ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಚಳಿಗಾಲದಲ್ಲಿ
ತುಂಬ ಆಯಾಸ ಮಾಡಿಕೊಳ್ಳುವುದು
ನನ್ನ ಅತ್ಯಂತ ಕೆಟ್ಟ ಚಟ.
ಅಪಾರ ಹಿಂಸೆಯಾಗುತ್ತೇನೆ ಸಂಗಾತಿಗಳಿಗೆ.
ನೀನು ಜೊತೆಗಿರದೇ ಹೋದರೆ
ಒಂದು ಹುಲ್ಲುಕಡ್ಡಿ ಕೂಡ ಹುಟ್ಟುವುದಿಲ್ಲ.
ಸ್ಪಷ್ಟತೆ ಕಳೆದುಕೊಳ್ಳುತ್ತೇನೆ,
ನನ್ನ ಮಾತುಗಳು
ಒಂದರಲ್ಲೊಂದು ಸಿಕ್ಕಿಹಾಕಿಕೊಂಡು
ಗೊಂದಲದ ಗೂಡಾಗುತ್ತವೆ.
ಕೆಟ್ಟ ನೀರನ್ನು ಶುದ್ಧವಾಗಿಸೋದು ಹೇಗೆ ?
ಮತ್ತೆ ನದಿಗೆ ವಾಪಸ್ಸು ಹರಿಸುವುದರ ಮೂಲಕ.
ಕೆಟ್ಟ ಹವ್ಯಾಸಗಳಿಂದ ಮುಕ್ತರಾಗೋದು ಹೇಗೆ ?
ಮತ್ತೆ ಆ ಹವ್ಯಾಸಗಳನ್ನು ನಿನಗೆ ಹಿಂತಿರುಗಿಸುವುದರ ಮೂಲಕ.
ನೀರು ಮತ್ತೆ
ರೂಢಿಯ ಸುಳಿಗೆ ಸಿಲುಕಿದಾಗ,
ಸುಳಿಯ ಆಳದಿಂದ ಸಮುದ್ರಕ್ಕೆ
ಸುರಂಗ ಕೊರೆಯಬೇಕು.
ಬೇರೆ ಯಾವ ದಾರಿಯಿಲ್ಲದೇ
ಭರವಸೆ ಕಳೆದುಕೊಂಡು
ತುಂಬ ನೋವು ನೀಡುವವರಿಗೆ ಮಾತ್ರ
ಇಲ್ಲೊಂದು ರಹಸ್ಯ ಔಷಧಿ,
ಆಶಾವಾದಿಗಳಿಗೆ ಈ ವಿಷಯ ಗೊತ್ತಾದರೆ
ಇದು ತಮಗೆ ಆದ ಅವಮಾನ ಎಂದು
ಅವರು ಭಾವಿಸಬಹುದು.
ನಿಮಗೆ ಸಾಕಾಗುವಷ್ಟು ಹೊತ್ತು
ನೀವು ಪ್ರೀತಿಸುವ ಗೆಳೆಯನ
ಕಣ್ಣಲ್ಲಿ ಕಣ್ಣಿಟ್ಟು ನೋಡಿ,
ಆ ಗೆಳೆಯ
ನಿಮ್ಮ ಹತ್ತಿರ ಬರುತ್ತಿದ್ದಾನೋ
ಅಥವಾ ನಿಮ್ಮಿಂದ ದೂರ ಹೋಗುತ್ತಿದ್ದಾನೋ
ಎನ್ನುವುದರ ಪರಿವೆಯಿಲ್ಲದೆ.
~ ರೂಮಿ
ತಾವು ಪ್ರೇಮಿಸುತ್ತಿರುವುದಾಗಿ ಬಹಳಷ್ಟು ಜನ ಭಾವಿಸುತ್ತಾರೆ, ಮತ್ತು ಇದು ಅವರ ಮಹಾ ಭ್ರಮೆಯಾಗಿರುತ್ತದೆ – ಎಷ್ಟು ಬೇಗ ಅವರಿಗೆ ಭ್ರಮನಿರಸನವಾಗುತ್ತದೆಯೋ ಅಷ್ಟು ಒಳ್ಳೆಯದು. ಪ್ರೇಮ ಎಷ್ಟು ಅಪರೂಪದ ಸಂಗತಿಯೆಂದರೆ ಅದು ಎಲ್ಲರಿಗೂ ಅಷ್ಟು ಸುಲಭವಾಗಿ ಒದಗಿ ಬರುವುದಿಲ್ಲ. ಇದು ಬುದ್ಧತ್ವದಷ್ಟೇ ಅಪರೂಪದ್ದು, ಅದಕ್ಕಿಂತ ಎಳ್ಳಷ್ಟೂ ಕಮ್ಮಿಯಲ್ಲ.
