ನಾನು ಸನ್ಯಾಸ, ಪರಿತ್ಯಾಗದ ಪರ ಇಲ್ಲ. ಬದುಕು ನೀಡುವ ಎಲ್ಲವನ್ನೂ ಆನಂದಿಸಿ, ಆದರೆ ಯಾವತ್ತೂ ಈ ಎಲ್ಲದಕ್ಕೂ ಅಂಟಿಕೊಳ್ಳದೇ ಮುಕ್ತರಾಗಿರಿ. ಏಕೆಂದರೆ ಕಾಲ ಬದಲಾದಾಗ, ಸಂಗತಿಗಳು ಕಾಣೆಯಾದಾಗ, ಈ ಯಾವುದು ನಿಮಗೆ ವ್ಯತ್ಯಾಸ ಮಾಡುವುದಿಲ್ಲ. ಆಗ ನೀವು ಅರಮನೆಯಲ್ಲಿ ಎಷ್ಟು ಖುಶಿಯಿಂದ ಇರಬಲ್ಲಿರೋ ಅಷ್ಟೇ ಖುಶಿಯಿಂದ ಗುಡಿಸಲಿನಲ್ಲೂ ಇರಬಲ್ಲಿರಿ. ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕಳ್ಳ,
ಬಿಟ್ಟು ಹೋಗಿದ್ದಾನೆ ಚಂದಿರನನ್ನು,
ಕಿಟಕಿಯ ಬಳಿ.
~ ಬಾಶೋ
ಯಾವುದಕ್ಕೂ ಅಂಟಿಕೊಳ್ಳಬಾರದು, ಜೋತು ಬೀಳಬಾರದು ಎನ್ನುವ ನಿರಂತರ ಅರಿವು ಬದುಕನ್ನು ಆನಂದಮಯವಾಗಿಸಬಲ್ಲದು. ಆಗ ಯಾವುದೆಲ್ಲ ಇದೆಯೋ ಅದನ್ನು ಅಪಾರವಾಗಿ ಆನಂದಿಸಬಹುದು. ಇದು ಒಬ್ಬರಿಗೆ ಸಾಧ್ಯವಾಗಬಹುದಾದ ಆನಂದಕ್ಕಿಂತ ದೊಡ್ಡದು ಏಕೆಂದರೆ ಇದು ಯಾವಾಗಲೂ ನಿಮಗೆ ಲಭ್ಯವಿದೆ. ಆದರೆ ಮೈಂಡ್ ಯಾವಾಗಲೂ ಸಂಗತಿಗಳಿಗೆ ಅಂಟಿಕೊಳ್ಳುತ್ತದೆ ಆಗ ನಾವು ಲಭ್ಯವಿರುವ ಆನಂದಕ್ಕೆ ಕುರುಡಾಗುತ್ತೇವೆ.
ಮಾಸ್ಟರ್ ಆಗಿದ್ದ ಝೆನ್ ಸನ್ಯಾಸಿಯ ಕುರಿತಾದ ಕತೆಯೊಂದಿದೆ. ಒಂದು ದಿನ ಅವನ ಆಶ್ರಮಕ್ಕೆ ಕಳ್ಳ ಬರುತ್ತಾನೆ ಆದರೆ ಅಲ್ಲಿ ಕದಿಯುವುದಕ್ಕೆ ಏನೂ ಇರುವುದಿಲ್ಲ. ಆದ್ದರಿಂದ ಕಳ್ಳ ಏನು ಭಾವಿಸಬಹುದೆಂದು ಮಾಸ್ಟರ್ ಗೆ ಚಿಂತೆಯಾಗುತ್ತದೆ. ಪಾಪ ಕಳ್ಳ ಇಂಥ ಕಗ್ಗತ್ತಲಲ್ಲಿ ನಾಲ್ಕೈದು ಮೈಲು ನಡೆದುಕೊಂಡು ನನ್ನ ಆಶ್ರಮಕ್ಕೆ ಕಳ್ಳತನಕ್ಕೆ ಬಂದಿದ್ದಾನೆ ಆದರೆ ನನ್ನ ಆಶ್ರಮದಲ್ಲಿ ಆ ಕಳ್ಳನಿಗೆ ಕದಿಯುವುದಕ್ಕೆ ಏನೂ ಇಲ್ಲ ಎಂದು ಮಾಸ್ಟರ್ ಗೆ ವ್ಯಥೆಯಾಗುತ್ತದೆ.
