ತಂದೆ ತಾಯಿಯೊಂದಿಗೆ ಒಂದು understanding ಗೆ ಬರುವುದು ಬಹಳ ಒಳ್ಳೆಯದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತನಲ್ಲಿ
ಕಳಂಕವಿಲ್ಲ, ದೋಷವಿಲ್ಲ,
ಆತ ಪರಿಪೂರ್ಣ.
ಹೀಗಾಗಿ ಯಾವ ಸವಾಲುಗಳೂ ಇಲ್ಲ
ಇಂಥವನನ್ನು ಪ್ರೀತಿಸುವುದಕ್ಕೆ.
ಸಮಸ್ಯೆ ಎದುರಾಗೋದೇ
ನಮ್ಮ ಜೊತೆ ಇರುವ ಸಂಗಾತಿಗಳನ್ನು
ಅವರ ಎಲ್ಲ ಶಕ್ತಿ, ದೌರ್ಬಲ್ಯ,
ಅಪೂರ್ಣತೆಗಳೊಂದಿಗೆ
ಅವರು ಇದ್ದ ಹಾಗೇ
ಪ್ರೀತಿಸಲು ಮುಂದಾದಾಗ.
ನೆನಪಿರಲಿ,
ನಮಗೆ ಯಾವುದನ್ನು ಪ್ರೀತಿಸುವ ಸಾಮರ್ಥ್ಯವಿರುತ್ತದೆಯೋ
ನಾವು ಅದನ್ನು ಮಾತ್ರ
ತಿಳಿದುಕೊಳ್ಳಬಲ್ಲೆವು ಪೂರ್ತಿಯಾಗಿ.
ಬೇರೆ ಯಾವ ತಿಳುವಳಿಕೆಯೂ ಇಲ್ಲ
ಪ್ರೇಮದ ಹೊರತಾಗಿ.
ಭಗವಂತನ ಸೃಷ್ಟಿಯನ್ನು
ಪ್ರೀತಿಸುವುದ ಕಲಿಸುವತನಕ
ನಾವು ಭಗವಂತನನ್ನು
ಪ್ರೇಮಿಸುವುದೂ ಸಾಧ್ಯವಿಲ್ಲ
ತಿಳಿದುಕೊಳ್ಳುವುದಂತೂ
ಇನ್ನೂ ದೂರದ ಮಾತು.
~ ಶಮ್ಸ್
ಗುರ್ಜೇಫ್ ಹೇಳುತ್ತಿರುತ್ತಾನೆ, “ನಿಮ್ಮ ತಂದೆ ತಾಯಿಯೊಂದಿಗೆ ಉತ್ತಮ ಸಂವಾದ ಸಾಧ್ಯವಾಗದೇ ಹೋದರೆ ನೀವು ನಿಮ್ಮ ಬದುಕನ್ನ ಮಿಸ್ ಮಾಡಿಕೊಳ್ಳುತ್ತೀರಿ”. ನಿಮ್ಮ ಮತ್ತು ನಿಮ್ಮ ತಂದೆತಾಯಿಯ ನಡುವೆ ಒಂದು ಮುನಿಸು ಉಳಿದು ಹೋದರೆ, ನಿಮ್ಮೊಳಗೆ ಯಾವತ್ತೂ ಸಮಾಧಾನ ಇರುವುದಿಲ್ಲ. ನೀವು ಎಲ್ಲೇ ಇದ್ದರೂ ನಿಮ್ಮೊಳಗೆ ಒಂದು ತಪ್ಪಿತಸ್ಥ ಭಾವ ಉಳಿದುಬಿಡುತ್ತದೆ. ಇದನ್ನು ಮರೆಯುವುದು, ಕ್ಷಮಿಸುವುದು ನಿಮಗೆ ಸಾಧ್ಯವಾಗುವುದಿಲ್ಲ…… ತಂದೆ ತಾಯಿಯರ ಜೊತೆಗಿನದು ಕೇವಲ ಸಾಮಾಜಿಕ ಸಂಬಂಧವಲ್ಲ. ಈ ಸಂಬಂಧ ಕಾರಣವಾಗಿಯೇ ನೀವು ರೂಪಿತವಾಗಿರುವುದು. ನೀವು ಈ ಸಂಬಂಧದ ಭಾಗ, ನೀವು ಈ ಮರದ ಒಂದು ಕೊಂಬೆ. ನೀವು ಇನ್ನೂ ಅವರ ಬೇರುಗಳ ಭಾಗವಾಗಿದ್ದೀರಿ.
