ಯಾವ ರಿಸ್ಕ್ ಇಲ್ಲದಿದ್ದಾಗ ಮಾತ್ರ ನಾವು ಬದಲಾವಣೆಗೆ ಒಪ್ಪಿಕೊಳ್ಳುತ್ತೇವೆ ಆದರೆ ರಿಸ್ಕ್ ಇಲ್ಲದೇ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಯಾವಾಗ ನಾವು ಎಲ್ಲವನ್ನೂ ಪಣಕ್ಕಿಡಲು ಸಿದ್ಧರಾಗಿರುತ್ತೇವೆಯೋ ಆಗ ಮಾತ್ರ ಬದಲಾವಣೆ ಸಾಧ್ಯ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಆವರಿಸಿಕೊಳ್ಳುತ್ತಿರುವ
ಬದಲಾವಣೆಯ ಹೊಸ ಗಾಳಿಯನ್ನು
ತಡೆದು ನಿಲ್ಲಿಸಬಯಸುವ
ನಿಮ್ಮ ಉತ್ಸಾಹವನ್ನ
ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಬದಲಾಗಿ ಬದುಕಿಗೆ,
ನಿಮ್ಮ ಮೂಲಕ
ಬಾಳುವ ಅವಕಾಶ ಮಾಡಿಕೊಡಿ.
ಬದಲಾವಣೆ ಎಂದರೆ
ಚಿಮ್ಮಲಾಗಿರುವ ಬದುಕಿನ ನಾಣ್ಯ.
ನಿಮ್ಮ ಬದುಕು
ತಲೆಕೆಳಗಾಗಿ ಬಿಡಬಹುದೆಂದು
ಗಾಬರಿಯಾಗಬೇಡಿ.
ಯಾರಿಗೆ ಗೊತ್ತು,
ಈಗ ನಿಮ್ಮೆಡೆ ಮುಖ ಮಾಡಿರುವ
ಬದುಕಿನ ಭಾಗ
ನೀವು ಬದುಕುತ್ತಿರುವ ಬದುಕಿನ ಭಾಗಕ್ಕಿಂತ
ಅದ್ಭುತವಾಗಿರಬಹುದು.
~ ಶಮ್ಸ್ ತಬ್ರೀಝಿ
ಬದಲಾವಣೆ ಯಾವತ್ತೂ ಅರ್ಧ ( partial) ಸಾಧ್ಯವಿಲ್ಲ. ಬದಲಾವಣೆ ಪೂರ್ಣ ಅಥವಾ ಬದಲಾವಣೆ ಸಾಧ್ಯವಿಲ್ಲ, ಬದಲಾವಣೆ ಯಾವತ್ತೂ ಸಂಪೂರ್ಣವಾಗಿರಬೇಕು. ಆದ್ದರಿಂದ ನಮ್ಮ ನಿರ್ಧಾರ ಬದಲಾವಣೆಯ ಪರ ಅಥವಾ ವಿರುದ್ಧ ಆಗಿರಬೇಕು, ಅರ್ಧ ಮನಸ್ಕತೆ ಯಾವತ್ತೂ ಉಪಯೋಗಕ್ಕೆ ಬರಲಾರದು. ಇದು ಕ್ರಮೇಣವಾಗಿ ಪೂರ್ಣಗೊಳ್ಳುವ ಕ್ರಿಯೆ ಅಲ್ಲ ಇದು ಯಾವತ್ತೂ ಒಂದು ಜಂಪ್. ನೀವು ಬದುಕುತ್ತಿರುವ ನಿಮ್ಮ ಬಾಳಿನ ಬಗ್ಗೆ, ನಿಮ್ಮ ಹಳೆಯ ವ್ಯವಸ್ಥೆಯ ಬಗ್ಗೆ ನಿಮಗೆ ಬೇಸರವಿದ್ದರೆ ಆಗ ತೊಂದರೆ ಇಲ್ಲ, ಆಗ ಬದಲಾವಣೆಗೆ ಯಾವ ಅಡತಡೆಯಿಲ್ಲ. ನಿಮ್ಮ ಬದುಕು ನಿಮಗೆ ಧನಾತ್ಮಕವಾಗಿಲ್ಲ, ನೀವು ಅರಳಲು ಸಹಾಯ ಮಾಡುತ್ತಿಲ್ಲ ಎನ್ನುವ ತಿಳುವಳಿಕೆ ನಿಮಗೆ ಇದ್ದಾಗ ಬದಲಾವಣೆ ಸಾಧ್ಯ.
