ಒಂದು ಕೈಯಿಂದ ಖಾಲೀತನವನ್ನ ಸೃಷ್ಟಿಮಾಡಿಕೊಳ್ಳುತ್ತಲೇ ಇನ್ನೊಂದು ಕೈಯಿಂದ ಪೂರ್ಣತ್ವವನ್ನು ಹುಟ್ಟು ಹಾಕಿ. ಯಾವಾಗ ನೀವು ನಿಜವಾಗಿ ಖಾಲೀ ಆಗುವಿರೋ ಆಗ ಪೂರ್ಣತ್ವ ನಿಮ್ಮ ಖಾಲೀತನದೊಳಗೆ ಇಳಿಯಲಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ನಾನು ನನ್ನ
ಗುರುವನ್ನ ಕೇಳಿದೆ,
ನಮ್ಮಿಬ್ಬರ ನಡುವೆ ಇರುವ
ಅಂಥ ವ್ಯತ್ಯಾಸವಾದರೂ ಏನು?
ಹಾಫಿಜ್, ಇಲ್ಲಿ ಕೇಳು,
ಕಾಡೆಮ್ಮೆಗಳ ಗುಂಪೊಂದು
ನಮ್ಮ ಮನೆಯೊಳಗೆ ನುಗ್ಗಿ
ನಮ್ಮ ಖಾಲಿ ಭಿಕ್ಷಾ ಪಾತ್ರೆಗಳನ್ನ
ಕೆಳಗೆ ಬೀಳಿಸಿದರೆ
ನಿನ್ನ ಪಾತ್ರೆಯೊಳಗಿಂದ
ಬೀಳುವುದಿಲ್ಲ ಕೆಳಗೆ ಒಂದು
ಹನಿಯೂ.
ಆದರೆ ಭಗವಂತ
ನನ್ನ ತಟ್ಟೆಯೊಳಗೆನೋ ಇರಿಸಿದ್ದಾನೆ
ಒಂದು ಅದೃಶ್ಯ ಅಪರೂಪವನ್ನ,
ಅದೇನಾದರೂ ಬಿದ್ದರೆ ಕೆಳಗೆ
ಕೊಚ್ಚಿಕೊಂಡು ಹೋಗುತ್ತದೆ
ಈ ಇಡೀ ಜಗತ್ತು.
– ಹಾಫೀಜ್
ಒಮ್ಮೊಮ್ಮೆ ನೀವು ಒಂದೇ ಥರದ ಧ್ಯಾನಕ್ಕೆ ಅಂಟಿಕೊಂಡು ಬಿಡುತ್ತೀರಿ. ಇಂಥ ಚಟ ಒಂದು ಬಗೆಯ ದಾರಿದ್ರ್ಯಕ್ಕೆ ಕಾರಣವಾಗುತ್ತದೆ. ಹಲವಾರು ಆಯಾಮಗಳು ನಿಮ್ಮನ್ನು ಪೆನಿಟ್ರೇಟ್ ಮಾಡಲು ನೀವು ಅವಕಾಶ ಮಾಡಿಕೊಡಬೇಕು. ಕೊನೆಯ ಪಕ್ಷ ನೀವು ಎರಡು ಬಗೆಯ ಧ್ಯಾನಗಳಿಗಾದರೂ ತೆರೆದುಕೊಳ್ಳಬೇಕು : ಒಂದು ನಿಷ್ಕ್ರಿಯ ಮತ್ತು ಇನ್ನೊಂದು ಕ್ರಿಯಾತ್ಮಕ. ಇದು ಮೂಲಭೂತ ಅವಶ್ಯಕತೆ; ಇಲ್ಲವಾದರೆ ನಿಮ್ಮ ವ್ಯಕ್ತಿತ್ವ ಸಮತೋಲವನ್ನು ಕಳೆದುಕೊಳ್ಳುತ್ತದೆ.
ಸಾಕ್ಷಿಯಾಗುವುದು ಒಂದು ನಿಷ್ಕ್ರಿಯ ಪ್ರಕ್ರಿಯೆ. ಇಲ್ಲಿ ನಾವು ಮಾಡುವುದು ಏನೂ ಇಲ್ಲ. ಇದು ಒಂದು ಬಗೆಯ ಮಾಡದೇ ಇರುವುದು. ಇದು ಬೌದ್ಧ ಧ್ಯಾನ – ಬಹಳ ಒಳ್ಳೆಯದು, ಆದರೆ ಅಪೂರ್ಣವಾದದ್ದು. ಆದ್ದರಿಂದ ಇಲ್ಲಿ ಸಮತೋಲನ ಇಲ್ಲ. ಬೌದ್ಧರು ಪ್ರಶಾಂತರಾಗಿದ್ದಾರೆ, ಸಮಾಧಾನಿಗಳಾಗಿದ್ದಾರೆ ನಿಜ ಆದರೆ ಅವರು ಆನಂದವನ್ನು ಮಿಸ್ ಮಾಡಿಕೊಂಡಿದ್ದಾರೆ.
ಬದುಕಿಗೆ ಬುದ್ಧಿಸಂ ಒಂದು ಸುಂದರವಾದ ಅಪ್ರೋಚ್. ಆದರೆ ಇದು ಅಪೂರ್ಣ. ಇಲ್ಲಿ ಏನೋ ಒಂದು ಮಿಸ್ಸಿಂಗ್. ಇದರೊಳಗೆ ಯಾವ ಅನುಭಾವ ( mysticism), ಯಾವ ಕಾವ್ಯ, ಯಾವ ಪ್ರಣಯವೂ ಇಲ್ಲ; ಇದು ಕೇವಲ ಗಣಿತ, ಆತ್ಮದ ರೇಖಾಗಣಿತ, ಆತ್ಮದ ಕಾವ್ಯ ಅಲ್ಲ. ಮತ್ತು ಡಾನ್ಸ್ ಇಲ್ಲದ ಯಾವುದರ ಬಗ್ಗೆಯೂ ತೃಪ್ತರಾಗಬೇಡಿ. ಮೌನವಾಗಿರಿ, ಆದರೆ ನಿಮ್ಮ ಮೌನವನ್ನ ಆನಂದವನ್ನು ಸಮೀಪಿಸಲು ಸಲಕರಣೆಯಾಗಿ ಬಳಸಿ.
ಕೆಲವು ಡಾನ್ಸಿಂಗ್ ಧ್ಯಾನಗಳನ್ನ, ಸಿಂಗಿಂಗ್ ಧ್ಯಾನಗಳನ್ನ, ಸಂಗೀತವನ್ನ ಪ್ರ್ಯಾಕ್ಟೀಸ್ ಮಾಡಿ. ಆಗ ಏಕಕಾಲದಲ್ಲಿ ನಿಮ್ಮ ಆನಂದಿಸುವ ಸಾಮರ್ಥ್ಯ, ಖುಶಿಪಡುವ ಸಾಮರ್ಥ್ಯ ವೃದ್ಧಿಯಾಗುತ್ತವೆ.

