ಇತಿಹಾಸ ( History ): ಓಶೋ 365 #Day 303

ಇತಿಹಾಸ ಬಹಳ ಕುರೂಪಿಯಾದದ್ದು. ನೆನಪಿಟ್ಟುಕೊಳ್ಳಲು ತಕ್ಕುದಾದ ಇತಿಹಾಸದ ಮಟ್ಟವನ್ನು ಮನುಷ್ಯ ಇನ್ನೂ ಮುಟ್ಟಿಲ್ಲ. ಇತಿಹಾಸ ಮನುಷ್ಯನಿಗೆ ಇನ್ನೂ ದುಃಸ್ವಪ್ನವೇ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ನನ್ನ ಮನೆ ಹೇಳಿತು.
“ಬಿಟ್ಟು ಹೋಗಬೇಡ ನನ್ನ
ನನ್ನೊಳಗೆ ನಿನ್ನ ಪರಂಪರೆಯೇ ಅಡಗಿದೆ.”

ರಸ್ತೆ ಹೇಳುತ್ತದೆ
“ಬಾ, ನನ್ನ ಹಿಂಬಾಲಿಸು
ನಾನು ನಿನ್ನ ಭವಿಷ್ಯ”

ಮನೆ ಮತ್ತು ರಸ್ತೆಗೆ
ಏನು ಗೊತ್ತು?
ನನಗೆ ಇತಿಹಾಸದ ಪರಿವಿಲ್ಲ
ಭವಿಷ್ಯದ ಭಯವಿಲ್ಲವೆಂದು.

ಇರುವಿಕೆಯಲ್ಲಿಯೂ
ನಾನು ಜಂಗಮ
ಹೋಗುವಿಕೆಯಲ್ಲಿಯೂ
ಸ್ಥಾವರ.

ಪ್ರೀತಿ ಮತ್ತು ಸಾವು
ಮಾತ್ರ
ಇದನ್ನು ಬದಲಾಯಿಸಬಲ್ಲದು.

~ ಖಲೀಲ್ ಜಿಬ್ರಾನ್

ತನ್ನ ಬಗ್ಗೆ ಹೇಳಿಕೊಳ್ಳಬಹುದಾದಂಥಹುದನ್ನು ಮಾನವತೆ ಇನ್ನೂ ಸೃಷ್ಟಿ  ಮಾಡಿಕೊಂಡಿಲ್ಲ.  ಬುದ್ಧ ಅಥವಾ ಕ್ರಿಸ್ತನ ಥರ ಅಲ್ಲೊಂದು ಇಲ್ಲೊಂದು ಅಪರೂಪದ ಉದಾಹರಣೆಗಳಿರಬಹುದು ಆದರೆ ಇವು ಎಲ್ಲೋ ಹೊಳೆಯುವ ದೂರದ ನಕ್ಷತ್ರಗಳಂತೆ.

ಮಾನವತೆ ಬೆಳೆದು ಬಂದಿರುವುದೇ ಹಿಂಸೆ, ಯುದ್ಧ ಮತ್ತು ಹುಚ್ಚುತನಗಳ ಮೂಲಕ ಆದ್ದರಿಂದ ಇದೆಲ್ಲವನ್ನು ಮರೆತು ಬಿಡುವುದೇ ಒಳ್ಳೆಯದು. ಹಿಂದೆ ಆದದ್ದು ಬಹಳ ಭಾರವಾದದ್ದು ಮತ್ತು ಇದು ನಮಗೆ ಯಾವ ಸಹಾಯವನ್ನೂ ಮಾಡುವುದಿಲ್ಲ. ಬದಲಾಗಿ ಇದು ನಿಮ್ಮ ಬುದ್ಧಿ ಮನಸ್ಸುಗಳನ್ನ ಭ್ರಷ್ಟಗೊಳಿಸುವುದು. ಹಿಂದೆ ಆಗಿರುವುದನ್ನ ಗಮನಿಸಿದರೆ ಮಾನವತೆಗೆ ಯಾವ ಭವಿಷ್ಯ ಇಲ್ಲ ಅನಿಸುತ್ತದೆ. ಇದು ಭವಿಷ್ಯವನ್ನು ಬಹಳ ನಿರಾಶಾದಾಯಕ ಮಾಡುತ್ತದೆ.

