ದೇಹದ ಲಯವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಮತ್ತು ಇದು ಬದಲಾಗದಂಥದು. ನೀವು ಹುಟ್ಟಿದಾಗಲೇ ಇದು ನಿಶ್ಚಯವಾಗಿರುವಂಥದು – ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಸುಮ್ಮನೇ ನಿಮ್ಮ ದೇಹದ ಲಯವನ್ನು ಗಮನಿಸಿ. ನಿಮಗೆ ಬೇಗನೇ ನಿದ್ದೆ ಮಾಡಬೇಕೆಂದು ಅನಿಸುತ್ತಿದೆಯಾದರೆ, ಹಾಗೆಯೇ ಮಾಡಿ. ಮರುದಿನ ಮುಂಜಾನೆ ಬೇಗ ಎದ್ದೇಳಿ. ಮತ್ತು ಒಮ್ಮೆ ನಿಮಗೆ ಯಾವ ಸಮಯ ಸೂಕ್ತ ಎನ್ನುವುದು ಗೊತ್ತಾದ ಮೇಲೆ ಅದೇ ಸಮಯವನ್ನು ನಿರಂತರವಾಗಿಸಿ. ಸಾಧ್ಯವಾದಷ್ಟು ಇದೇ ಸಮಯಕ್ಕೆ ಹೊಂದಿಕೊಳ್ಳಲು ಪ್ರಯತ್ನ ಮಾಡಿ. ಕೆಲವೊಮ್ಮೆ ಸಾಧ್ಯವಾಗದೇ ಹೋದರೆ ಅಡ್ಡಿಇಲ್ಲ. ಆದರೆ ಈ ಲಯದಿಂದ ತಪ್ಪಿಸಿಕೊಳ್ಳುವುದನ್ನ ರೂಟೀನ್ ಮಾಡಿಕೊಳ್ಳಬೇಡಿ.
ಈಗ ದೇಹದ ಲಯದ ಬಗ್ಗೆ ಹೆಚ್ಚು ಸಂಶೋಧನೆಗಳಾಗಿವೆ, ಮತ್ತು ಇದನ್ನು ಬದಲಾಯಿಸುವ ಯಾವ ಸಾಧ್ಯತೆಯೂ ಇಲ್ಲ ಎಂದನಿಸುತ್ತದೆ. ಇದು ನಿಮ್ಮ ಜೀವಕೋಶಗಳಲ್ಲಿಯೇ ನಿರ್ಧರಿತವಾಗುವಂಥದು; ಈ ಜೀವಕೋಶಗಳನ್ನು ಪ್ರೋಗ್ರಾಂ ಮಾಡಲಾಗಿದೆ. ಸೂರ್ಯ ಮುಳುಗುತ್ತಿದ್ದಂತೆಯೇ ನಿದ್ದೆ ಹೋಗುವ ಹಲವು ಪಕ್ಷಿಗಳಿವೆ. ಈ ಪಕ್ಷಿಗಳನ್ನ ಒಂದು ಕೃತಕ ಚೇಂಬರ್ ನಲ್ಲಿ ಕೂಡಿಹಾಕಿ, ಹೊರಗೆ ರಾತ್ರಿ ಇರುವಾಗ ಒಳಗೆ ಬೆಳಕು ಇರುವಂತೆ, ಹೊರಗೆ ಬೆಳಕು ಇರುವಾಗ ಒಳಗೆ ರಾತ್ರಿ ಇರುವಂತೆ ವ್ಯವಸ್ಥೆ ಮಾಡಿದಾಗ, ಕೆಲವು ದಿನಗಳಲ್ಲಿಯೇ ಈ ಪಕ್ಷಿಗಳು ಮಾನಸಿಕ ಕ್ಷೋಭೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲಾರಂಭಿಸಿದವು