ಅಸಹಾಯಕತೆ ( Helplessness): ಓಶೋ 365 #Day276

ಜಗತ್ತು ವಿಶಾಲವಾದದ್ದು ಮತ್ತು ಮಾನವ ಜನಾಂಗ ಅಸಹಾಯಕ. ಇದು ಕಷ್ಟ ನಿಜ, ಬಹಳ ಕಷ್ಟ, ಆದರೆ ಒಮ್ಮೆ ನೀವು ಮೂಲಭೂತ ಮಾನವ ಕಷ್ಟಗಳನ್ನು ಒಪ್ಪಿಕೊಂಡುಬಿಟ್ಟಿರಾದರೆ ಅತ್ಯಂತ ಸಮಾಧಾನದಲ್ಲಿ ನೆಲೆಯಾಗುವಿರಿ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ನಿನ್ನ ದುಃಖಕ್ಕೆ ಪರಿಹಾರವೇ ಇಲ್ಲ
ಎನ್ನುವುದನ್ನ ಕಂಡುಕೊಂಡಾಗಲೇ
ನೀನು ಪರಮ ಸುಖಿ.

ತಲೆಬಾಗಿ ಹೂಂ ಗುಡುವುದಕ್ಕೂ ,
ತಲೆಯೆತ್ತಿ ಹೂಂ ಗುಡುವುದಕ್ಕೂ  ಏನು ವ್ಯತ್ಯಾಸ?
ಗೆಲುವು, ಸೋಲುಗಳ ನಡುವೆ?
ಅವರ ಹೂಂ, ನಿನ್ನ ಹೂಂ ಆಗಲೇಬೇಕೆ?
ಅವರು ಉಹೂಂ ಎಂದರೆ, ನೀನೂ ?
ಎಂಥ ನಗೆಪಾಟಲಿನ ಸಂಗತಿ.

ಅವರು ಯುದ್ಧಕ್ಕೆ ಹೊರಟವರಂತೆ ಉತ್ತೇಜಿತರು
ನನಗೆ ಆ ಸಂಭ್ರಮವಿಲ್ಲ
ನಿರ್ಲಿಪ್ತ ನಾನು
ಇನ್ನೂ ನಗು ಕಲಿಯದ ಹಸುಗೂಸು.

ಬೇಕಾದದ್ದು ಇದ್ದೇ ಇದೆ ಎಲ್ಲರ ಬಳಿ
ನಾನೊಬ್ಬನೇ ಬರಿಗೈ ದೊರೆ
ನೂಕಿದಂತೆ ನೂಕಿಸಿಕೊಳ್ಳುವವನು
ಅಪ್ಪಟ ದಡ್ಡ, ಪೂರ್ತಿ ಖಾಲಿ.

ಅವರು ಖಚಿತಮತಿಗಳು,
ನಾನು ಮಹಾ ಗೊಂದಲದ ಮನುಷ್ಯ
ಅವರು ಚುರುಕು, ನಾನು ಮಬ್ಬು
ಅವರಿಗೋ ಒಂದು ಉದ್ದೇಶ
ನಾನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡವನು
ಅಲೆ ಕರೆದುಕೊಂಡು ಹೋದಲ್ಲಿ,
ಗಾಳಿ ಬೀಸಿದ ದಿಕ್ಕಿನಲ್ಲಿ
ಹರಿದು ಹೋಗುವವನು

ಎಲ್ಲರಂಥವನಲ್ಲ ನಾನು
ಸೀದಾ ಮಹಾ ಮಾಯಿಯ ಮೊಲೆಗೆ
ಬಾಯಿ ಇಟ್ಟವನು.

~ Lao Tzu

ನಮ್ಮ ಸ್ವಂತದ ಸಂಕಟಗಳನ್ನು ಒಪ್ಪಿಕೊಳ್ಳುವುದು ಇನ್ನೊಬ್ಬರ ಸಂಕಟಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಬಹಳ ಸುಲಭ. ಕೆಲವೊಮ್ಮೆ ಇನ್ನೊಬ್ಬರ ಕಷ್ಟಗಳನ್ನು ಒಪ್ಪಿಕೊಂಡುಬಿಡಬಹುದಾದರೂ, ಮಕ್ಕಳ, ಮುಗ್ಧರ, ಅಸಹಾಯಕರ, ಯಾವ ಕಾರಣವೂ ಇಲ್ಲದೆ ದುಃಖಿತರಾಗಿರುವವರ, ಪ್ರತಿಭಟಿಸುವುದು ಸಾಧ್ಯವಾಗದವರ, ತಮ್ಮನ್ನು ರಕ್ಷಿಸಿಕೊಳ್ಳಲಾಗದವರ ದುಃಖಗಳನ್ನು ಒಪ್ಪಿಕೊಳ್ಳುವುದು ಬಹಳ ಕಷ್ಟ. ಇದು ಅನ್ಯಾಯ, ಇದು ಕುರೂಪ, ಇದು ಭಯಾನಕ.

