ಪ್ರೇಮ, ಷರತ್ತು ರಹಿತವಾದದ್ದು. ಅದು ಹಳೆಯ ಮಾದರಿಗಳನ್ನು ನಿಮ್ಮಿಂದ ಕಸಿದುಕೊಳ್ಳುತ್ತದೆ ಯಾವ ಹೊಸ ಮಾದರಿಯನ್ನೂ ನಿಮಗೆ ಕೊಡುವುದಿಲ್ಲ~ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮದ ನಿಯಮಗಳೇ ವಿಭಿನ್ನ.
ಪ್ರೇಮಿಗಳಿಗೆ,
ಅವರ ನಡುವಿನ ಸುಳ್ಳುಗಳು
ಬೇರೆಯವರು ಹೇಳಿದ ಸತ್ಯಕ್ಕಿಂತ ಹೆಚ್ಚು ಆಪ್ತ.
ಅವರ ನಡುವೆ
ಅಪರೂಪದ ಅಸಾಧ್ಯತೆಗಳು.
ಯಹೂದಿ,
ತನ್ನ ಪ್ರಾರ್ಥನಾ ಮಂದಿರದ ಒಳಗೆ
ಪ್ರವೇಶವನ್ನೆನೋ ಮಾಡುತ್ತಾನೆ
ಆದರೆ, ಕಾಣಿಸಿಕೊಳ್ಳುವುದು ಕಾಬಾದ
ದಿವ್ಯ ಸನ್ನಿಧಿಯಲ್ಲಿ.
ಕಹಿಯನ್ನು ಸಿಹಿಯಂತೆ ಚಪ್ಪರಿಸಲಾಗುವುದು,
ಆಯಾಸ, ಪ್ರೇಮದ ರೂಪ ಧರಿಸುವುದು.
ಗೆಳೆಯ, ವಿದಾಯ ಹೇಳಿದ ಕ್ಷಣದಲ್ಲಿಯೇ
*ಖಿದ್ರ ನ ಬುಗ್ಗೆಯಿಂದ ಸಾಂತ್ವನದ ಹರಿವು.
ಶೂನ್ಯ ಸಿದ್ಧಾಂತದಲ್ಲಿ,
ಒಂದು ನಿರಾಕರಣೆಗೆ ಸಾವಿರ ಸ್ವೀಕಾರಗಳ ಲೆಕ್ಕ,
ಅಪರಾಧದ ಜೇಬಿನಲ್ಲಿ ಕರುಣೆಯ ಕರ್ಚೀಫು.
ಈ ಹಾದಿಯನ್ನು ವರ್ಣಿಸುವುದು
ಸಾಧ್ಯದ ಮಾತಲ್ಲ.
ನನ್ನ ಮಾತು ಹೆಚ್ಚಾಯಿತೆನೋ,
ಶಮ್ಸ್ ತನ್ನನ್ನು ತಾನು ಸುರಿದುಕೊಂಡಾಗ
ನಾನು ಹೇಳುವ ಮಾತುಗಳಿಗೆಲ್ಲ
ಹೆಸರಿಲ್ಲದ ರುಚಿ.
