ಅದು ತುಣುಕು ಹೊಳಹುಗಳ ಮೂಲಕವೇ ಶುರುವಾಗುತ್ತದೆ ಮತ್ತು ಹಾಗಾಗುವುದೇ ಒಳ್ಳೆಯದು ; ಥಟ್ಟನೇ ಆಕಾಶ ಇಡಿಯಾಗಿ ಬಿಚ್ಚಿಕೊಳ್ಳವುದು ಸಹಿಸಲಸಾಧ್ಯ. ಇಡಿಯಾದ ಜ್ಞಾನೋದಯ ಥಟ್ಟನೇ ಆದರೆ ಜನ ಮೂರ್ಖರಾಗುವ ಸಾಧ್ಯತೆಯೇ ಹೆಚ್ಚು ~ ಓಶೋ ರಜನೀಶ್; ಕನ್ನಡಕ್ಕೆ:ಚಿದಂಬರ ನರೇಂದ್ರ
ನಿಮ್ಮ ಒಂದು ಗುಲಾಬಿಗೆ ಬದಲಾಗಿ
ಸಾವಿರಾರು ಗುಲಾಬಿ ತೋಟಗಳು,
ಒಂದು ಬೀಜಕ್ಕೆ ಬದಲಾಗಿ
ಸಮಸ್ತ ಕಾಡು,
ಒಂದು ಹಗುರ ಉಸಿರಿನ ಬದಲಿಗೆ
ದಿವ್ಯ ಚಂಡಮಾರುತ.
ನಿಮಗೇನಾದರೂ ಗೊತ್ತಾ
ಇಂಥ ಮಾರುಕಟ್ಟೆಯ ಬಗ್ಗೆ ?
– ರೂಮಿ.
ಕೆಲವೊಮ್ಮೆ ಕೆಲವು ಸತ್ಯಗಳನ್ನು ಥಟ್ಟನೇ ಇಡಿಯಾಗಿ ಪ್ರವೇಶ ಮಾಡುವುದು ಅಪಾಯಕಾರಿ, ಏಕೆಂದರೆ ಅದು ನಿಮ್ಮ ಸಹನಶಕ್ತಿಯನ್ನು ಮೀರಿದ್ದು; ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ನಿಮಗಿಲ್ಲ. ಪ್ರಶ್ನೆ ಸತ್ಯ ಅನಾವರಣಗೊಳ್ಳುವ ಬಗೆಯ ಕುರಿತು ಅಲ್ಲ, ಅದನ್ನು ಹೇಗೆ ಪೂರ್ತಿಯಾಗಿ ನಿಮ್ಮದಾಗಿಸಿಕೊಳ್ಳಬೇಕು ಎನ್ನುವುದು ಪಾಯಿಂಟ್. ಏಕೆಂದರೆ ಅದು ಕೇವಲ ನಿಮ್ಮ ಅನುಭವವಾಗಬಾರದು, ಅದು ನಿಮ್ಮ ಇರುವಿಕೆಯ ( being) ಭಾಗವಾಗಬೇಕು. ಅನುಭವವಾದರೆ ಅದು ಬರುತ್ತದೆ, ಹೋಗುತ್ತದೆ; ಅದು ತುಣುಕುಗಳಲ್ಲಿಯೇ ಉಳಿದುಕೊಳ್ಳುತ್ತದೆ. ಯಾವ ಅನುಭವವೂ ಶಾಶ್ವತವಲ್ಲ, ನಿಮ್ಮ ಇರುವಿಕೆ ಮಾತ್ರ ಶಾಶ್ವತವಾದದ್ದು.
