ನೀವು ಎಡಕ್ಕೆ ಬಲಕ್ಕೆ ಒಂದು ಬಗೆಯ ಹೊಯ್ದಾಟವನ್ನು ಅನುಭವಿಸುತ್ತಿದ್ದೀರಿ ಮತ್ತು ನಿಮ್ಮ ಕೇಂದ್ರ ನಿಮಗೆ ಗೊತ್ತಾಗುತ್ತಿಲ್ಲವೆಂದರೆ, ನೀವು ನಿಮ್ಮ ಮೂಲಾಧಾರದ (hara) ದ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡು ಬಿಟ್ಟಿದ್ದೀರಿ, ಆದ್ದರಿಂದ ಮತ್ತೆ ನೀವು ಈ ಸಂಪರ್ಕವನ್ನು ಸಾಧಿಸಬೇಕಾಗಿದೆ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀರಿನೊಳಗಿನ ಮೀನು
ಬಾಯಾರಿಕೆಯೆಂದು ಚಡಪಡಿಸುವಾಗ,
ಜಗತ್ತಿನ ಜನರು
ದೇವರ ಹುಡುಕಿಕೊಂಡು ಅಲೆಯುವಾಗ
ಬಿದ್ದು ಬಿದ್ದು ನಗುತ್ತಾನೆ ಕಬೀರ.
ಪ್ರೇಮ, ಮರದಲ್ಲಿ ಬೆಳೆಯುವುದಿಲ್ಲ,
ಪ್ರೇಮ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ,
ಪ್ರೇಮ ನಿನಗೆ ಬೇಕಾಗಿದ್ದರೆ
ಕೊಡುವುದು ಗೊತ್ತಿರಬೇಕು ನಿನಗೆ ಪ್ರೇಮ
ಕಾರಣವಿಲ್ಲದೆ ವಿನಾಕಾರಣ.
ಆ ನಿಗೂಢ ಸದ್ದಿಗೆ ಕಿವಿಗೊಡು
ನಿನ್ನ ಒಳಗೇ ಇರುವ ಆ ನಿಜದ ಸದ್ದು,
ಯಾರೂ ಮಾತನಾಡದವ
ಮಾತನಾಡುತ್ತಾನೆ
ಈ ನಿಗೂಢ ಸದ್ದಿನ ಕುರಿತು ತನ್ನೊಂದಿಗೆ,
ಅವನೇ ಇವ
ಎಲ್ಲವನ್ನೂ ಸಾಧಿಸಿಕೊಂಡವ.
ನಿಧಾನ ನಿಧಾನ ಓ ಮನಸೇ……
ಎಲ್ಲ ನಡೆಯುವುದು
ತನ್ನ ಸಮಾಧಾನದಲ್ಲಿಯೇ,
ನೂರು ಕೊಡ ನೀರು ಹಾಕಿದರೂ ಮಾಲಿ
ಮರ ಹೂವಾಗಿ ಹಣ್ಣಾಗುವುದು
ತನ್ನ ಸಂಭ್ರಮದ ಋತುವಿನಲ್ಲೇ.
ಕೇಳು ಗೆಳೆಯ,
ಯಾರು ಪ್ರೀತಿಸುತ್ತಾರೋ
ಅವರು
ಅರ್ಥ ಮಾಡಿಕೊಳ್ಳುತ್ತಾರೆ.
ಹನಿ ಹರಿದು ಸಮುದ್ರ ಸೇರುವ ಸುದ್ದಿ
ಗೊತ್ತು ಎಲ್ಲರಿಗೂ
ಆದರೆ ಹನಿಯೊಳಗೆ
ಸಮುದ್ರ ಸೇರಿಕೊಂಡಿರುವ ನಿಜ
ಬಲ್ಲರು ಕೆಲವರು ಮಾತ್ರ.
