ಮೊದಲ ಬಾರಿಗೆ ಮೈಂಡ್ ಧ್ಯಾನಸ್ಥವಾದಾಗ, ಪ್ರೇಮ ಅದಕ್ಕೆ ಬಂಧನ ಅನಿಸುತ್ತದೆ. ಒಂದು ರೀತಿಯಲ್ಲಿ ನೋಡಿದರೆ ಇದು ಸರಿ ಏಕೆಂದರೆ ಧ್ಯಾನಸ್ಥವಲ್ಲದ ಮೈಂಡ್ ಗೆ ಪ್ರೇಮದಲ್ಲಿ ಇರುವುದು ಸಾಧ್ಯವಾಗುವುದಿಲ್ಲ. ಈ ಪ್ರೇಮ ಸುಳ್ಳು ಮತ್ತು ಭ್ರಮಾತ್ಮಕ. ಇದು ಪ್ರೇಮಕ್ಕಿಂತ ವ್ಯಾಮೋಹ ಹೆಚ್ಚು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸಾವಿರಾರು ಜೀವಗಳನ್ನು
ತುದಿಗಾಲಿನಲ್ಲಿ ನಿಲ್ಲಿಸಿರುವ
ನಿನ್ನ ಕಣ್ಣುಗಳು
ನನಗಂತೂ ಒಂದು ನಿಗೂಢ ರಹಸ್ಯ.
ನಿನ್ನ ಆ ಉದ್ದನೆಯ ಕೂದಲಲ್ಲಿ
ಎಂಥ ಅಂತಃಕರಣವಿದೆ.
ನಿನ್ನ ಮುಖ ನೋಡಿದರೆ ಸಾಕು
ಆಹ್ !! ಅಚ್ಚರಿಗೊಳಗಾಗುತ್ತದೆ ಕಣ್ಣು.
ಒಂದು ಸ್ಪಷ್ಟತೆಯನ್ನು
ಎಷ್ಟೆಲ್ಲ ಸುಳ್ಳುಗಳಿಂದ ಶೃಂಗರಿಸಿ
ಪ್ರದರ್ಶನಕ್ಕಿಟ್ಟಿದ್ದಾರೆ ನೋಡಿ.
– ರೂಮಿ.
ವಾಸ್ತವ ಸಂಭವಿಸದ ಹೊರತು, ಸುಳ್ಳು ಪ್ರೇಮವನ್ನು ಹೋಲಿಸುವಂಥ ಸಂಗತಿ ಬೇರೆ ಯಾವುದೂ ಇಲ್ಲ. ಆದ್ದರಿಂದ ಧ್ಯಾನ ಶುರುವಾದಾಗ, ಭ್ರಮಾತ್ಮಕ ಪ್ರೇಮ ಚದುರುತ್ತ ಹೋಗಿ ಕೊನೆಗೆ ಮಾಯವಾಗುತ್ತದೆ. ಇದರಿಂದ ಬೇಸರ ಮತ್ತು ಅಸಂತುಷ್ಟಿಯನ್ನು ಶಾಶ್ವತವಾಗಿ ಬೆಳೆಸಿಕೊಳ್ಳಬೇಡಿ.
ಸೃಜನಶೀಲ ವ್ಯಕ್ತಿ ಧ್ಯಾನ ಮಾಡಿದಾಗ, ಆ ಸಮಯದ ಮಟ್ಟಿಗೆ ಅವರ ಎಲ್ಲ ಸೃಜನಶೀಲತೆ ಮಾಯವಾಗುತ್ತದೆ. ನೀವು ಪೇಂಟರ್ ಆಗಿದ್ದರೆ, ಥಟ್ಟನೇ ನೀವು ಪೇಂಟಿಂಗ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ನೀವು ಮುಂದುವರೆದಾಗ ನಿಧಾನವಾಗಿ ನಿಮ್ಮ ಸಾಮರ್ಥ್ಯ ಮತ್ತು ಉತ್ಸಾಹದಲ್ಲಿ ಕೊರತೆ ಕಂಡು ಬರುತ್ತದೆ. ನೀವು ಕವಿಯಾಗಿದ್ದರೆ ನಿಮ್ಮ ಕವಿತೆ ನಿಂತು ಹೋಗುತ್ತದೆ, ನೀವು ಪ್ರೇಮದಲ್ಲಿದ್ದರೆ, ನಿಮ್ಮ ಸಾಮರ್ಥ್ಯ ಮಾಯವಾಗುತ್ತದೆ. ಸಂಬಂಧದಲ್ಲಿ ಮುಂದುವರೆಯಲು ನೀವು ಫೋರ್ಸ್ ಮಾಡಿದಾಗ, ಇಂಥ ಒತ್ತಡ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಆಗ ನೀವು ದ್ವಂದ್ವಾತ್ಮಕ ಸಂಗತಿಗೆ ಮುಂದಾಗುತ್ತೀರಿ : ಒಂದು ಬದಿಯಲ್ಲಿ ಮುಂದುವರೆಯಲು ಪ್ರಯತ್ನ ಮಾಡುತ್ತಿದ್ದರೆ ಇನ್ನೊಂದು ಬದಿಯಲ್ಲಿ ಅದರಿಂದ ಹೊರ ಬರಲು ಯತ್ನಿಸುತ್ತಿದ್ದೀರಿ. ಇದು ಹೇಗೆಂದರೆ ನೀವು ಕಾರ್ ಡ್ರೈವ್ ಮಾಡುತ್ತಿರುವಾಗಲೇ ಏಕಕಾಲದಲ್ಲಿ accelerator ಮತ್ತು brake ಮೇಲೆ ಕಾಲಿಡುತ್ತಿದ್ದೀರಿ. ಇದು ಅಪಾಯಕಾರಿ ಏಕೆಂದರೆ ನೀವು ಎರಡು ವಿರುದ್ಧ ಸಂಗತಿಗಳನ್ನು ಏಕಕಾಲದಲ್ಲಿ ಮಾಡುತ್ತಿದ್ದೀರಿ.