ರೂಮಿ
*ಖಿದ್ರ : ಪ್ರವಾದಿ
ಬಹುತೇಕ ನಿಜವಾದ ಪ್ರೇಮಿಗಳು ಮಕ್ಕಳಂತಾಗುತ್ತಾರೆ – ಏಕೆಂದರೆ ಪ್ರೇಮ ನಿಮ್ಮನ್ನು ಸ್ವೀಕರಿಸುತ್ತದೆ. ಅದು ನಿಮ್ಮ ಮುಂದೆ ಯಾವ ಬೇಡಿಕೆಗಳನ್ನೂ ಇಡುವುದಿಲ್ಲ. ಹೀಗಿರು, ಹಾಗಿರು ಎಂದು ಪ್ರೇಮ ಯಾವತ್ತೂ ಹೇಳುವುದಿಲ್ಲ. “ನೀನು ನಿನ್ನ ಹಾಗಿರು, ನೀನು ಈಗ ಇರುವ ಹಾಗೆಯೇ ಉತ್ತಮ, ಸುಂದರ “ ಎಂದು ಮಾತ್ರ ಪ್ರೇಮ ಹೇಳುತ್ತದೆ. ಆಗ ಥಟ್ಟನೇ ನೀವು ನಿಮ್ಮ ಆದರ್ಶಗಳಿಂದ, ಕಟ್ಟುಪಾಡುಗಳಿಂದ, ವ್ಯಕ್ತಿತ್ವಗಳಿಂದ ಕಳಚಿಕೊಳ್ಳಲು ಶುರು ಮಾಡುತ್ತೀರಿ. ನೀವು ನಿಮ್ಮ ಹಳೆಯ ಚರ್ಮವನ್ನು ಕಳಚಿ ಮತ್ತೆ ಮಗುವಿನಂತಾಗುತ್ತೀರಿ. ಪ್ರೇಮ, ಜನರ ಬದುಕಿನಲ್ಲಿ ಹರೆಯವನ್ನು ಮರಳಿಸುತ್ತದೆ.
ನೀವು ಹೆಚ್ಚು ಪ್ರೀತಿಸಿದಂತೆಲ್ಲ ಹೆಚ್ಚು ತಾರುಣ್ಯಪೂರ್ಣವಾಗುತ್ತೀರಿ. ನೀವು ಪ್ರೀತಿಸದೇ ಇರುವಾಗ, ಮುದುಕರಾಗುತ್ತ ಹೋಗುತ್ತೀರಿ, ಏಕೆಂದರೆ ಆಗ ನೀವು ನಿಮ್ಮ ಜೊತೆಗಿನ ಸಂಪರ್ಕವನ್ನು ಕಳೆದುಕೊಳ್ಳುತ್ತೀರಿ. ನೀವು ನಿಮ್ಮ ಜೊತೆ ಇನ್ನೊಬ್ಬರ ಮೂಲಕ, ಯಾರು ನಿಮ್ಮನ್ನು ನೀವು ಇರುವ ಹಾಗೆ ಪ್ರತಿಬಿಂಬಿಸುತ್ತಾರೋ, ಯಾರೋ ನಿಮ್ಮನ್ನು ನೀವು ಇರುವ ಹಾಗೆ ಸ್ವೀಕರಿಸುತ್ತಾರೋ ಅಂಥವರ ಮೂಲಕ ಸಂಪರ್ಕ ಸಾಧಿಸುವ ಸಂಗತಿಯೇ ಪ್ರೇಮ.
ನಿಮ್ಮ ಎಲ್ಲ ಕಟ್ಟುಪಾಡುಗಳನ್ನ ಕಳಚಿಕೊಳ್ಳಲು ಅತ್ಯಂತ ಸರಿಯಾದ ಸ್ಥಿತಿ ಪ್ರೇಮ. ಪ್ರೇಮ ಎಂದರೆ ಪ್ರಭಾವಗಳಿಂದ ಕಳಚಿಕೊಳ್ಳುವುದು ( Un conditioning). ಅದು ನಿಮ್ಮಿಂದ ಹಳೆಯ ಮಾದರಿಗಳನ್ನು ಕಸಿದುಕೊಳ್ಳುತ್ತದೆ ಯಾವ ಹೊಸ ಮಾದರಿಯನ್ನೂ ಎದುರಿಗಿಡುವುದಿಲ್ಲ. ನಿಮಗೆ ಹೊಸ ಮಾದರಿಗಳನ್ನು ಕೊಡುತ್ತಿದೆಯಾದರೆ ಅದು ನಿಜವಾದ ಪ್ರೇಮವಲ್ಲ, ಆಗ ಅದು ರಾಜಕಾರಣ.

