Polar star ಮಾತ್ರ ಶಾಶ್ವತವಾದದ್ದು, ಅದು ಚಲಿಸುವುದಿಲ್ಲ. ಬಾಕಿ ಎಲ್ಲವೂ ಚಲಿಸುತ್ತವೆ. ಆದರೆ ಕೇವಲ ಈ ನಕ್ಷತ್ರ ಮಾತ್ರ ಮೂವ್ ಆಗುವುದಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮಿಯ ಖಾಸಗೀತನ
ತನ್ನ ಸುತ್ತ ಚಾಚಿಕೊಂಡಿರುವುದು
ಗೊತ್ತಾಯಿತೆಂದರೆ
ಪ್ರೇಮದಲ್ಲಿ ಮುಳುಗಿದವರಿಗೆ
ನಿದ್ದೆ ಸಾಧ್ಯವಾಗುವುದೇ ಇಲ್ಲ.
ಕೊಂಚ ಬಾಯಾರಿದ ಪ್ರೇಮಿ
ಸ್ವಲ್ಪ ಹೊತ್ತು ಮಲಗಬಹುದೇನೋ,
ಆದರೆ ಅವರಿಗೆ ನಿದ್ದೆಯಲ್ಲೂ
ನೀರಿನ ಕನಸು,
ತುಂಬಿ ಹರಿಯುವ ಹಳ್ಳದ ಪಕ್ಕ
ತಂಬಿಗೆ ತುಂಬ ನೀರು
ಅಥವಾ
ಆ ಇನ್ನೊಬ್ಬರ ಎದೆಯಿಂದ
ಚಿಮ್ಮುತ್ತಿರುವ ಆರ್ದ್ರ ಅಂತಃಕರಣ.
ಇಡೀ ರಾತ್ರಿ
ಈ ಅಪರೂಪದ ಸಂಭಾಷಣೆಗೆ ಕಿವಿಯಾಗಿರಿ,
ಇದೊಂದೇ ಕ್ಷಣ
ನಿಮಗೆ ದಕ್ಕಬಹುದಾದದ್ದು, ದಕ್ಕಬೇಕಾದದ್ದು.
~ ರೂಮಿ
ಪ್ರೇಮ ನಮ್ಮ ಪೋಲಾರ್ ಸ್ಟಾರ್. ಬಾಕಿ ಎಲ್ಲವೂ ಮೂವ್ ಆಗುತ್ತವೆ ಪ್ರೇಮದ ಹೊರತಾಗಿ. ಈ ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರೇಮ ಮಾತ್ರ ಬದಲಾಗದ ಸಂಗತಿ. ಬಾಕಿ ಎಲ್ಲಕ್ಕೂ ಹರಿವು ಇದೆ ಕ್ಷಣಿಕವಾಗಿಯಾದರೂ. ಪ್ರೇಮ ಮಾತ್ರ ಶಾಶ್ವತ.
ಆದ್ದರಿಂದ ಈ ಎರಡು ಸಂಗತಿಗಳನ್ನು ನೆನಪಿನಲ್ಲಿಡಬೇಕು. ಒಂದು ಪ್ರೇಮ, ಏಕೆಂದರೆ ಅದು ಮಾತ್ರ ಭ್ರಮಾತ್ಮಕವಲ್ಲದ್ದು. ಅದು ಮಾತ್ರ ವಾಸ್ತವ; ಬಾಕಿ ಎಲ್ಲವೂ ಕನಸು. ಆದ್ದರಿಂದ ನೀವು ಪ್ರೇಮಿಗಳಾದರೆ, ನಿಜದ ಮನುಷ್ಯರಾಗುತ್ತೀರಿ. ನೀವು ಪೂರ್ಣ ಪ್ರೇಮವನ್ನು ತಲುಪುತ್ತೀರಾದರೆ, ನೀವು ನಿಮ್ಮ ನೈಜತೆಯನ್ನು ತಲುಪುತ್ತೀರಿ, ಸತ್ಯದೊಂದಿಗೆ ಒಂದಾಗುತ್ತೀರಿ, ಏಕೆಂದರೆ ಕೇವಲ ಪ್ರೇಮ ಮಾತ್ರ ಸತ್ಯ.
ಮತ್ತು ನೀವು ನೆನಪಿಡಬೇಕಾದ ಎರಡನೇಯ ಸಂಗತಿಯೆಂದರೆ, ನೀವು ವಾಕ್ ಮಾಡುವಾಗ, ನಿಮ್ಮೊಳಗಿನ ಏನೋ ಒಂದು ಯಾವತ್ತೂ ವಾಕ್ ಮಾಡುವುದಿಲ್ಲ. ಅದು ನಿಮ್ಮ ಆತ್ಮ, ನಿಮ್ಮ ಪೋಲಾರ್ ಸ್ಟಾರ್. ನೀವು ತಿನ್ನುವಾಗ, ನಿಮ್ಮೊಳಗಿನ ಏನೋ ಒಂದು ಯಾವತ್ತೂ ತಿನ್ನುವುದಿಲ್ಲ. ನಿಮಗೆ ಕೋಪ ಬರುತ್ತದೆ, ಆದರೆ ನಿಮ್ಮೊಳಗಿನ ಸಂಗತಿಯೊಂದಕ್ಕೆ ಯಾವತ್ತೂ ಕೋಪ ಬರುವುದಿಲ್ಲ. ನೀವು ಸಾವಿರಾರು ಸಂಗತಿಗಳನ್ನು ಮಾಡಿದರೂ, ನಿಮ್ಮೊಳಗಿನ ಸಂಗತಿಯೊಂದು ಸಂಪೂರ್ಣವಾಗಿ ಈ ಮಾಡುವಿಕೆಯನ್ನು ಮೀರಿರುತ್ತದೆ. ಅದು ನಿಮ್ಮ ಪೋಲಾರ್ ಸ್ಟಾರ್. ಆದ್ದರಿಂದ, ನೀವು ವಾಕ್ ಮಾಡುವಾಗ ನಿಮ್ಮೊಡನೆ ವಾಕ್ ಮಾಡದ ಸಂಗತಿ ನಿಮಗೆ ನೆನಪಿರಲಿ, ನೀವು ಮಾತನಾಡುವಾಗ, ನಿಮ್ಮೊಳಗೆ ಮೌನವಾಗಿರುವ ಸಂಗತಿ ನಿಮಗೆ ನೆನಪಿರಲಿ. ನೀವು ಏನಾದರೂ ಮಾಡುವಾಗ ನಿಮ್ಮ ಇರುವಿಕೆ ( being ) ನಿಮ್ಮ ನೆನಪಿನಲ್ಲಿರಲಿ.
ಯಾವತ್ತೂ ಯಾವುದು ಸಂಪೂರ್ಣವಾಗಿ ಶಾಶ್ವತವೋ, ಯಾವುದು ಅಲುಗಾಡುವುದಿಲ್ಲವೋ, ಯಾವುದು ನಡುಗುವುದಿಲ್ಲವೋ, ಯಾವುದು ಬದಲಾಗುವುದಿಲ್ಲವೋ ಅದು ನಿಮ್ಮ ನೆನಪಿನಲ್ಲಿರಲಿ. ಬದಲಾಗದೇ ಇರುವ ಆ ಸಂಗತಿ ಮಾತ್ರ ನಿಮ್ಮ ಸತ್ಯ. ಮತ್ತು ಪ್ರೇಮ ಆ ಸತ್ಯವನ್ನು ಹುಡುಕುವ ದಾರಿ.