ಪ್ರೇಮದ ಬಗ್ಗೆ ನಿಮಗೆ ಗೊತ್ತಿಲ್ಲ ಎನ್ನುವ ಒಳನೋಟ ಒಳ್ಳೆಯದು, ಆದರೆ ಇದು ನಿಮ್ಮನ್ನು ದುಗುಡಕ್ಕೆ ದೂಡುತ್ತದೆ, ಇದು ನಿಮಗೆ ಮಂಕು ಕವಿಯುವಂತೆ ಮಾಡುತ್ತದೆ. ಆದರೆ ಈ ಬಗ್ಗೆ ಚಿಂತೆ ಮಾಡಿ, ಕತ್ತಲೆಯ ನಂತರವಷ್ಟೇ ಬೆಳಕು ಮೂಡಿ ಬರುವುದು. ರಾತ್ರಿಯ ಕತ್ತಲು ಎಷ್ಟು ದಟ್ಟವಾಗಿದೆಯೋ ಬೆಳಗು ಅಷ್ಟೇ ಹತ್ತಿರವಾಗಿದೆ. ಯಾವುದನ್ನ ನೀವು ಪ್ರೇಮ ಎಂದುಕೊಂಡಿರುವಿರೋ ಅಂದು ಪ್ರೇಮವಲ್ಲವೆಂದು ಗೊತ್ತಾದಾಗ ನಿಮಗೆ ದುಃಖವಾಗುವುದು.
ಇಲ್ಲಿಯವರೆಗೆ ನೀವು ಕನಸುಗಳಲ್ಲಿ ಮುಳುಗಿ ವಾಸ್ತವದಿಂದ ದೂರವಾಗಿರುವಿರಿ. ಈ ಒಳನೋಟ ನಿಮಗೆ ಗೊತ್ತಾದಾಗ ನೀವು ದುಃಖಿತರಾಗುವಿರಿ, ಬಹುತೇಕ ಜೀವ ಕಳೆದುಕೊಂಡವರಂತೆ. ಈ ಸ್ಥಿತಿಯಿಂದ ಓಡಿ ಹೋಗುವ ಪ್ರಯತ್ನ ಮಾಡಬೇಡಿ. ಈ ಸ್ಥಿತಿಯಲ್ಲಿಯೇ ರಿಲ್ಯಾಕ್ಸ್ ಆಗಿ, ಈ ದುಗುಡ ನಿಮ್ಮನ್ನು ಪೂರ್ತಿಯಾಗಿ ಆವರಿಸಿಕೊಳ್ಳಲಿ, ಮತ್ತು ಆದಷ್ಟು ಬೇಗ ನೀವು ಇದರಿಂದ ಸಂಪೂರ್ಣ ಹೊಸ ಮನುಷ್ಯನಾಗಿ ಹೊರಗೆ ಬರುವಿರಿ.
ಆದರೆ ಮನುಷ್ಯನ ಮನೋಭಾವ, ಹೀಗಾದಂತೆ ನೋಡಿಕೊಳ್ಳುವುದು, ಈ ಸ್ಥಿತಿಯಿಂದ ಓಡಿ ಹೋಗುವಂತೆ ಪುಸಲಾಯಿಸುವುದು. ರೆಸ್ಟೊರೆಂಟ್ ಗೆ, ಅಥವಾ ಸಿನೇಮಾಕ್ಕೆ ಹೋಗುವಂತೆ ಪ್ರೇರೇಪಿಸುವುದು ಅಥವಾ ಗೆಳೆಯರ ಜೊತೆ ಗೂಡಿ ಈ ಸ್ಥಿತಿಯಿಂದ ತಪ್ಪಿಸಿಕೊಳ್ಳಲು ಪ್ರೇರಣೆ ನೀಡುವುದು. ಆದರೆ ನೀವು ತಪ್ಪಿಸಿಕೊಂಡು ಓಡಿ ಹೋದರೆ, ನೀವು ಮುಂದೆ ಸಂಭವಿಸಲಿರುವ ಅಪರೂಪವೊಂದನ್ನು ಮಿಸ್ ಮಾಡಿಕೊಳ್ಳುತ್ತೀರಿ, ಆದ್ದರಿಂದ ನೀವು ಈ ಸ್ಥಿತಿಯಲ್ಲಿಯೇ ರಿಲ್ಯಾಕ್ಸ್ ಆಗಿ.

