ಯಾವತ್ತೂ ದೇಹದ ಮಾತು ಕೇಳಿ. ಅದು ನಿಮ್ಮ ಕಿವಿಯಲ್ಲಿ ಪಿಸು ನುಡಿಯುತ್ತದೆ ಯಾವತ್ತೂ ಕೂಗಿ ಹೇಳುವುದಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ಜಗತ್ತಿನಲ್ಲಿ
ಒಬ್ಬರು, ಇನ್ನೊಬ್ಬರ ಹಾಗಿಲ್ಲ.
ಒಂದು ಹೃದಯದ ಹಾಗೆ
ಇನ್ನೊಂದು ಹೃದಯ ಮಿಡಿಯುವುದಿಲ್ಲ.
ಎಲ್ಲ ಭಗವಂತನ ಕಲ್ಪನೆ
ಸಮಸ್ತವೂ ವಿಭಿನ್ನ,
ಪ್ರತಿಯೊಂದೂ ಅನನ್ಯ.
ಎಲ್ಲವನ್ನೂ ಒಂದೇ ಎರಕಕ್ಕೆ ಹಾಕಿ
ಸೃಷ್ಟಿಮಾಡುವ ಹುಕಿ
ಭಗವಂತನದ್ದಾಗಿದ್ದರೆ
ಆತ ಹಾಗೆ ಮಾಡಬಹುದಾಗಿತ್ತು
ಮಾಡುತ್ತಿದ್ದ ಕೂಡ.
ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ.
ನಮ್ಮ ನಡುವಿನ ವ್ಯತ್ಯಾಸವನ್ನು
ಅವಮಾನಿಸುವುದು
ನಮ್ಮ ಅಭಿಪ್ರಾಯಗಳನ್ನು, ಆಶಯಗಳನ್ನು
ಇನ್ನೊಬ್ಬರ ಮೇಲೆ ಹೇರುವುದು,
ಭಗವಂತನ ಪವಿತ್ರ ಯೋಜನೆಯನ್ನು
ಅವಮಾನಿಸಿದಂತೆ
~ ಶಮ್ಸ್
ಕೇವಲ ಪಿಸು ನುಡಿಯ ಮೂಲಕವೇ ದೇಹ ತನ್ನ ಸೂಚನೆಗಳನ್ನು ನೀಡುತ್ತದೆ. ನೀವು ಎಚ್ಚರವಾಗಿದ್ದಾಗ ಈ ಸೂಚನೆಗಳು ನಿಮಗೆ ಅರ್ಥವಾಗುತ್ತವೆ. ಮತ್ತು ದೇಹಕ್ಕೆ ತನ್ನದೇ ಆದ ತಿಳುವಳಿಕೆ ಇದೆ ಮತ್ತು ಈ ತಿಳುವಳಿಕೆ ಮೈಂಡ್ ನ ಜಾಣತನಕ್ಕಿಂತ ಆಳವಾದದ್ದು. ಮೈಂಡ್ ಅಪ್ರಬುದ್ಧವಾದದ್ದು. ಶತಶತಮಾನಗಳಿಂದ ದೇಹ, ಮೈಂಡ್ ನ ಹಸ್ತಕ್ಷೇಪವಿಲ್ಲದೇ ಕೆಲಸ ಮಾಡುತ್ತಿದೆ. ಮೈಂಡ್ ನ ಪ್ರವೇಶ ಆಮೇಲೆ ಆದದ್ದು. ಅದಕ್ಕೆ ಇನ್ನೂ ಅಷ್ಟು ತಿಳುವಳಿಕೆಯಿಲ್ಲ. ಎಲ್ಲ ಪ್ರಾಥಮಿಕ ಸಂಗತಿಗಳ ಮೇಲೆ ಇನ್ನೂ ದೇಹದ ಹತೋಟಿ ಇದೆ. ಉಪಯೋಗಕ್ಕೆ ಬಾರದ ಸಂಗತಿಗಳಾದ ತತ್ವಜ್ಞಾನ, ಸ್ವರ್ಗ- ನರಕ, ದೇವರು, ರಾಜಕಾರಣ ಮುಂತಾದವುಗಳು ಮಾತ್ರ ಮೈಂಡ್ ನ ಪರಿಧಿಯಲ್ಲಿ.