ಬರೆಯ ಬೇಕಾದಂಥ ಮತ್ತು ಓದಬೇಕಾದಂಥ ಇತಿಹಾಸ ಇನ್ನೂ ಸೃಷ್ಟಿಯಾಗಿಲ್ಲ. ಮತ್ತು ಇದು ಇತಿಹಾಸದ ಬಗೆಗಿನ ನಮ್ಮ ಆಸಕ್ತಿಯನ್ನೇ ಕುಂದಿಸುವಂಥದು. ಈಗ ಇದು ಕೇವಲ ಮೃತ ಸಂಗತಿಗಳಿಗೆ ಸಂಬಂಧಿಸಿದ್ದಾಗಿದೆ. ಆದರೆ ಇತಿಹಾಸ ಎನ್ನುವುದು ಈಗ, ಈ ಸಧ್ಯಕ್ಕೆ ಇರುವ ಸಂಗತಿಗಳಿಗೆ ಸಂಬಂಧಿಸಿದ್ದಾಗಿರಬೇಕು.

ಇತಿಹಾಸವನ್ನು ಮಾತ್ರ ಮರೆಯಬೇಡಿ. ನಿಮ್ಮ ನಿಮ್ಮ ಜೀವನ ಚರಿತ್ರೆಯನ್ನು ಮರೆಯಿರಿ. ಮತ್ತು ಪ್ರತಿ ಮುಂಜಾವನ್ನು ಪೂರ್ತಿ ಹೊಸದಾಗಿ, ಈ ಮುಂಚೆ ಇದನ್ನು ಬದುಕಿರಲಿಲ್ಲವೋ ಏನೋ ಎಂಬಂತೆ ಶುರು ಮಾಡಿ. ಧ್ಯಾನ ಎನ್ನುವುದು ಇದೇ : ಪ್ರತಿ ಕ್ಷಣವನ್ನು ಹೊಸದಾಗಿ ಶುರು ಮಾಡುವುದು, ತಾಜಾ ಇಬ್ಬನಿಯಂತೆ, ಹಿಂದಿನ ಯಾವುದೂ ನೆನಪಿನಲ್ಲಿರದಂತೆ. ಯಾವಾಗ ನಿಮಗೆ ಹಿಂದಿನ ಯಾವುದೂ ನೆನಪಿರುವುದಿಲ್ಲವೋ ಆಗ ನೀವು ಯಾವ ಹಿಂದಿನದನ್ನೂ ಭವಿಷ್ಯಕ್ಕೆ ಕ್ಯಾರಿ ಮಾಡುವುದಿಲ್ಲ. ಯಾವಾಗ ಹಿಂದಿನದು ಮಾಯವಾಗುತ್ತದೆಯೋ ಆಗ ಮುಂದಿನದು ಕೂಡ ಮಾಯವಾಗುತ್ತದೆ. ಆಗ ಅವೆರಡೂ ಒಂದಾಗಿ ಕೇವಲ “ ಸಧ್ಯ” ಮಾತ್ರ ಉಳಿದುಕೊಳ್ಳುತ್ತದೆ. ಅದು ಮಾತ್ರವೇ  ಶುದ್ಧ ಶಾಶ್ವತತೆ.

ಒಂದು ದಿನ ಮುಲ್ಲಾ ನಸ್ರುದ್ದೀನ್ ನ ಗೆಳೆಯ ಕೇಳಿಕೊಂಡ.

“ ನಸ್ರುದ್ದೀನ್, ನಾನು ಈ ಊರು ಬಿಟ್ಟು ನಾನು ಬೇರೆ ಊರಿಗೆ ಹೋಗುತ್ತಿದ್ದೇನೆ. ನಿನ್ನ ಗುರುತಿಗಾಗಿ ನೀನು ಯಾಕೆ ನಿನ್ನ ಉಂಗುರ ನನಗೆ ಕೊಡಬಾರದು? ಆ ಉಂಗುರ ನೋಡಿದಾಗಲೆಲ್ಲ ನಾನು ನಿನ್ನ ನೆನಪಿಸಿಕೊಳ್ಳುತ್ತೇನೆ “

“ ಉಂಗುರ ನೀನು ಕಳೆದುಕೊಂಡು ಬಿಡಬಹುದು ಆಗ ನೀನು ನನ್ನ ಮರತೇಬಿಡುತ್ತೀಯ, ಹೀಗೆ ಮಾಡಿದರೆ ಹೇಗೆ? ನಾನು ನಿನಗೆ ಉಂಗುರ ಕೊಡುವುದಿಲ್ಲ, ನೀನು ಉಂಗುರವಿಲ್ಲದ ಖಾಲಿ ಬೆರಳು ನೋಡಿಕೊಂಡಾಗಲೆಲ್ಲ ನಿನಗೆ ನನ್ನ ನೆನಪಾಗುತ್ತದೆ. ನನ್ನ ಮರೆಯುವ ಸಾಧ್ಯತೆಯೇ ಇರುವುದಿಲ್ಲ.“

ಮುಲ್ಲಾ ನಗುತ್ತ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.