ಬೆರಗು ಅನುಭವಿಸುವ ಸಾಮರ್ಥ್ಯವನ್ನು ಜ್ಞಾನ ನಾಶ ಮಾಡುತ್ತದೆ. ಬೆರಗು, ಬದುಕಿನ ಅತ್ಯಮೂಲ್ಯ ಸಂಗತಿ, ವಿಷಯ ಜ್ಞಾನ ಈ ಬೆರಗನ್ನು ನಾಶ ಮಾಡುತ್ತದೆ. ನೀವು ಹೆಚ್ಚು ಹೆಚ್ಚು ತಿಳಿದುಕೊಂಡಂತೆಲ್ಲ ಕಡಿಮೆ ಬೆರಗನ್ನು ಅನುಭವಿಸುತ್ತೀರಿ ಮತ್ತು ಕಡಿಮೆ ಬೆರಗು, ನಿಮ್ಮ ಬದುಕಿನ ಕುರಿತಾದ ಉತ್ಸಾಹವನ್ನು ಕಡಿಮೆ ಮಾಡುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬೆರಗು ಕಳೆದುಕೊಂಡವರು
ಧರ್ಮಕ್ಕೆ ಶರಣಾಗುತ್ತಾರೆ.
ಸ್ವಂತದ ಬಗ್ಗೆ ನಂಬಿಕೆಯಿಲ್ಲದವರು
ಅಧಿಕಾರವನ್ನು ಆಶ್ರಯಿಸುತ್ತಾರೆ.
ಆದ್ದರಿಂದಲೇ ಸಂತ
ಜನರಿಗೆ ಗೊಂದಲವಾಗದಿರಲೆಂದು
ಒಂದು ಹೆಜ್ಜೆ ಹಿಂದೆ ನಿಲ್ಲುತ್ತಾನೆ.
ಅವನು ಕಲಿಸುವ ರೀತಿ ಹೇಗೆಂದರೆ
ಜನರಿಗೆ
ಕಲಿಯುವ ಪ್ರಮೇಯವೇ ಇರುವುದಿಲ್ಲ.
~ ಲಾವೋತ್ಸೇ
ನೀವು ಬದುಕಿನ ಬಗ್ಗೆ ಪುಳಕಿತರಾಗಿಲ್ಲ. ಬದುಕಿನ ಕುರಿತು ನಿಮಗೆ ಯಾವ ಆಶ್ಚರ್ಯ ಇಲ್ಲ – ಆಗ ನೀವು ಸಂಗತಿಗಳನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಲು ಶುರು ಮಾಡುತ್ತೀರಿ. ಪುಟ್ಟ ಮಗು ಸಮುದ್ರದ ದಂಡೆಯಲ್ಲಿ ಓಡಾಡುತ್ತ ಕಪ್ಪೆಚಿಪ್ಪು ಅಥವಾ ಬಣ್ಣದ ಕಲ್ಲುಗಳನ್ನು ಸಂಗ್ರಹಿಸುವಂತೆ, ಅಥವಾ ಗಾರ್ಡನ್ ಲ್ಲಿ ಚಿಟ್ಟೆಗಳನ್ನು ಅಟ್ಟಿಸಿಕೊಂಡು ಓಡಾಡುವಂತೆ ಮುಗ್ಧ ಹೃದಯ ನಿರಂತರವಾಗಿ ಬೆರಗು ತುಂಬಿಕೊಂಡಿರುತ್ತದೆ. ಆದ್ದರಿಂದಲೇ ಮಕ್ಕಳು ಅಷ್ಟು ಪ್ರಶ್ನೆಗಳನ್ನು ಕೇಳುವುದು.