ಆದ್ದರಿಂದ ದೇಹದ ಮಾತು ಕೇಳಿ, ಮತ್ತು ಯಾವತ್ತೂ ನಿಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳಬೇಡಿ. ಈ ತನಕ ಯಾವತ್ತೂ ನಿಮ್ಮ ಹಾಗೆಯ ಮನುಷ್ಯ ಬಂದಿಲ್ಲ, ಮತ್ತು ಮುಂದೆಯೂ ಬರುವುದಿಲ್ಲ. ನೀವು ಪರಿಪೂರ್ಣವಾಗಿ ಅನನ್ಯರು, ಹಿಂದೆ, ಈಗ ಮತ್ತು ಮುಂದೆಯೂ ಕೂಡ. ಆದ್ದರಿಂದ ಯಾರೊಂದಿಗೆಯೂ ನಿಮ್ಮನ್ನು ನೀವು ಹೋಲಿಸಿಕೊಳ್ಳುವಂತಿಲ್ಲ, ಮತ್ತು ಯಾರನ್ನೂ ಅನುಕರಿಸುವಂತಿಲ್ಲ.
ಝೆನ್ ಮಾಸ್ಟರ್ ಹೈಕುನ್, ತನ್ನ ಶಿಷ್ಯರಿಗೆ ಆಶ್ರಮದ ಎದುರು ಚಹಾ ಅಂಗಡಿ ಇಟ್ಟುಕೊಂಡಿದ್ದ ಹೆಂಗಸಿನ ಝೆನ್ ತಿಳುವಳಿಕೆಯ ಬಗ್ಗೆ ಮೇಲಿಂದ ಮೇಲೆ ವರ್ಣಿಸಿ ಹೇಳುತ್ತಿದ್ದ.
ಮಾಸ್ಟರ್ ಮಾತನ್ನು ಶಿಷ್ಯರು ನಂಬುತ್ತಿರಲಿಲ್ಲ, ತಾವೇ ಪರೀಕ್ಷೆ ಮಾಡಲು ಮುಂದಾಗುತ್ತಿದ್ದರು.
ತನ್ನ ಅಂಗಡಿಗೆ ಬಂದ ಸನ್ಯಾಸಿಗಳಿಗೆ, ಆ ಹೆಣ್ಣು ಮಗಳು ಪ್ರಶ್ನೆ ಮಾಡುತ್ತಿದ್ದಳು.
“ ನೀವು ಇಲ್ಲಿ ಬಂದಿರುವುದು ಚಹಾ ಕುಡಿಯಲಿಕ್ಕೋ ಅಥವಾ ನನ್ನ ಝೆನ್ ಜ್ಞಾನ ಪರೀಕ್ಷೆ ಮಾಡಲಿಕ್ಕೋ ? “
ಚಹಾ ಕುಡಿಯಲಿಕ್ಕೆ ಎಂದವರಿಗೆ ರುಚಿಯಾದ ಚಹಾ ಮಾಡಿ ಕುಡಿಸುತ್ತಿದ್ದಳು.
ಝೆನ್ ಬಗ್ಗೆ ಚರ್ಚೆ ಮಾಡಬೇಕು ಎಂದವರನ್ನು, ಪರದೆಯ ಹಿಂದೆ ಬರಲು ಕೇಳಿಕೊಳ್ಳುತ್ತಿದ್ದಳು. ಅವರು ಪರದೆಯ ಹಿಂದೆ ಬಂದೊಡನೆ ಪೊರಕೆ ತೆಗೆದುಕೊಂಡು ಸರಿಯಾಗಿ ಬಾರಿಸಲು ಶುರು ಮಾಡುತ್ತಿದ್ದಳು.
ಹತ್ತರಲ್ಲಿ ಒಂಭತ್ತು ಜನ ಅವಳ ಪೊರೆ ಏಟಿನ ರುಚಿ ಉಂಡಿದ್ದಾರೆ.

