ನೋವಿಗೆ ರಕ್ಷಣೆ ಎಂಬಂತೆ ಕೋಪ ಹುಟ್ಟಿಕೊಳ್ಳುತ್ತದೆ, ಯಾರಾದರೂ ನಿಮ್ಮನ್ನು ಹರ್ಟ್ ಮಾಡಿದಾಗ ನಿಮಗೆ ಸಿಟ್ಟು ಬರುತ್ತದೆ ನೀವು ಅನುಭವಿಸುತ್ತಿರುವ ನೋವಿಗೆ ರಕ್ಷಣೆ ಎಂಬಂತೆ. ಆದ್ದರಿಂದ ಪ್ರತಿಯೊಂದು ನೋವು ಕೋಪದಿಂದ ಹತ್ತಿಕಲ್ಪಟ್ಟಿದೆ – ನೋವಿನ ಮೇಲೆ ಕೋಪದ ಹಲವು ಲೇಯರ್ ಗಳು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
***************
ನಮ್ಮ ಆರ್ದ್ರ ಪ್ರೇಮದೊಳಗಿರುವ
ಕೆಲ ಅಪರೂಪದ ಕ್ಷಣಗಳನ್ನು ಕಂಡು,
ಸ್ವರ್ಗಕ್ಕೂ ಹೊಟ್ಟೆಕಿಚ್ಚಾಗುತ್ತದಂತೆ.
ಭೂಮಿಯ ಮೇಲೆ ನಾವು ಮಾಡುವ
ಪ್ರೇಮದ ರೀತಿ ಅಷ್ಟು ಅನನ್ಯ.
ಮನುಷ್ಯನ ನೋವನ್ನು ಅರಿಯುವ ಎದೆಗಳಿಗಾಗಿ
ತಮ್ಮ ಬದುಕನ್ನೇ ಮಾರಲು ಸಿದ್ಧರಾಗಿರುವ
ಕೆಲ ದೇವರುಗಳಿದ್ದಾರಂತೆ
ಸ್ವರ್ಗದಲ್ಲಿ.
ಅವರಿಗೆ ಚೆನ್ನಾಗಿ ಗೊತ್ತು
ನಮ್ಮ ನೋವುಗಳು ಒಂದು ದಿನ
ನಮ್ಮನ್ನು ಕರೆದೊಯ್ಯುತ್ತವೆ ಅವರಿಗಿಂತಲೂ
ಹೆಚ್ಚು ಎತ್ತರಕ್ಕೆ.
– ಹಾಫಿಜ್ .
ಕೋಪದ ಮೇಲೆ ನಿಮ್ಮ ಕೆಲಸ ನಿರಂತರವಾಗಿ ಮುಂದುವರೆಯಲಿ, ಆಗ ಒಮ್ಮೆ ಥಟ್ಟನೇ ಯಾವುದು ಕ್ಷಣದಲ್ಲಿ ಕೋಪ ಮಾಯವಾಗಿಬಿಡುತ್ತದೆ. ಆಗ ನಿಮ್ಮಲ್ಲಿ ನೋವು ಇರುತ್ತದೆ ಸಿಟ್ಟು ಅಲ್ಲ. ವಾತಾವರಣ ಕೋಪದಿಂದ ದುಃಖಕ್ಕೆ ಶಿಫ್ಟ್ ಆಗುತ್ತದೆ. ಆಗ ನೀವು ನೋವಿಗೆ ಹತ್ತಿರವಾಗುತ್ತೀರಿ ಮತ್ತು ಯಾವುದೇ ಕ್ಷಣದಲ್ಲಿ ನೋವು ಚಿಮ್ಮಬಹುದು.
ಇದು ಬಾವಿಯನ್ನು ಕಟ್ಟಲು ನೆಲವನ್ನು ತೋಡುತ್ತ ಹೋದಂತೆ. ಮೊದಲು ನಾವು ಮಣ್ಣು ತೆಗೆಯಬೇಕು ನಂತರ ಕಲ್ಲುಗಳ ಹಲವಾರು ಪದರುಗಳನ್ನ, ಆಮೇಲೆ ನೀರು ಕಾಣಿಸಿಕೊಳ್ಳುತ್ತದೆ. ಮೊದಲು ಅದು ಸ್ವಚ್ಛ ನೀರಲ್ಲ, ಅದು ರಾಡಿ ನೀರು; ಮುಂದೆ ಇನ್ನೂ ನೆಲ ಅಗೆದಂತೆಲ್ಲ ಸ್ವಚ್ಛ ನೀರಿನ ಸೆಲೆ ಕಾಣಿಸಿಕೊಳ್ಳುತ್ತದೆ. ಮೊದಲು ಕೋಪ ಕಾಣಿಸಿಕೊಳ್ಳುತ್ತದೆ, ಇದಕ್ಕೆ ನೆಲಕ್ಕೆ ಇರುವಂತೆ ಹಲವಾರು ಪದರುಗಳಿವೆ. ನಂತರ ರಾಡಿ ನೀರಿನಂತೆ ದುಃಖ ಕಾಣಿಸಿಕೊಳ್ಳುತ್ತದೆ, ನಂತರ ನೋವು – ಸ್ವಚ್ಛ ನೀರಿನ ಸೆಲೆಯಂತೆ, ಶುದ್ಧ ನೋವು. ಹಾಗು ಶುದ್ಧ ನೋವು ಬಹಳ ಸುಂದರವಾದದ್ದು, ಏಕೆಂದರೆ ಅದು ನಿಮಗೆ ಇನ್ನೊಂದು ಹುಟ್ಟನ್ನು ಸಾಧ್ಯ ಮಾಡುತ್ತದೆ.
********************************
ಕೋಪ ಮತ್ತು ನೋವು ( Anger & Pain ): ಓಶೋ 365 #Day 273