ತಂದೆ ತಾಯಿ ತೀರಿಕೊಂಡಾಗ, ನಿಮ್ಮ ಆಳದೊಳಗಿನ ಏನೋ ಒಂದು ತೀರಿ ಹೋಗುತ್ತದೆ. ತಂದೆ ತಾಯಿ ತೀರಿಕೊಂಡಾಗ, ಮೊದಲ ಬಾರಿಗೆ ನೀವು ಏಕಾಕಿ ಭಾವವನ್ನ, ಅಭದ್ರತೆಯನ್ನ ಅನುಭವಿಸುತ್ತೀರಿ. ಆದ್ದರಿಂದ ಅವರು ಬದುಕಿರುವಾಗ, ನಿಮ್ಮ ನಡುವೆ ಒಂದು understanding, ಒಂದು ಸಂವಾದ ಸಾಧ್ಯವಾಗುವ ಎಲ್ಲವನ್ನೂ ಪ್ರಯತ್ನ ಮಾಡಿ. ಆಗ ಸಂಗತಿಗಳು ತಿಳಿಯಾಗುತ್ತವೆ ಮತ್ತು ಅಕೌಂಟ್ಸ್ ಗಳು ಕ್ಲೋಸ್ ಆಗುತ್ತವೆ. ಆಗ ಅವರು ನಿಮ್ಮಿಂದ ದೂರವಾದಾಗ (ಒಂದಿಲ್ಲೊಂದು ದಿನ ಇದು ಆಗೇ ಆಗುತ್ತದೆ) ನಿಮಗೆ ಯಾವ ತಪ್ಪಿತಸ್ಥ ಭಾವ ಕಾಡುವುದಿಲ್ಲ, ನೀವು ಪಶ್ಚಾತಾಪ ಪಡುವುದಿಲ್ಲ. ಇದು ನಿಮಗೆ ಅವರ ಬಗ್ಗೆ, ಅವರಿಗೆ ನಿಮ್ಮ ಬಗ್ಗೆ ಇರುವ ಬಿಕ್ಕಟ್ಟುಗಳನ್ನ ತಿಳಿಯಾಗಿಸಿ, ಇಬ್ಬರಲ್ಲೂ ಖುಶಿಯನ್ನು ನೆಲೆಗೊಳಿಸುತ್ತದೆ.
ನಸ್ರುದ್ದೀನ್ ನ ಮಗನಿಗೆ ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿತ್ತು.
“ ನಿನ್ನ ಬಗ್ಗೆ ನನಗೆ ಹೆಮ್ಮೆ ಮಗನೇ. ಏನಾದರೂ ಒಂದು ಕೇಳು, ನಿನಗೆ ಖಂಡಿತ ಕೊಡುತ್ತೇನೆ”. ನಸ್ರುದ್ದೀನ್ ಮಗನಿಗೆ ಹೇಳಿದ.
ಅಪ್ಪನ ಔದಾರ್ಯ ಕಂಡು ಮಗನಿಗೆ ಖುಶಿಯ ಜೊತೆಗೆ ಗಾಬರಿಯೂ ಆಯಿತು. “ ಅಪ್ಪ ವಿಚಾರ ಮಾಡಲು ಒಂದು ದಿನ ಕೊಡು” ಮಗ ಮನವಿ ಮಾಡಿದ.
“ಖಂಡಿತ” ನಸ್ರುದ್ದೀನ್ ಮಗನ ಮನವಿಯನ್ನು ಪುರಸ್ಕರಿಸಿದ.
ಮಾರನೆಯ ದಿನ ಅಪ್ಪನ ಬಳಿ ಬಂದ ನಸ್ರುದ್ದೀನ್ ನ ಮಗ, ತನ್ನ ಬೇಡಿಕೆಯನ್ನು ಮಂಡಿಸಿದ, “ ಅಪ್ಪ ನನಗೆ ಒಂದು ಕತ್ತೆ ಕೊಡಿಸು”
“ವಿಚಾರ ಮಾಡಲು ನೀನು ಒಂದು ದಿನ ಕೇಳಿದ್ದೆ. ನಾನು ನಿನಗೆ ಒಂದು ದಿನ ಕೊಟ್ಟೆ. ಅಲ್ಲಿಗೆ ನಿನ್ನ ಒಂದು ಬೇಡಿಕೆ ಮುಗಿದು ಹೋಯಿತು. ಈಗ ನೀನು ಎರಡನೇಯ ಬೇಡಿಕೆ ಕೇಳುವ ಹಾಗಿಲ್ಲ”.
ನಸ್ರುದ್ದೀನ್ ಮಗನ ಬೇಡಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದ.
********************************

