ನೀವು ಪ್ರೇಮದಲ್ಲಿ ನಿಮ್ಮ ಬೇರುಗಳನ್ನು ಕಂಡುಕೊಂಡಿದ್ದೀರಾದರೆ ನೀವು ನಿಜವಾಗಿ ಬೇರೂರಿದ್ದೀರಿ. ಇದನ್ನು ಬಿಟ್ಟು ನೆಲೆಯಾಗುವ ಬೇರೆ ಯಾವ ವಿಧಾನವೂ ಇಲ್ಲ. ~ ಓಶೋ ರಜನೀಶ್ ; ಕನ್ನಡಕ್ಕೆ: ಚಿದಂಬರ ನರೇಂದ್ರ
‘ಪ್ರೇಮದ ಹುಡುಕಾಟ’ ಕ್ಕೆ
ನಮ್ಮನ್ನು ಪೂರ್ಣವಾಗಿ ಪರಿವರ್ತನೆ ಮಾಡುವ ಶಕ್ತಿಯಿದೆ.
ಈ ಹುಡುಕಾಟದ ಹಾದಿಯಲ್ಲಿ ಪಕ್ವಗೊಳ್ಳದ
ಯಾವ ಸಾಧಕನ ಬಗ್ಗೆಯೂ
ನನಗೆ ಗೊತ್ತಿಲ್ಲ.
ಪ್ರೇಮದ ದಾರಿಯಲ್ಲಿ ನೀವು
ಮೊದಲ ಹೆಜ್ಜೆ ಇಟ್ಟ ಕ್ಷಣದಲ್ಲಿಯೇ
ಬದಲಾವಣೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ
ನಿಮ್ಮ ಒಳಗೂ ಮತ್ತು ಹೊರಗೂ.
~ ಶಮ್ಸ್
ನಿಮ್ಮ ಬಳಿ ಹಣ ಇರಬಹುದು, ಮನೆ ಇರಬಹುದು, ಸುರಕ್ಷತೆ ಇರಬಹುದು ಅಥವಾ ಬ್ಯಾಂಕ್ ಬ್ಯಾಲೆನ್ಸ್ ಇರಬಹುದು ಆದರೆ ಈ ಯಾವುದೂ ನಿಮ್ಮನ್ನು ಬೇರೂರುವಂತೆ ಮಾಡುವುದಿಲ್ಲ. ಈ ಎಲ್ಲವೂ ಪ್ರೇಮದ ಬಡ ಪರ್ಯಾಯಗಳು. ನಿಮ್ಮನ್ನು ಬೇರೂರುವಂತೆ ಮಾಡುವುದರ ಬದಲಿಗೆ ಇವು ನಿಮ್ಮ ಆತಂಕ ಹೆಚ್ಚಾಗಲು ಕಾರಣವಾಗಬಹುದು, ಏಕೆಂದರೆ ಒಮ್ಮೆ ನಿಮ್ಮ ಬಳಿ ಭೌತಿಕ ಸುರಕ್ಷತೆ- ಹಣ, ಸಾಮಾಜಿಕ ಸ್ಟೇಟಸ್ ಸೇರಿಕೊಂಡಾಗ, ಎಲ್ಲಿ ಇವು ನಿಮ್ಮನ್ನು ತೊರೆದು ಹೋಗಬಹುದೋ ಎಂದು ನೀವು ಆತಂಕಿತರಾಗುತ್ತೀರಿ. ಅಥವಾ ನೀವು ಹೆಚ್ಚು ಹೆಚ್ಚು ಇವುಗಳನ್ನು ಹೊಂದಲು ಹೆಣಗಾಡುತ್ತೀರಿ, ಏಕೆಂದರೆ ಅತೃಪ್ತಿ ಎನ್ನುವದಕ್ಕೆ ಮಿತಿಯೇ ಇಲ್ಲ.
ಪ್ರೇಮ ಎನ್ನುವುದು ನೀವು ಬೇರೂರಬೇಕಾದ ಭೂಮಿ. ಹೇಗೆ ಗಿಡ ಮರಗಳು ನೆಲದಲ್ಲಿ ಬೇರೂರಿವೆಯೋ ಹಾಗೆಯೇ ಮನುಷ್ಯರು ಪ್ರೇಮದಲ್ಲಿ ಬೇರೂರಬೇಕು. ನಮ್ಮ ಬೇರುಗಳು ಅದೃಶೃವಾದವು ಆದ್ದರಿಂದ ಕಾಣುವ ಯಾವುದೂ ನಮಗೆ ಸಹಾಯ ಮಾಡುವುದಿಲ್ಲ. ನಮಗೆ ಹಣ ಕಾಣಿಸುತ್ತದೆ, ಮನೆ ಕಾಣಿಸುತ್ತದೆ, ಸಾಮಾಜಿಕ ಸ್ಥಾನ ಮಾನ ಕಾಣಿಸುತ್ತದೆ . ಆದರೆ ನಾವು ಅದೃಶ್ಯ ಬೇರುಗಳಿರುವ ಗಿಡ ಮರಗಳು. ಆದ್ದರಿಂದ ನೀವು ಆ ಅದೃಶ್ಯ ನೆಲವನ್ನು ಹುಡುಕಬೇಕು – ಇದನ್ನೇ ನೀವು ಪ್ರೇಮ ಎನ್ನಿ, ದೈವಿಕತೆ ಎನ್ನಿ, ಪ್ರಾರ್ಥನೆ ಎನ್ನಿ – ಬಹುಶಃ ಅದು ಇದೇ ಇರುತ್ತದೆ, ಅದೃಶ್ಯಮಯ, ಅಮೂರ್ತಮಯ, ನಿಗೂಢಮಯ , ಇದನ್ನು ಹಿಡಿಯುವುದು ಅಸಾಧ್ಯ, ಬದಲಾಗಿ ನಿಮ್ಮನ್ನು ಹಿಡಿದುಕೊಳ್ಳಲು ನೀವು ಅದಕ್ಕೆ ಅವಕಾಶ ಮಾಡಿಕೊಡಬೇಕು.

