ಒಳಗನ್ನು ನಿರ್ಲಕ್ಷಿಸುವುದೆಂದರೆ ಸದಾ ಅಜ್ಞಾನಿಗಳಾಗಿಯೇ ಉಳಿಯುವುದು. ಒಳಗನ್ನು ನಿರ್ಲಕ್ಷಿಸದೇ ಇರುವುದೇ ತಿಳುವಳಿಕೆಯ ಶುರುವಾತು. ಈ ಅಜ್ಞಾನ ಎನ್ನುವ ಪದ ನನಗೆ ಬಹಳ ಇಷ್ಟ. ಇದರ ಅರ್ಥವೇ ಏನೋ ಒಂದನ್ನು ನಿರ್ಲಕ್ಷಿಸಲಾಗಿದೆ ಎಂದು, ಏನೋ ಒಂದನ್ನು ಬೈಪಾಸ್ ಮಾಡಲಾಗಿದೆ ಎಂದು, ಅದನ್ನು ನೀವು ಗಣನೆಗೆ ತೆಗೆದುಕೊಂಡಿಲ್ಲ ಎಂದು… ~ ಓಶೋ ರಜನೀಶ್; ಕನ್ನಡಕ್ಕೆ; ಚಿದಂಬರ ನರೇಂದ್ರ
ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವುದನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಹೊಸ ಬಾಗಿಲೊಂದು
ತೆರೆದುಕೊಳ್ಳುತ್ತದೆ ತಾನೇ ತಾನಾಗಿ .
ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ಸ್ವಾಗತಿಸು ತೋಳು ಚಾಚಿ,
ಅವನು ತನ್ನ ಜೊತೆಗೆ ತಂದ ಯಾತನೆಗಳ
ಪಕ್ಕೆ ಹಿಂಡಿ ತಮಾಷೆ ಮಾಡು.
ದುಃಖಗಳು,
ಚಿಂದಿ ಬಟ್ಟೆಯ ಕೌದಿಯ ಹಾಗೆ
ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.
ಈ ಕಳಚುವಿಕೆ ಮತ್ತು
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ
ಒದಗಿ ಬರುವ ಅಮೃತದ ಹನಿಗಳು
~ ರೂಮಿ
ಏನೋ ಒಂದು ಇದೆ – ಅದು ಯಾವಾಗಲೂ ಇದೆ — ಆದರೆ ನಿಮಗೆ ಆ ಬಗ್ಗೆ ನಿರ್ಲಕ್ಷ. ಬಹುಶಃ ಅದು ಯಾವಾಗಲೂ ಅಲ್ಲಿಯೇ ಇರುವುದರಿಂದ ಅದನ್ನು ನಿರ್ಲಕ್ಷಿಸುವುದು ಬಹಳ ಸುಲಭ. ನಾವು ಯಾವಾಗಲೂ ಇರುವುದನ್ನ ನೆಗ್ಲೆಕ್ಟ್ ಮಾಡುತ್ತೇವೆ ; ನಾವು ಯಾವಾಗಲೂ ಹೊಸದನ್ನು ಗಮನಿಸುತ್ತೇವೆ, ಏಕೆಂದರೆ ಹೊಸತು ಬದಲಾವಣೆಗೆ ಕಾರಣವಾಗುತ್ತದೆ. ತನ್ನ ಸುತ್ತ ಏನೂ ಓಡಾಡದಿರುವಾಗ ನಾಯಿ ಕುಳಿತಲ್ಲಿಯೇ ಬಹುಕಾಲ ಕುಳಿತುಕೊಳ್ಳಬಲ್ಲದು – ವಿಶ್ರಾಂತಿ ತೆಗೆದುಕೊಳ್ಳಬಲ್ಲದು – ಕನಸು ಕಾಣಬಲ್ಲದು. ಅದರ ಸುತ್ತ ಏನೋ ಒಂದು ಮೂವ್ ಆದರೂ ಅದು ತಕ್ಷಣ ಜಾಗೃತವಾಗುತ್ತದೆ. ಒಂದು ನಿರ್ಜೀವ ಎಲೆ ಅಲುಗಾಡಿದರೂ ಅದು ಎದ್ದು ನಿಂತು ಕೂಗತೊಡಗುತ್ತದೆ. ನಮ್ಮ ಮೈಂಡ್ ನ ಸ್ಥಿತಿಯೂ ಹೀಗೆಯೇ; ಅದು ಏನಾದರೂ ಸುತ್ತ ಬದಲಾವಣೆಯಾದಾಗ ಮಾತ್ರ ಅಲರ್ಟ್ ಆಗುತ್ತದೆ, ಮುಂದೆ ಮತ್ತೆ ನಿದ್ದೆ ಹೋಗುತ್ತದೆ.
ಮತ್ತು ನಮ್ಮ ಒಳಗಿನ ಸಂಪತ್ತು ಎಂದಿನಿಂದಲೂ ನಮ್ಮ ಬಳಿಯೇ ಇದೆ. ಅದ್ದರಿಂದ ಅದನ್ನು ಇಗ್ನೋರ್ ಮಾಡುವುದು ಬಹಳ ಸುಲಭ; ಹಾಗೆ ಅದನ್ನು ನಿರ್ಲಕ್ಷಿಸುವುದನ್ನ ನಾವು ರೂಢಿ ಮಾಡಿಕೊಂಡು ಬಿಟ್ಟಿದ್ದೇವೆ. ಅಜ್ಞಾನ ಎನ್ನುವ ಪದದ ಅರ್ಥ ಇದು. ಆದ್ದರಿಂದ ನಮ್ಮ ಹುಡುಕಾಟ ಇರುವುದನ್ನ ನಿರ್ಲಕ್ಷಿಸದೇ ಇರುವುದರಿಂದ ಶುರುವಾಗಬೇಕು. ಆಗ ಜಾಗೃತಿ ತಾನೇ ತಾನಾಗಿ ಹುಟ್ಟಿಕೊಳ್ಳುತ್ತದೆ. ಯಾವಾಗ ಪ್ರೇಮ ಜಾಗೃತಗೊಳ್ಳುತ್ತದೆಯೋ, ಆಗ ಬದುಕಿನ ರುಚಿ ವಿಶಿಷ್ಟವಾಗಿರುತ್ತದೆ. ಆಗ ಅದಕ್ಕೆ ಅಮೃತದ, ಅಮರತ್ವದ ರುಚಿ ಪ್ರಾಪ್ತವಾಗುತ್ತದೆ