ಒಳಗಿನ ಸಂಗತಿಗಳ ಬಗ್ಗೆ ಲೋಭ ಬೇಡ. ಹೊರಗಿನ ಸಂಗತಿಗಳ ಬಗ್ಗೆಯೂ ಲೋಭ ಒಳ್ಳೆಯದಲ್ಲವಾದರೂ, ಒಳಗಿನ ಸಂಗತಿಗಳ ಬಗ್ಗೆ ಇನ್ನೂ ಕೆಟ್ಟದ್ದು. ಹಣ, ಅಧಿಕಾರ, ಪ್ರತಿಷ್ಠೆಯ ಕುರಿತಾದ ನಿಮ್ಮ ಲೋಭ ಅಷ್ಟು ಅಪಾಯಕಾರಿಯಲ್ಲ. ಏಕೆಂದರೆ ಅವು ವ್ಯರ್ಥ ಸಂಗತಿಗಳು ಮತ್ತು ನಿಮ್ಮ ಇವುಗಳ ಕುರಿತಾದ ಲೋಭ ಹೆಚ್ಚು ವ್ಯತ್ಯಾಸವನ್ನೂ ಉಂಟು ಮಾಡುವುದಿಲ್ಲ. ಆದರೆ ಒಳಗಿನ ದಾರಿಯಲ್ಲಿ ಪ್ರಯಾಣ ಮಾಡುತ್ತಿರುವಾಗ ಕ್ಯಾರಿ ಮಾಡುವ ಲೋಭ ಅಪಾಯಕಾರಿಯಾದದ್ದು. ಬಹಳ ಜನ ಹೀಗೆ ಮಾಡಿ ಹುಚ್ಚರಾಗಿಬಿಟ್ಟಿದ್ದಾರೆ. ಇದು ಅವರ ಕಣ್ಣು ಕೋರೈಸುವಂಥದು ಆದ್ದರಿಂದ ಆದಷ್ಟು ಬೇಗ ಅವರು ಕುರುಡರಾಗಿಬಿಡುತ್ತಾರೆ.
ಆದ್ದರಿಂದ ಸತ್ಯ ತುಣುಕಗಳಲ್ಲಿ ಸಾಧ್ಯವಾಗಲಿ ಒಂದು ಸ್ಥಿರವಾದ ಲಯದ ಹಾಗೆ, ಏಕೆಂದರೆ ಹೀಗಾದಾಗ ನೀವು ಯಾವತ್ತೂ ಪೂರ್ತಿಯಾಗಿ ಜಗತ್ತಿನ ಒಳಗೆ ಇರುವುದಿಲ್ಲ, ಹೊರಗೂ ಇರುವುದಿಲ್ಲ. ನಿಧಾನಕ್ಕೆ ಇದನ್ನು ಮೀರಿ ಹೋಗಿದ್ದು ನಿಮ್ಮ ಅರಿವಿಗೆ ಬರುತ್ತದೆ. ಈ ಪ್ರಕ್ರಿಯೆ ಹೂವು ಅರಳುವ ಹಾಗೆ ನಿಧಾನವಾಗಿ ಸಾಧ್ಯವಾಗಬೇಕು, ನಿಮಗೆ ಗೊತ್ತೇ ಆಗುವುದಿಲ್ಲ ಯಾವಾಗ ಹೂವು ಪೂರ್ಣವಾಗಿ ಅರಳಿತು ಎನ್ನುವುದು.
ಸಾಧನೆಯ ಹಾದಿಯಲ್ಲಿದ್ದ ಒಬ್ಬ ಝೆನ್ ಸನ್ಯಾಸಿ ಒಮ್ಮೆ ಮಾರ್ಕೆಟ್ ಮೂಲಕ ಹಾಯ್ದು ಹೋಗುವಾಗ ಮಾಂಸದ ಅಂಗಡಿಯೊಂದರಲ್ಲಿ ನಡೆಯುತ್ತಿದ್ದ ಸಂಭಾಷಣೆಯನ್ನು ಕಿವಿಗೊಟ್ಟು ಕೇಳಿದ.
ಗ್ರಾಹಕ : ನಿನ್ನ ಅಂಗಡಿಯಲ್ಲಿರುವ ಒಳ್ಳೆಯ ಮಾಂಸದ ತುಣುಕು ನನಗೆ ಬೇಕು
ಅಂಗಡಿಯವ: ನನ್ನ ಅಂಗಡಿಯಲ್ಲಿರೋದೆಲ್ಲ ಒಳ್ಳೆಯ ಮಾಂಸವೇ. ಇಲ್ಲಿಯ ಯಾವ ಮಾಂಸದ ತುಣುಕೂ ಕಳಪೆಯಲ್ಲ.
ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದಂತಯೇ ಝೆನ್ ಸನ್ಯಾಸಿಗೆ ಜ್ಞಾನೋದಯವಾಯಿತು.