ಮಾಸ್ಟರ್ ಬಳಿ ಒಂದು ಹೊದಿಕೆ ಇತ್ತು, ಅದನ್ನೇ ಅವನು ಹಾಸಿಕೊಳ್ಳುವುದಕ್ಕೂ ಹೊದಿಯುವುದಕ್ಕೂ ಉಪಯೋಗಿಸುತ್ತಿದ್ದ. ಮಾಸ್ಟರ್ ಲಗುಬಗೆಯಿಂದ ಆ ಹೊದಿಕೆಯನ್ನು ಮಡಚಿ ಕಳ್ಳ ಕದಿಯಲೆಂದು ಮೂಲೆಯಲ್ಲಿ ಎತ್ತಿಟ್ಟ. ಆದರೆ ಕಳ್ಳನಿಗೆ ಆ ಹೊದಿಕೆ ಕತ್ತಲಲ್ಲಿ ಕಾಣಿಸಲಿಲ್ಲವಾದ್ದರಿಂದ ಮಾಸ್ಟರ್ ಅವನಿಗೆ ಹೊದಿಕೆ ಕದಿಯುವಂತೆ ಕೂಗಿ ಹೇಳಿದ. ಕಳ್ಳ ಖಾಲೀ ಕೈಯಲ್ಲಿ ಮರಳಬಾರದೆಂದು ತನ್ನ ಆಶ್ರಮದಿಂದ ಏನಾದರೂ ಕದಿಯುವಂತೆ ಮಾಸ್ಟರ್ ಬೇಡಿಕೊಂಡ. ಮಾಸ್ಟರ್ ನ ವರ್ತನೆಯಿಂದ ಕಳ್ಳನಿಗೆ ಎಷ್ಟು ಆಶ್ಚರ್ಯವಾಯಿತೆಂದರೆ ಕೊನೆಗೆ ಅವನು ಆ ಹೊದಿಕೆಯನ್ನು ತೆಗೆದುಕೊಂಡು ಅಲ್ಲಿಂದ ಜಾಗ ಖಾಲೀ ಮಾಡಿದ.
ನಂತರ ಈ ಘಟನೆಯ ಕುರಿತು ಮಾಸ್ಟರ್, ನನಗೆ ಸಾಧ್ಯವಾಗಿದ್ದರೆ ಆ ಮನುಷ್ಯನಿಗೆ ಚಂದ್ರನನ್ನು ಕೊಟ್ಟುಬಿಡುತ್ತಿದ್ದೆ ಎಂದು ಪದ್ಯ ರಚಿಸಿದ. ಆ ರಾತ್ರಿ ಚಂದ್ರನ ಬೆಳದಿಂಗಳಲ್ಲಿ ಬೆತ್ತಲೆಯಾಗಿ ಕುಳಿತುಕೊಂಡು ಎಂದಿಗಿಂತ ಹೆಚ್ಚು ಖುಶಿಯಿಂದ ಚಂದ್ರನನ್ನು ಆನಂದಿಸಿದ.
ಬದುಕು ಯಾವಾಗಲೂ ನಿಮಗೆ ಲಭ್ಯವಿದೆ. ಇದು ನಿಮಗೆ ಖುಶಿಯನ್ನು ಅನುಭವಿಸುವುದು ಸಾಧ್ಯವಿರುವದಕ್ಕಿಂತ ಹೆಚ್ಚು; ಯಾವತ್ತೂ ನೀವು ಕೊಡುವುದಕ್ಕಿಂತ ಹೆಚ್ಚು ನಿಮ್ಮ ಬಳಿ ಲಭ್ಯವಿರುತ್ತದೆ.
********************************