ಅಥವಾ ಬೇರೆ ಹಕ್ಕಿಗಳನ್ನು ಕೊಲ್ಲಲಾರಂಭಿಸಿದವು. ಆದರೆ ಅವುಗಳ ದೇಹದ ಲಯವನ್ನು ಬದಲಾಯಿಸುವುದು ಸಾಧ್ಯವಾಗಲಿಲ್ಲ. ಅವು ಚೇಂಬರನಲ್ಲಿ ಹಗಲು ಇದ್ದಾಗ ಮಲಗುತ್ತಿದ್ದವು, ರಾತ್ರಿಯಾಗಿದ್ದಾಗ ಎಚ್ಚರವಾಗಿರುತ್ತಿದ್ದವು. ಈ ಕಾರಣವಾಗಿಯೇ ಅವುಗಳ ದೇಹ ಕಿರಿಕಿರಿ ಅನುಭವಿಸಲು ಶುರು ಮಾಡಿತು. ಮತ್ತು ಇದು ಅವುಗಳ ದೇಹದ ಇತರ ಸಿಸ್ಟಂ ಗಳ ಮೇಲೆ ಪರಿಣಾಮ ಬೀರಲು ಶುರು ಮಾಡಿತು. ಆದ್ದರಿಂದ ಈ ಯಾವುದಕ್ಕೂ ಆಸ್ಪದ ನೀಡದೇ ನಿಮ್ಮ ನಿಮ್ಮ ದೇಹದ ಲಯವನ್ನು ಪಾಲಿಸಿ.
ಒಂದು ದಿನ ಸುಝೂಕಿ ರೋಶಿ ಅವರ ಶಿಷ್ಯೆ, ಅವರ ಹತ್ತಿರ ಬಂದು ತನ್ನ ಮನಸ್ಸಿನ ತಳಮಳವನ್ನು ನಿವೇದಿಸಿಕೊಂಡಳು.
“ ಮಾಸ್ಟರ್, ಯಾಕೋ ಗೊತ್ತಿಲ್ಲ ನಿಮ್ಮ ಮೇಲೆ ನನಗೆ ವಿಪರೀತ ಪ್ರೇಮ ಉಕ್ಕಿ ಬರುತ್ತಿದೆ. ಕೂತಲ್ಲಿ, ನಿಂತಲ್ಲಿ ಸದಾ ನಿಮ್ಮ ಯೋಚನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ, ತುಂಬ ಗೊಂದಲವಾಗುತ್ತಿದೆ. “
ಮಾಸ್ಟರ್ ರೋಶಿ ಉತ್ತರಿಸಿದರು, “ ಹುಡುಗಿ, ಇದು ತಪ್ಪು ಒಪ್ಪಿನ ಪ್ರಶ್ನೆ ಅಲ್ಲ. ನಿನ್ನ ಗುರುವಿನ ಬಗ್ಗೆ ಯಾವ ಭಾವನೆ ಹೊಂದಲೂ ನೀನು ಸ್ವತಂತ್ರಳು. ಭಾವನೆಗಳನ್ನು ಹತ್ತಿಕ್ಕಬೇಡ, ಮುಕ್ತವಾಗಿ ವ್ಯಕ್ತಪಡಿಸು “
ಹುಡುಗಿ ಆಶ್ಚರ್ಯಚಕಿತಳಾಗಿ ಮಾಸ್ಟರ್ ರೋಶಿಯನ್ನೇ ನೋಡತೊಡಗಿದಳು “
ಮಾಸ್ಟರ್ ರೋಶಿ ಅವಳ ತಲೆ ಮೇಲೆ ಕೈಯಿಟ್ಟು ಹೇಳಿದರು.
“ ಹೆದರಬೇಡ ಹುಡುಗಿ, ನನ್ನ ಹತ್ತಿರ ಇಬ್ಬರಿಗೂ ಸಾಕಾಗುವಷ್ಟು ಶಿಸ್ತು ಇದೆ. “
*********************************

