ್ಯ. ಕಂಡರೆ ಬುದ್ಧನನ್ನು ಕೊಂದುಬಿಡಿ ಎಂದು ಹೇಳೋದು ಅಧಾರ್ಮಿಕ, ಬುದ್ಧನಿಗೆ ಮಾಡುವ ಅಗೌರವ ಎಂದು ಅನಿಸಬಹುದು. ಆದರೆ ಇದು ನಿಜ. ದಾರಿಯಲ್ಲಿ, ಬುದ್ಧ ಅಥವಾ ಜೀಸಸ್ ಅಥವಾ ಮೊಹಮ್ಮೊದ್ ಕಾಣಬಹುದು ಆದರೆ ಇದು ಪಾಯಿಂಟ್ ಅಲ್ಲ. ಬಾಲ್ಯದಿಂದ ಕಂಡೀಷನ್ ಗೆ ಒಳಪಟ್ಟಿರುವ ಸಂಗತಿಗಳು ನಿನಗೆ ದಾರಿಯಲ್ಲಿ ಹಲವಾರು ಕಾಣಬಹುದು. ಮಹಾ ಅಧ್ಯಾತ್ಮಿಕ ಸಾಧಕರು, ಟಿಬೇಟಿಯನ್ ಲಾಮಾಗಳು ನಿಮ್ಮ ಎದುರಿಗೆ ಬಂದಾಗ ನಿಮಗೆ ಯಾವುದೋ ಮಹಾ ಅನುಭವ ಆದ ಹಾಗೆ ಅನಿಸಬಹುದು. ಮತ್ತು ನಿಮ್ಮನ್ನ ಮೂರ್ಖರು ಈ ಕಾರಣಕ್ಕಾಗಿ ಬೆಂಬಲಿಸಬಹುದು, ನಿಮ್ಮ ಅಪರೂಪದ ಅನುಭವಕ್ಕಾಗಿ ಅವರು ನಿಮಗೆ ಶರಣಾಗಬಹುದು. ಆದರೆ ಈ ಯಾವುದನ್ನೂ ನಂಬಬೇಡಿ.
ಝೆನ್ ಆಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಇಬ್ಬರು ಸನ್ಯಾಸಿಗಳು ತಮ್ಮ ಮುಂದಿನ ಸಾಧನೆಗಾಗಿ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಂಡು ಬೇರೆ ಬೇರೆ ದಿಕ್ಕುಗಳಲ್ಲಿ ಪ್ರಯಾಣ ಬೆಳೆಸಿದರು.
ಹಿರಿಯ ಸನ್ಯಾಸಿ, ತಂತ್ರ ಸಾಧನೆಯಲ್ಲಿ ತನ್ನನ್ನು ತಾನು ತೀವ್ರವಾಗಿ ತೊಡಗಿಸಿಕೊಂಡು ವಿಶೇಷ ಅತೀಂದ್ರಿಯ ಶಕ್ತಿಗಳನ್ನು ಪಡೆದುಕೊಂಡ.
ಕಿರಿಯ ಸನ್ಯಾಸಿ ಸಹಜ ಕೃಷಿಯಲ್ಲಿ ತೊಡಗಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದ.
ಇಬ್ಬರೂ ಸನ್ಯಾಸಿಗಳು ಹಳೆಯ ಆಶ್ರಮಕ್ಕೆ ಹೋಗಿ ಗುರುಗಳನ್ನು ಭೇಟಿಯಾಗಿ ತಮ್ಮ ತಮ್ಮ ಸಾಧನೆಗಳ ಬಗ್ಗೆ ಗುರುಗಳಿಗೆ ತಿಳಿಸಬೇಕೆಂದು ನಿಶ್ಚಯಿಸಿದರು.
ಆಶ್ರಮ ಮಾರ್ಗವಾಗಿ ಹೋಗುತ್ತಿದ್ದಾಗ, ಸನ್ಯಾಸಿಗಳಿಗೆ ಒಂದು ತುಂಬಿ ಹರಿಯುತ್ತಿದ್ದ ನದಿ ಎದುರಾಯಿತು. ನದಿ ದಾಟುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ದೋಣಿಯೊಂದು ದಂಡೆಗೆ ಬಂತು.
ಹಿರಿಯ ಸನ್ಯಾಸಿ ತನ್ನ ತಂತ್ರ ಶಕ್ತಿಯನ್ನು ಬಳಸಿ, ನಾವಿಕನಿಗೆ ಮಂಕು ಕವಿಸಿ ದೋಣಿ ಎತ್ತಿಕೊಂಡು ಕ್ಷಣಾರ್ಧದಲ್ಲಿ ಆಚೆ ದಡ ಸೇರಿದ.
ಕಿರಿಯ ಸನ್ಯಾಸಿ, ಕೊಂಚ ಹೊತ್ತು ಕಾಯ್ದು, ಇನ್ನೊಂದು ದೋಣಿಯಲ್ಲಿ ಆಚೆ ದಡ ಸೇರಿದ. ದಡ ಸೇರಿದ ಮೇಲೆ ನಾವಿಕನಿಗೆ ಒಂದು ರೂಪಾಯಿ ಬಾಡಿಗೆ ಕೊಟ್ಟ.
ಸನ್ಯಾಸಿಗಳು ಮಾತನಾಡಿಕೊಳ್ಳುತ್ತ ತಮ್ಮ ಮುಂದಿನ ದಾರಿ ಕ್ರಮಿಸತೊಡಗಿದರು.
ಹಿರಿಯ ಸನ್ಯಾಸಿ : ನೀನು ಸಮಯವನ್ನೆಲ್ಲ ಹಾಳು ಮಾಡಿಕೊಂಡುಬಿಟ್ಟೆ. ನಿನ್ನ ಕಂಡರೆ ನನಗೆ ಅನುಕಂಪ. ನಾನು ನೋಡು ತಂತ್ರ ಸಾಧನೆ ಮಾಡಿ ಎಷ್ಟು ಅತೀಂದ್ರಿಯ ಶಕ್ತಿಗಳನ್ನು ಗಳಿಸಿದ್ದೇನೆ.
ಕಿರಿಯ ಸನ್ಯಾಸಿ : ಅಯ್ಯೋ ! ನಾನು ನೋಡಲಿಲ್ವಾ, ಒಂದು ರೂಪಾಯಿ ಬೆಲೆ ಬಾಳುವ ತಂತ್ರ ಶಕ್ತಿಗಳಿಗಾಗಿ ನೀನು ಇಷ್ಟು ಸಮಯ ವ್ಯರ್ಥ ಮಾಡಿದ್ದೀಯಲ್ಲಾ ನನಗೆ ಆಶ್ಚರ್ಯವಾಗುತ್ತಿದೆ.

