ವಿಮರ್ಶಾತ್ಮಕ ಧ್ವನಿ ಯಾವತ್ತೂ ನಿಮ್ಮದಲ್ಲ. ನೀವು ಮಗುವಾಗಿದ್ದಾಗ, ನಿಮ್ಮ ಅಪ್ಪ ಹೇಳುತ್ತಿದ್ದ, “ಇದನ್ನು ಮಾಡಬೇಡ” ಮತ್ತು ನಿನ್ನ ಅವ್ವ ಹೇಳುತ್ತಿದ್ದಳು, “ಅದನ್ನು ಮಾಡಬೇಡ”. ನೀವು ಮಾಡಬೇಕೆಂದಿರುವುದು ಯಾವತ್ತೂ ಅವರ ಪ್ರಕಾರ ತಪ್ಪಾಗಿರುತ್ತಿತ್ತು, ಮತ್ತು ಯಾವುದನ್ನು ಮಾಡಲು ನಿಮಗೆ ಇಷ್ಟವಿರುತ್ತಿರಲಿಲ್ಲವೋ ಅದು, ಅವರ ಪ್ರಕಾರ ಸರಿ ಮತ್ತು ಅದನ್ನು ನೀವು ಮಾಡಬೇಕೆಂದು ಅವರು ಬಯಸುತ್ತಿದ್ದರು – ಓಶೋ ರಜನೀಶ್, ಕನ್ನಡಕ್ಕೆ : ಚಿದಂಬರ ನರೇಂದ್ರ
ನನ್ನೊಳಗಿರುವ
ಎಷ್ಟೊ ಸುಂದರ ಪ್ರಾಣಿಗಳು
ಎಷ್ಟೊ ಅದ್ಭುತ ಪಕ್ಷಿಗಳು
ನಿನ್ನ ಹೃದಯದ ಸಾಂಗತ್ಯಕ್ಕೆ
ತವಕದಿಂದ ತುಡಿಯುತ್ತಿರುವಾಗ,
ಯಾಕೆ ನಿನ್ನೊಳಗಿನ ಕತ್ತೆಗೆ
ನನ್ನೊಳಗಿನ ಕತ್ತೆಯೊಂದಿಗೆ
ಮಾತನಾಡಲು
ಅವಕಾಶ ಮಾಡಿ ಕೊಡುತ್ತೀಯಾ?
- ಹಾಫಿಜ್.
ಈಗ ನೀವು ಎರಡು ಮನಸ್ಥಿತಿಯಲ್ಲಿದ್ದೀರಿ. ನೀವು ಮಾಡಬೇಕಿರುವ “ಸರಿ” ಸಂಗತಿ ಯಾವುದೆಂದು ನಿಮಗೆ ಗೊತ್ತು. ಆದರೆ ಅದನ್ನು ಮಾಡಲು ನಿಮಗೆ ಇಷ್ಟವಿಲ್ಲ. ಆದರೆ ಅದನ್ನು ಮಾಡಲೇ ಬೇಕಾಗಿರುವುದರಿಂದ ಕರ್ತವ್ಯ ಎಂದುಕೊಂಡು ನೀವು ಆ ಕೆಲಸವನ್ನು ಮಾಡುತ್ತೀರಿ. ಆದರೆ ಆ ಕೆಲಸದಲ್ಲಿ ನಿಮಗೆ ಖುಶಿ ಇಲ್ಲ, ಆ ಕೆಲಸವನ್ನು ಮಾಡಿ ನಿಮ್ಮನ್ನು ನೀವು ನಾಶ ಮಾಡಿಕೊಳ್ಳುತ್ತಿದ್ದೀರಿ ಎನ್ನುವುದು ನಿಮ್ಮ ಭಾವ, ನಿಮ್ಮ ಸಮಯ, ಬದುಕು ಹಾಳಾಗುತ್ತಿದೆ ಎನ್ನುವುದು ನಿಮ್ಮ ಫೀಲ್. ನಿಮಗೆ ಇಷ್ಟವಾಗಿರುವುದನ್ನು ನೀವು ಮಾಡಿದಾಗ, ತಪ್ಪಿತಸ್ಥ ಭಾವ ನಿಮ್ಮನ್ನು ಕಾಡುತ್ತದೆ, ಏನೋ ತಪ್ಪು ಕೆಲಸ ಮಾಡುತ್ತಿದ್ದೇನೆ ಎಂದು ನಿಮಗೆ ಅನಿಸುತ್ತದೆ. ಆದ್ದರಿಂದ ನಿಮ್ಮ ತಂದೆ ತಾಯಿಯರಿಂದ ಹೊರಬನ್ನಿ ಅಷ್ಟೇ. ಇದು ಬಹಳ ಸರಳ, ಏಕೆಂದರೆ ಈಗ ನೀವು ಬೆಳೆದು ದೊಡ್ಡವರಾಗಿದ್ದೀರಿ ಮತ್ತು ನಿಮ್ಮ ತಂದೆ ತಾಯಂದಿರು ಈಗ ಇಲ್ಲ; ಆದರೆ ಅವರು ನಿಮ್ಮ ಮೈಂಡ್ ನಲ್ಲಿದ್ದಾರೆ.