~ ಕಬೀರ
ರಾತ್ರಿ ನಿದ್ದೆಗೆ ಜಾರುವ ಮುನ್ನ, ಹಾಸಿಗೆಯ ಮೇಲೆ ಅಂಗಾತ ಮಲಗಿಕೊಂಡು ನಿಮ್ಮ ಎರಡೂ ಕೈಗಳನ್ನು ನಿಮ್ಮ ಹೊಕ್ಕಳದಿಂದ ಎರಡು ಇಂಚು ಕೆಳಗೆ ಇಟ್ಟುಕೊಂಡು ಹಗುರವಾಗಿ ಒತ್ತಿಕೊಳ್ಳಿ. ನಂತರ ಆಳವಾಗಿ ಉಸಿರಾಡಲು ಶುರು ಮಾಡಿ ಆಗ ನಿಮ್ಮ ಉಸಿರಾಟದೊಂದಿಗೆ ನಿಮ್ಮ ಕೇಂದ್ರ ಮೇಲೆ ಕೆಳಗೆ ಚಲಿಸಲು ಶುರು ಮಾಡಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ನಿಮ್ಮ ಪೂರ್ಣ ಎನರ್ಜಿಯನ್ನು ಅಲ್ಲಿ, ನೀವು ಕುಗ್ಗಿ ಕುಗ್ಗಿ ಕುಗ್ಗಿ ಒಂದು ಪುಟ್ಟ ಕೇಂದ್ರದಂತೆ, ನಿಮ್ಮ ಎಲ್ಲ ಎನರ್ಜಿ ಅಲ್ಲಿ ಕೇಂದ್ರೀಕೃತವಾದಂತೆ ಫೀಲ್ ಮಾಡಿಕೊಳ್ಳಿ. ಕೇವಲ ಹತ್ತು ಹದಿನೈದು ನಿಮಿಷ ಹೀಗೆ ಮಾಡಿ ನಂತರ ನಿದ್ದೆಗೆ ಒಪ್ಪಿಸಿಕೊಳ್ಳಿ. ಹೀಗೆ ಮಾಡುತ್ತ ನಿದ್ದೆಗೆ ಜಾರುವುದು ನಿಮಗೆ ಸಹಾಯಕವಾಗಲಿದೆ. ನಂತರ ಇಡೀ ರಾತ್ರಿ ನಿಮ್ಮ ಕೇಂದ್ರ ಅಲ್ಲಿ ಉಳಿಯಲಿದೆ. ನಿಮ್ಮ unconscious ಮತ್ತೆ ಮತ್ತೆ ಅಲ್ಲಿಗೆ ಹೋಗಿ ಕೇಂದ್ರೀಕೃತಗೊಳ್ಳುತ್ತದೆ. ಹೀಗೆ ಇಡೀ ರಾತ್ರಿ ನಿಮಗೆ ಅರಿವಿಲ್ಲದಂತೆ ಹಲವಾರು ಬಾರಿ ನೀವು ನಿಮ್ಮ ಕೇಂದ್ರದ ಜೊತೆ ಆಳ ಸಂಪರ್ಕವನ್ನು ಸಾಧಿಸುತ್ತೀರಿ.
ಮತ್ತೆ ಮುಂಜಾನೆ, ನಿದ್ದೆ ಕಳೆದು ನಿಮಗೆ ಎಚ್ಚರವಾಗುತ್ತಿದ್ದಂತೆಯೇ, ಮತ್ತೆ ನಿಮ್ಮ ಎರಡೂ ಕೈಗಳನ್ನು ಹೊಕ್ಕಳ ಕೆಳಗೆ ಇಟ್ಟು ಹಗುರವಾಗಿ ಒತ್ತಿ ಆಳವಾಗಿ ಉಸಿರಾಡಿ; ಮತ್ತೆ ಮೂಲಾಧಾರವನ್ನು ಫೀಲ್ ಮಾಡಿಕೊಳ್ಳಿ. ಹತ್ತು ಹದಿನೈದು ನಿಮಿಷ ಹೀಗೆ ಮಾಡಿ ನಂತರ ಹಾಸಿಗೆ ಬಿಟ್ಟು ಏಳಿ. ಮೂವತ್ತು ದಿವಸ, ಪ್ರತೀ ರಾತ್ರಿ, ಪ್ರತೀ ಮುಂಜಾನೆ ಹೀಗೆ ಮಾಡಿ, ಆಗ ನಿಮ್ಮ ಹೊಯ್ದಾಟ ಕಡಿಮೆಯಾಗಿ ನೀವು ಕೇಂದ್ರದಲ್ಲಿ ನೆಲೆಯಾಗಿರುವುದು ಗೊತ್ತಾಗುತ್ತದೆ.