ನೀವು ಮಗುವಿನ ಜೊತೆ ಮಾರ್ನಿಂಗ್ ವಾಕ್ ಗೆ ಹೋಗುತ್ತೀರಾದರೆ ಬಹು ಬೇಗ ದಣಿದು ಬಿಡುತ್ತೀರಿ, ಏಕೆಂದರೆ ಮಗು ನಿಮಗೆ ಉತ್ತರ ಗೊತ್ತಿಲ್ಲದ ನೂರಾರು ಪ್ರಶ್ನೆಗಳನ್ನು ಕೇಳುತ್ತದೆ : “ಯಾಕೆ ಮರಗಳು ಹಸಿರು? ಮತ್ತು ಯಾಕೆ ಗುಲಾಬಿ ಕೆಂಪು? “. ಆದರೆ ಯಾಕೆ ಮಗು ಇಷ್ಟು ಪ್ರಶ್ನೆಗಳನ್ನು ಕೇಳುತ್ತದೆ? ಅದಕ್ಕೆ ಎಲ್ಲದರ ಬಗ್ಗೆ ಆಸಕ್ತಿಯಿದೆ, ಕುತೂಹಲವಿದೆ. Interest ಎನ್ನುವ ಪದ ದ ಮೂಲ in- inter- esse, ಹಾಗೆಂದರೆ, to be involved in. ಮಗು ತಾನು ಸಂಭವಿಸುತ್ತಿರುವ ಎಲ್ಲದರಲ್ಲೂ involved ಆಗಿದೆ.
ನೀವು ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿದುಕೊಂಡಂತೆ ಬದುಕಿನ ಕುರಿತು ಕಡಿಮೆ ಆಸಕ್ತಿಯನ್ನು ಹೊಂದಲು ಶುರು ಮಾಡುತ್ತೀರಿ. ದಾರಿಯಲ್ಲಿನ ಆಕಳು, ನಾಯಿ, ಗುಲಾಬಿ ಗಿಡ, ಸೂರ್ಯ, ಪಕ್ಷಿಗಳನ್ನ ಸುಮ್ಮನೇ ದಾಟಿ ಹೋಗುತ್ತೀರಿ, ಅವುಗಳ ಬಗ್ಗೆ ಯಾವ ಆಸಕ್ತಿಯೂ ಇಲ್ಲ ನಿಮಗೆ. ನಿಮ್ಮ ಮೈಂಡ್ ತುಂಬ ನ್ಯಾರೋ ಆಗಿದೆ ; ನೀವು ಸುಮ್ಮನೇ ಮನೆಯಿಂದ ಆಫೀಸಿಗೆ, ಆಫೀಸಿನಿಂದ ಮನೆಗೆ ಎಡತಾಕುತ್ತಿದ್ದೀರಿ, ಸುಮ್ಮನೇ ಒಂದೇ ಸವನೇ ಹಣದ ಹಿಂದೆ ಬಿದ್ದಿರುವಿರಿ ಅಷ್ಟೇ. ಅಥವಾ ಅಧಿಕಾರದ ಹಿಂದೆ ಓಡುತ್ತಿದ್ದೀರಿ. ನಿಮಗೆ ಬದುಕಿನ ಹಲವು ಆಯಾಮಗಳ ಜೊತೆ ಈಗ ಯಾವ ಸಂಬಂಧವೂ ಇಲ್ಲ. ಬೆರಗು ಹೊಂದುವುದೆಂದರೆ, ಎಲ್ಲದರ ಜೊತೆ ರಿಲೇಟ್ ಆಗುವುದು ಮತ್ತು ನಿರಂತರವಾಗಿ ಗ್ರಹಿಸುವುದು.
ಝೆನ್ ಮಾಸ್ಟರ್ ರ್ಯೊಕನ್ ಗೆ ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳೊಡನೆ ಎಷ್ಟು ಒಂದಾಗಿದ್ದನೆಂದರೆ ತಾನೇ ಸ್ವತಃ ೈಮಗುವಾಗಿಬಿಟ್ಟಿದ್ದ. ಅವ ಜೀಸಸ್ ಹೇಳುವ ಮಗುವಿನಂಥ ಮನುಷ್ಯ. ರ್ಯೊಕನ್ , ಮನುಷ್ಯರು ಇಷ್ಟು ಮುಗ್ಧರಾಗಿರಬಲ್ಲರು ಎಂಬುದನ್ನ ನಂಬಲು ಸಾಧ್ಯವಾಗದಷ್ಟು ಮುಗ್ಧ ಮನುಷ್ಯ. ಅವನೊಳಗೆ ಒಂದಿನಿತೂ ಕಪಟ, ಒಂದಿಷ್ಟೂ ಜಾಣತನವಿರಲಿಲ್ಲ. ಅವನನ್ನು ಪುಟ್ಟ ಹುಚ್ಚ ಎಂದೇ ಸುತ್ತಲಿನ ಜನ ಗುರುತಿಸುತ್ತಿದ್ದರು.