ಇದು ಜಗತ್ತು ನಿಮ್ಮನ್ನು ಗುರುತಿಸುವ ಪ್ರಶ್ನೆ ಅಲ್ಲ. ನೀವು ಯಶಸ್ವಿಗಳೆಂದೂ, ತಮ್ಮಲ್ಲಿ ಇರಬೇಕಾದ ಎಲ್ಲ ಗುಣಗಳು ತಮ್ಮ ಬಳಿ ಇವೆ ಎಂದು ಜನ ತಿಳಿದುಕೊಂಡಿರಬಹುದು ಆದರೆ ಪಾಯಿಂಟ್ ಅದಲ್ಲ. ನಿಮ್ಮ ಆಳದಲ್ಲಿ ನಿಮಗೆ ನಿಷ್ಕ್ರೀಯತೆಯ, ಮುದುಡುವಿಕೆಯ, ಜೀವ ಹೀನತೆಯ ಅನುಭವವಾಗುತ್ತಿದೆ. ಬದುಕಿನ ಕಾವ್ಯ, ಹರಿವು, ಸಂಗೀತ, ರುಚಿ ಮಾಯವಾಗುತ್ತಿದೆ ಅನಿಸುತ್ತಿದೆ ; ನಿಮ್ಮ ಬದುಕಿನಲ್ಲಿ ಮೊದಲು ಇದ್ದ ಪರಿಮಳ ಈಗಿಲ್ಲ. ನೀವು ಬದುಕ ಬೇಕು ಆದ್ದರಿಂದ ಬದುಕುತ್ತಿದ್ದೀರಿ ಅಷ್ಟೇ. ಬೇರೆ ಏನು ಮಾಡುವುದು ಸಾಧ್ಯ ನೀವು? ನೀವು ಪರಿಸ್ಥಿತಿಯ ಕೈಗೊಂಬೆಯಾಗಿದ್ದೀರಿ. ನೀವು ಏನು ಮಾಡುತ್ತಿದ್ದೀರಿ, ಎಲ್ಲಿ ಹೋಗುತ್ತಿದ್ದೀರಿ, ಎಲ್ಲಿಂದ ಬರುತ್ತಿರುವಿರಿ ಈ ಯಾವುದರ ತಿಳುವಳಿಕೆಯೂ ನಿಮಗೆ ಇಲ್ಲ.
ಇಂಥ ಪರಿಸ್ಥಿತಿ ನಿಜವಾಗಿಯೂ ಇದ್ದಾಗ ಬದಲಾವಣೆ ಸುಲಭ ಸಾಧ್ಯ. ಆಗ ಇದು ಎಂಥ ಸ್ವಾಭಾವಿಕ ವಿದ್ಯಮಾನವೆಂದರೆ, ನೀವು ತಲೆ ಕೆಡಿಸಿಕೊಳ್ಳುವ ಪ್ರಮೇಯ ಇಲ್ಲ. ಈ ಕುರಿತಾದ ತಿಳುವಳಿಕೆಯೇ ನಿಮ್ಮಲ್ಲಿ ಬದಲಾವಣೆಯನ್ನು ಸಾಧ್ಯ ಮಾಡುತ್ತದೆ. ಕೇವಲ ಈ ಕುರಿತಾದ ತಿಳುವಳಿಕೆಯೇ ಒಂದು ಮಹಾ ಕ್ರಾಂತಿ.
ಒಮ್ಮೆ ಒಬ್ಬ ಝೆನ್ ಮಾಸ್ಟರ್ ನದಿಯ ದಂಡೆಯ ಮೇಲೆ ಧ್ಯಾನ ಮಗ್ನನಾಗಿದ್ದಾಗ ಯುವಕನೊಬ್ಬ ಅವನ ಹತ್ತಿರ ಬಂದು ಕೇಳಿಕೊಂಡ.
ಯುವಕ : ಮಾಸ್ಟರ್, ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ
ಮಾಸ್ಟರ್ : ಯಾಕೆ? ಏನು ವಿಷಯ?
ಯುವಕ : ನಾನು ದೇವರನ್ನು ಹುಡುಕಬೇಕು
ಈ ಮಾತನ್ನು ಕೇಳುತ್ತಿದ್ದಂತೆಯೇ, ಮಾಸ್ಟರ್ ತನ್ನ ಜಾಗದಿಂದ ಕೆಳಗೆ ಜಿಗಿದು, ಯುವಕನ ಅಂಗಿಯ ಕಾಲರ್ ಹಿಡಿದು, ಅವನನ್ನು ದರದರನೇ ಎಳೆದುಕೊಂಡು ನದಿಯ ಹತ್ತಿರ ಬಂದು, ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಹಾಗೇ ಹಿಡಿದುಕೊಂಡ.
ಕೆಲ ನಿಮಿಷಗಳಾಗುತ್ತಿದ್ದಂತೆಯೇ, ಯುವಕನಿಗೆ ಉಸಿರುಗಟ್ಟತೊಡಗಿತು, ಅವ ಒದ್ದಾಡತೊಡಗಿದ.
ಆಗ ಮಾಸ್ಟರ್, ಯುವಕನ ಮುಖವನ್ನು ನೀರಿನಿಂದ ಹೊರ ತೆಗೆದ. ಯುವಕ ಏದುಸಿರು ಬಿಡುತ್ತ ಜೋರು ಜೋರಾಗಿ ಕೆಮ್ಮತೊಡಗಿದ.
ಮಾಸ್ಟರ್ : ಈಗ ಹೇಳು, ನೀರಿನಲ್ಲಿ ನಿನ್ನ ಮುಖ ಮುಳುಗಿದ್ದಾಗ, ನಿನಗೇನು ಬೇಕೇ ಬೇಕು ಅನಿಸಿತ್ತು?
ಯುವಕ : ಗಾಳಿ, ಗಾಳಿ ಬೇಕನಿಸಿತ್ತು ಮಾಸ್ಟರ್.
ಮಾಸ್ಟರ್ : ಹಾಗಾದರೆ ಈಗ ವಾಪಸ್ ಹೋಗು, ಯಾವಾಗ ನಿನಗೆ ದೇವರ ಅವಶ್ಯಕತೆ ಗಾಳಿಯಷ್ಟೇ ಮುಖ್ಯ ಅನಿಸುತ್ತದೆಯೋ, ಆಗ ಬಾ. ದೇವರ ಬಗ್ಗೆ ಆಗ ಮಾತಾಡೋಣ.

