ಸಂಪೂರ್ಣ ಸ್ವೀಕೃತಿ ಎನ್ನುವುದು ಮಾಸ್ಟರ್ ಕೀ ; ಇದರ ಸಹಾಯದಿಂದ ಎಲ್ಲ ಬಾಗಿಲುಗಳನ್ನೂ ತೆರೆಯಬಹುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಹೊಸ ಬಾಗಿಲೊಂದು
ತೆರೆದುಕೊಳ್ಳುತ್ತದೆ ತಾನೇ ತಾನಾಗಿ .
ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ಸ್ವಾಗತಿಸು ತೋಳು ಚಾಚಿ,
ಅವನು ತನ್ನ ಜೊತೆಗೆ ತಂದ ಯಾತನೆಗಳ
ಪಕ್ಕೆ ಹಿಂಡಿ ತಮಾಷೆ ಮಾಡು.
ದುಃಖಗಳು,
ಚಿಂದಿ ಬಟ್ಟೆಯ ಕೌದಿಯ ಹಾಗೆ
ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.
ಈ ಕಳಚುವಿಕೆ ಮತ್ತು
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ
ಒದಗಿ ಬರುವ ಅಮೃತದ ಹನಿಗಳು
~ ರೂಮಿ
ಸಂಪೂರ್ಣ ಸ್ವೀಕೃತಿ ಎನ್ನುವ ಮಾಸ್ಟರ್ ಕೀ ಯಿಂದ ತೆರೆಯಲು ಸಾಧ್ಯವಾಗದ ಯಾವ ಬೀಗವೂ ಇಲ್ಲ. ಇದು ಎಲ್ಲ ಬೀಗಗಳಿಗೂ ಸರಿಹೊಂದುವ ಕೀಲಿ ಕೈ – ಏಕೆಂದರೆ ನೀವು ಒಂದು ಸಂಗತಿಯನ್ನು ಸಂಪೂರ್ಣವಾಗಿ ಸ್ವೀಕಾರ ಮಾಡಿದ ಕ್ಷಣದಲ್ಲಿಯೇ ನಿಮ್ಮ ಇರುವಿಕೆಯಲ್ಲಿ (being) ಬದಲಾವಣೆಯೊಂದು ಶುರುವಾಗುತ್ತದೆ ಏಕೆಂದರೆ ಈಗ ಯಾವ ಬಿಕ್ಕಟ್ಟಿಗೂ ಜಾಗ ಇಲ್ಲ. ಈಗ ನೀವು ‘ಎರಡು’ ಅಲ್ಲ. ಸಂಪೂರ್ಣ ಸ್ವೀಕೃತಿಯಲ್ಲಿ ನೀವು ‘ಒಂದು’ ಆಗಿದ್ದೀರಿ, ನೀವು ಐಕ್ಯತೆಯನ್ನು ( unity) ಸಾಧಿಸಿದ್ದೀರಿ.
ನಿಮ್ಮ ಐಕ್ಯತೆ, ನಿಮ್ಮ ಸಂಕೀರ್ಣತೆ ನಿಮಗೆ ನೆನಪಿರಲಿ. ಇದು ಆನಂದದಾಯಕ. ಬಯಕೆಗಳು ಸುಂದರ. ನೀವು ಸ್ವೀಕಾರ ಮಾಡುತ್ತೀರಾದರೆ ಉತ್ಕಟತೆ ಒಳ್ಳೆಯದು ಮುಂದೆ ಇದು ಕಾರುಣ್ಯವಾಗುತ್ತದೆ. ನೀವು ಬಯಕೆಗಳನ್ನು ಸ್ವೀಕಾರ ಮಾಡುವಿರಾದರೆ, ಮುಂದೆ ಬಹುತೇಕ ಇದೇ ಎನರ್ಜಿ ಬಯಕೆರಾಹಿತ್ಯ ವಾಗಿ ಬದಲಾಗುತ್ತದೆ. ಇದು ಬಯಕೆಗಳಲ್ಲಿ ಒಳಗೊಂಡಿದ್ದ ಅದೇ ಎನರ್ಜಿ. ಯಾವಾಗ ನೀವು ಬಯಕೆಗಳನ್ನು ಸ್ವೀಕಾರ ಮಾಡುತ್ತೀರೋ ಆಗ ಪ್ರಶಾಂತತೆಯನ್ನು ಸಾಧಿಸುವಿರಿ, ಮತ್ತು ಆಗ ನಿಮ್ಮ ಎನರ್ಜಿ ಸರಾಗವಾಗಿ ಸಹಜವಾಗಿ ಹರಿಯಲು ಆರಂಭಿಸುತ್ತದೆ. ನೀವು ವಸ್ತುಗಳನ್ನ, ಸಂಗತಿಗಳನ್ನ ಅವು ಇರುವ ಹಾಗೆ ಗಮನಿಸಲು ಶುರು ಮಾಡುವಿರಿ. ನೀವು ಈ ಬಯಕೆ, ಆ ಬಯಕೆ ಎಂದು ಯಾವುದರಲ್ಲೂ ಆಳವಾಗಿ ಮುಳುಗಿ ಹೋಗುವುದಿಲ್ಲ. ನೀವು ಅದನ್ನು ಈಗ ಸ್ವೀಕಾರ ಮಾಡಿದ್ದೀರಿ ಆದ್ದರಿಂದ ಯಾವ ಸಮಸ್ಯೆಯೂ ಇಲ್ಲ.