ಮಕ್ಕಳೊಡನೆ ಆಟ ಆಡುವುದು ರ್ಯೊಕನ್ ನ ಅತ್ಯಂತ ಪ್ರೀತಿಯ ಹವ್ಯಾಸಗಳ್ಳಲ್ಲೊಂದು. ಒಂದು ದಿನ ರ್ಯೊಕನ್ ಮಕ್ಕಳೊಡನೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದ. ಅಂದು ಅವನದು ಅಡಗಿಕೊಳ್ಳುವ ಪಾಳಿ. ರ್ಯೊಕನ್ ಓಡಿ ಹೋಗಿ ಹೊಲದಲ್ಲಿನ ಹುಲ್ಲಿನ ಬಣಿವೆಯೊಳಗೆ ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಂಡ. ಮಕ್ಕಳು ಹುಡುಕಿ ಹುಡುಕಿ ಸುಸ್ತಾದರು, ಕತ್ತಲಾಗುತ್ತ ಬಂದದ್ದರಿಂದ ಮಕ್ಕಳೆಲ್ಲ ತಮ್ಮ ತಮ್ಮ ಮನೆಗೆ ಹೋಗಿಬಿಟ್ಟರು. ಆದರೆ ಇದ್ಯಾವುದೂ ಗೊತ್ತಿರದ ರ್ಯೊಕನ್ ಹುಲ್ಲಿನ ಬಣಿವೆಯೊಳಗೆ ಬಚ್ಚಿಟ್ಟುಕೊಂಡು ಆಟ ಮುಂದುವರೆಸಿದ್ದ. ಮರುದಿನ ಮುಂಜಾನೆ ಹೊಲದ ಕೆಲಸಕ್ಕೆ ಬಂದ ರೈತ, ಬಣಿವೆಯಲ್ಲಿ ಅಡಗಿಕೊಂಡು ಕುಳಿತಿದ್ದ ರ್ಯೊಕನ್ ನನ್ನು ಗಮನಿಸಿ ಜೋರಾಗಿ ಕೂಗಿದ,
“ ಮಾಸ್ಟರ್ ರ್ಯೊಕನ್ ಇಲ್ಲೇನು ಮಾಡುತ್ತಿದ್ದೀಯ ? “
ರ್ಯೊಕನ್ ಓಡಿ ಬಂದು ರೈತನ ಬಾಯಿ ಮುಚ್ಚಿದ,
“ ಮೆತ್ತಗೆ ಮಾತಾಡು ಮಕ್ಕಳು ಕೇಳಿಸಿಕೊಂಡುಬಿಟ್ಟಾರು. ಈ ಸಲ ನಾನು ಗೆಲ್ಲುವುದು ಖಚಿತ. ಮಕ್ಕಳೊಡನೆ ಬೆಟ್ಸ್ ಕಟ್ಟಿದ್ದೇನೆ. “
ಇಡೀ ರಾತ್ರಿ ಆಟ ಬಿಟ್ಟುಹೋದ ಮಕ್ಕಳಿಗಾಗಿ ಹುಲ್ಲಿನ ಬಣಿವೆಯಲ್ಲಿ ಕಾಯುತ್ತಿದ್ದ ಮಾಸ್ಟರ್ ರ್ಯೊಕನ್. ಇಂಥ ಮುಗ್ಧತೆ ಝೆನ್. ಇಂಥ ಮುಗ್ಧತೆ ದಿವ್ಯವಾದದ್ದು, ಇದಕ್ಕೆ ಒಳ್ಳೆಯದು ಕೆಟ್ಟದ್ದು ಎನ್ನುವ ಭೇದಭಾವವಿಲ್ಲ. ಈ ಜಗತ್ತು ಆ ಜಗತ್ತು ಎನ್ನುವ ತಾರತಮ್ಯವಿಲ್ಲ. ಇಂಥ ಮುಗ್ಧತೆಯೇ ಜಗತ್ತನ್ನು ಕಾಯುವ ಸಾಚಾತನ. ಮತ್ತು ಇಂಥ ಸಾಚಾತನವೇ ಧರ್ಮದ ಮೂಲ ತಿರುಳು.