ಧ್ಯಾನ, ಕೇವಲ ಸುಳ್ಳು ಪ್ರೇಮದ ವಿರುದ್ಧ ಇರುವಂಥದು. ಸುಳ್ಳು ಮಾಯವಾಗುತ್ತದೆ ಮತ್ತು ಅದೊಂದು ಮಾತ್ರ ಸತ್ಯ ಹಾಜರಾಗಲು ಕಾರಣ. ಸುಳ್ಳು ಹೋಗಲೇ ಬೇಕು, ಸುಳ್ಳು ನಿಮ್ಮಿಂದ ಪೂರ್ತಿಯಾಗಿ ಜಾಗ ಖಾಲೀ ಮಾಡಬೇಕು; ಆಗ ಮಾತ್ರ ನೀವು ಸತ್ಯಕ್ಕೆ ದೊರಕುವಿರಿ. ಬಹಳ ಜನ ಪ್ರೇಮ, ಧ್ಯಾನಕ್ಕೆ ವಿರುದ್ಧ ಎಂದು ತಿಳಿದುಕೊಂಡಿರುತ್ತಾರೆ ಮತ್ತು ಧ್ಯಾನ, ಪ್ರೇಮಕ್ಕೆ ವಿರುದ್ಧವೆಂದು. ಇದು ಸತ್ಯವಲ್ಲ. ಧ್ಯಾನ, ಸುಳ್ಳು ಪ್ರೇಮದ ವಿರುದ್ಧ ಮತ್ತು ಯಾವತ್ತೂ ನಿಜದ ಪ್ರೇಮದ ಪರ.
ಒಮ್ಮೆ ನಸ್ರುದ್ದೀನ್ ದಂಪತಿಗಳು ಪ್ರೇಮ ಪ್ರಧಾನ ನಾಟಕ ನೋಡಲು ಹೋಗಿದ್ದರು. ನಾಟಕದ ನಾಯಕನ ರೋಮ್ಯಾಂಟಿಕ್ ಅಭಿನಯದಿಂದ ವಿಶೇಷವಾಗಿ ಪ್ರಭಾವಿತಳಾದ ಹೆಂಡತಿ ನಸ್ರುದ್ದೀನ್ ನ ಕಿವಿಯಲ್ಲಿ ಪಿಸುಗುಟ್ಟಿದಳು.
“ಈ ಮನುಷ್ಯ ಬಹಳ ಒಳ್ಳೆಯ ನಟ”
“ನಿನಗೆ ಗೊತ್ತಾ, ನಾಟಕದಲ್ಲಿ ಅವನ ಪ್ರೇಯಸಿಯ ಪಾತ್ರ ಮಾಡ್ತಿರೋಳು ನಿಜ ಜೀವನದಲ್ಲಿ ಅವನ ಹೆಂಡತಿ”
ನಸ್ರುದ್ದೀನ್, ಹೆಂಡತಿಗೆ ವಿಷಯ ತಿಳಿಸಿದ.
“ಹಾಗಾದರೆ, ಇವನು ಜಗತ್ತಿನಲ್ಲಿಯೇ ಶ್ರೇಷ್ಠ ನಟ”
ಹೆಂಡತಿ ಫರ್ಮಾನು ಹೊರಡಿಸಿದಳು.
********************************