ಯಾವುದನ್ನ ನೀವು ಬಯಕೆ ಎನ್ನುತ್ತೀರೋ ಅದು ಬಯಕೆರಹಿತತೆಯಾಗುತ್ತದೆ. ಈಗ ಸಧ್ಯ ಅದು ಕಲ್ಲಿದ್ದಲು. ಅದು ವಜ್ರವಾಗಿ ಮಾರ್ಪಾಡು ಗೊಳ್ಳಬಹುದು; ಅದು ಅಮೂಲ್ಯವಾಗಬಹುದು. ಬಯಕೆ ಇಲ್ಲದ ವ್ಯಕ್ತಿಯೊಬ್ಬನನ್ನು ಕಲ್ಪನೆ ಮಾಡಿಕೊಳ್ಳಿ – ಅವನಲ್ಲಿ ಜೀವಶಕ್ತಿ ಇಲ್ಲ. ಹಾಗೆ ನೋಡಿದರೆ ಅವನು ಬದುಕಿಯೂ ಇಲ್ಲ, ಬಯಕೆ ಇಲ್ಲದೇ ಬದುಕುವುದು ಹೇಗೆ ಸಾಧ್ಯ? ಬಯಕೆರಹಿತತೆ ಎನ್ನುವುದು ಋಣಾತ್ಮಕವಲ್ಲ, ಅದು ಎಲ್ಲ ಬಯಕೆಗಳ ಆತ್ಯಂತಿಕ ಧನಾತ್ಮಕತೆ. ಯಾವಾಗ ನಿಮಗೆ ಬಯಕೆಗಳ ಬಗ್ಗೆ ಗೊತ್ತೊ, ಅವುಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಇದೆಯೋ, ಮತ್ತು ಯಾವಾಗ ನೀವು ಈ ಬಯಕೆಗಳನ್ನು ಬದುಕಿದ್ದೀರೋ , ಅನುಭವಿಸಿದ್ದೀರೋ ಆಗ ನೀವು ಆ ಬಯಕೆಗಳನ್ನು ಮೀರಿದ ಹಾಗೆ, ನೀವು ಪ್ರಬುದ್ಧರಾದ ಹಾಗೆ.
ಝೆನ್ ಮಾಸ್ಟರ್ ತಾಜಿ ಸಾವಿನ ಹಾಸಿಗೆಯಲ್ಲಿದ್ದ. ಮಾಸ್ಟರ್ ತಾಜಿಗೆ ಟೋಕಿಯೋದ ಮಾರ್ಕೇಟ್ ನಲ್ಲಿ ಸಿಗುವ ಒಂದು ವಿಶೇಷ ಕೇಕ್ ಎಂದರೆ ತುಂಬಾ ಪ್ರೀತಿ ಎನ್ನುವುದು ಅವನ ಶಿಷ್ಯರಿಗೆ ಗೊತ್ತಿತ್ತು .
ಶಿಷ್ಯರು ಟೋಕಿಯೋದ ಅಂಗಡಿಗಳನ್ನೆಲ್ಲ ಹುಡುಕಾಡಿ ತಾಜಿ ಗಾಗಿ ಆ ವಿಶೇಷ ಕೇಕ್ ಕೊಂಡು ತಂದರು.
ಮಾಸ್ಟರ್ ತಾಜಿ ತುಂಬ ಖುಶಿಯಿಂದ ಶಿಷ್ಯರು ತಂದ ಕೇಕ್ ತಿಂದ. ಅವನು ಕೇಕ್ ತಿಂದಾದ ಮೇಲೆ ಮಾಸ್ಟರ್ ಗೆ , ಅವರಿಗಾಗಿ ಒಂದು ಕೊನೆಯ ವಾಕ್ಯ ಹೇಳುವಂತೆ ಶಿಷ್ಯರು ವಿನಂತಿ ಮಾಡಿದರು.
ಮಾಸ್ಟರ್ ತಾಜಿ, ತುಟಿಗೆ ಅಂಟಿಕೊಂಡಿದ್ದ ಕೇಕ್ ನ್ನು ನಾಲಿಗೆಯಿಂದ ನೆಕ್ಕುತ್ತಾ ಗಂಟಲು ಸರಿ ಮಾಡಿಕೊಂಡ
“ ಬುದ್ಧನ ಪ್ರಕಾರ……. ಕ್ಷಮಿಸಿ ಕ್ಷಮಿಸಿ….ನೀವು ತಂದ ಕೇಕ್ ತುಂಬ ಚೆನ್ನಾಗಿತ್ತು “
ಮಾತು ಮುಗಿಸುತ್ತ ಮಾಸ್ಟರ್ ತಾಜಿ ನೆಲಕ್ಕೊರಗಿ ತೀರಿಕೊಂಡ.
*******************^**********