ನಿಮ್ಮ ತಂದೆ ತಾಯಂದಿರನ್ನ ಕೊಂದುಬಿಡಿ ಎಂದು ನಾನು ಹೇಳುತ್ತಿಲ್ಲ, ಭೂತಕಾಲದ ಹ್ಯಾಂಗೋವರ್ ನಿಂದ ಹೊರಬನ್ನಿ ಎಂದಷ್ಟೇ ಹೇಳುತ್ತಿದ್ದೇನೆ. ಈಗ ನೀವು ಮಗು ಅಲ್ಲ ; ಈ ಸಂಗತಿಯನ್ನು ಗುರುತಿಸಿ. ಜವಾಬ್ದಾರಿಯನ್ನು ನಿಮ್ಮ ಕೈಗೆತ್ತಿಕೊಳ್ಳಿ; ಇದು ನಿಮ್ಮ ಬದುಕು. ಆದ್ದರಿಂದ ನಿಮಗೆ ಏನು ಇಷ್ಟವೋ ಅದನ್ನು ಮಾಡಿ, ಮತ್ತು ಯಾವತ್ತೂ ನಿಮಗೆ ಇಷ್ಟವಿಲ್ಲದಿರುವುದನ್ನು ಮಾಡಬೇಡಿ. ಈ ಬಗ್ಗೆ ನೀವು ಸಂಕಟ ಅನುಭವಿಸಬೇಕಾಗಿ ಬಂದರೆ, ಅನುಭವಿಸಿ. ಈ ಬದುಕಿನಲ್ಲಿ ಪ್ರತಿಯೊಂದಕ್ಕೂ ಬೆಲೆ ತೆರಲೇ ಬೇಕು, ಯಾವುದೂ ಪುಕ್ಕಟೆಯಾಗಿ ಸಿಗುವುದಿಲ್ಲ.
ನಿಮಗೆ ಇಷ್ಟವಿರುವುದನ್ನು ಜಗತ್ತು ಖಂಡಿಸುತ್ತಿದೆಯಾದರೆ, ಗುಡ್ ಪರವಾಗಿಲ್ಲ! ಖಂಡನೆ ಮಾಡಲಿ ಬಿಡಿ. ಇದರ ಪರಿಣಾಮಗಳನ್ನು ಸ್ವೀಕರಿಸಿ; it is worth. ನಿಮಗೆ ಇಷ್ಟವಿರದೇ ಇರುವುದನ್ನು ಜಗತ್ತು ಸುಂದರ ಎಂದು ಹೊಗಳುತ್ತದೆಯಾದರೆ, ಇದು ಅರ್ಥಹೀನ, ಏಕೆಂದರೆ ನೀವು ನಿಮ್ಮ ಬದುಕನ್ನು ಆನಂದಿಸುತ್ತಿಲ್ಲ. ಇದು ನಿಮ್ಮ ಬದುಕು ಮತ್ತು ಯಾರಿಗೆ ಗೊತ್ತು, ನಾಳೆ ನೀವು ಸಾಯಬಹುದು. ಹಾಗಾಗಿ ಬದುಕಿರುವಾಗಲೇ ನೀವು ಈ ಬದುಕನ್ನು ಆನಂದಿಸಿ! ಇದು ಬೇರೆ ಯಾರ ವ್ಯವಹಾರವೂ ಅಲ್ಲ, ನಿಮ್ಮ ತಂದೆ ತಾಯಿಯರದೂ ಅಲ್ಲ, ಸಮಾಜದ್ದೂ ಅಲ್ಲ. ಇದು ನಿಮ್ಮ ಬದುಕು.