ಆದರೆ ನಿಮಗೆ ನೆನಪಿರಲಿ, ಇಲ್ಲಿ ಆ ಮಗು, ಆ ಶೋಷಿತ ಮಾತ್ರ ಅಸಹಾಯಕ ಅಲ್ಲ, ನೀವೂ ಅಸಹಾಯಕರು. ಒಮ್ಮೆ ನೀವು ನಿಮ್ಮ ಅಸಹಾಯಕತೆಯನ್ನು ಅರ್ಥಮಾಡಿಕೊಂಡಿರಾದರೆ, ಅದರ ಸ್ವೀಕಾರ ನೆರಳಿನಂತೆ ಹಿಂಬಾಲಿಸುವುದು. ನೀವು ಏನು ಮಾಡಬಹುದು? ನೀವು ಕೂಡ ಅಸಹಾಯಕರು. ಕಲ್ಲಿನಂತೆ ಕಠಿಣರಾಗಿ ಎಂದು ನಾನು ಹೇಳುತ್ತಿಲ್ಲ. ಸ್ಪಂದಿಸಿ, ಆದರೆ ನೀವು ಅಸಹಾಯಕರು ಎನ್ನುವುದು ನಿಮಗೆ ಗೊತ್ತಿರಲಿ. ಜಗತ್ತು ವಿಶಾಲವಾದದ್ದು ಮತ್ತು ಮಾನವ ಜನಾಂಗ ಅಸಹಾಯಕ. ಕೊನೆಯ ಪಕ್ಷ ನಾವು ಅವರಿಗಾಗಿ ಅಂತಃಕರಣ ಫೀಲ್ ಮಾಡಬಹುದು. ನಾವು ಏನೇ ಮಾಡಬೇಕೆಂದು ಬಯಸಿದರೂ ಅದು ಅವರಿಗೆ ಸಹಾಯಕವಾಗುತ್ತದೆ ಎಂದು ಹೇಳುವುದು ಕಷ್ಟ. ಅದು ಅವರನ್ನೂ ಇನ್ನೂ ಹೆಚ್ಚಿನ ಕಷ್ಟಕ್ಕೆ ನೂಕಬಹುದು.

ನಿಮ್ಮ ಕಾರುಣ್ಯವನ್ನು ಕಳೆದುಕೊಳ್ಳಿ ಎಂದು ನಾನು ಹೇಳುತ್ತಿಲ್ಲ. ನಿಮಗೆ ಸಾಧ್ಯವಾಗುವ ಮತ್ತು ಅದರಿಂದ ಇನ್ನೊಬ್ಬರಿಗೆ ಉಪಯೋಗ ಆಗಬಹುದಾದ ಸಹಾಯಗಳ ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳುತ್ತಿರುವುದು ಅಸಹಾಯಕತೆಯ ಬಗ್ಗೆ. ಮನುಷ್ಯನ ದುಃಖಗಳು ಸುಳ್ಳು ಎನ್ನುವ ನಿಮ್ಮ ನಿರ್ಣಯದಿಂದ ಹೊರಗೆ ಬನ್ನಿ. ಮತ್ತು ಅದಕ್ಕಾಗಿ ನೀವು  ಏನಾದರೂ ಮಾಡಲೇ ಬೇಕು ಎನ್ನುವ ಐಡಿಯಾ ಡ್ರಾಪ್ ಮಾಡಿ. ಏಕೆಂದರೆ ಒಮ್ಮೆ ನಿಮ್ಮ ‘ಮಾಡುವಿಕೆ’ ಪ್ರವೇಶ ಮಾಡಿದರೆ ನಿಮ್ಮ ಸಾಕ್ಷಿತನ ಕಳೆದು ಹೋಗುತ್ತದೆ. ಕಾರುಣ್ಯ ಒಳ್ಳೆಯದು, ಸಹಾಯ ಒಳ್ಳೆಯದು, ಅಸಹಾಯಕತೆಯೂ ತಪ್ಪೇನಲ್ಲ. ಅತ್ತು ಬಿಡಿ, ಅದರಲ್ಲಿ ಯಾವ ತಪ್ಪೂ ಇಲ್ಲ. ನಿಮ್ಮ ಕಣ್ಣೀರಿಗೆ ನೀವು ಅಸಹಾಯಕರು ಎನ್ನುವ ವಿಷಯ ಗೊತ್ತಾಗಲಿ. ಆದ್ದರಿಂದಲೇ ನೀವು ಅಳುತ್ತಿರುವುದು. ನಾವು ಏನಾದರೂ ಮಾಡಬಹುದು ಎನ್ನುವ ಐಡಿಯಾನೇ ಅಹಂನಿಂದ ಕೂಡಿಕೊಂಡಿದ್ದು, ಮತ್ತು ಅಹಂ ಎಲ್ಲವನ್ನೂ ಡಿಸ್ಟರ್ಬ್ ಮಾಡುತ್ತ ಹೋಗುತ್ತದೆ. ಆದ್ದರಿಂದ ಆ ಅಹಂ ನ ಡ್ರಾಪ್ ಮಾಡಿ, ಸುಮ್ಮನೇ ಸಾಕ್ಷಿಯಾಗಿ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.