ಪ್ರೇಮ ಎಂದರೆ ಗಡಿಗಳಿಂದ ಮುಕ್ತರಾಗುವುದು. ಆ ಅದೃಶ್ಯ ಗೆರೆ ಮಾಯವಾಗಬೇಕು, ಆದ್ದರಿಂದಲೇ ಹೆದರಿಕೆ, ಏಕೆಂದರೆ ಅದು ನಮ್ಮ ಮೃಗೀಯ ಪರಂಪರೆ. ಒಮ್ಮೆ ನೀವು ಪ್ರೇಮದ ಸ್ಥಿತಿಯೊಳಗೆ ಪ್ರವೇಶ ಮಾಡುವಿರಾದರೆ, ನಿಮ್ಮ ಮೃಗೀಯ ಪರಂಪರೆಯನ್ನು ದಾಟಿ ಹೋಗುವಿರಿ, ಮೊದಲ ಬಾರಿಗೆ ನೀವು ಮನುಷ್ಯರಾದುವಿರಿ, ನಿಜವಾದ ಮನುಷ್ಯ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜಿಡ್ಡು ಕೃಷ್ಣಮೂರ್ತಿ
ಒಂದು ಸುಂದರ ವಿಷಯ ಹೇಳುತ್ತಾರೆ.
“ ಆಳ ಧ್ಯಾನದಲ್ಲಿ,
ಗಮನಿಸುವವ ಸ್ವತಃ ತಾನೇ ಗಮನಿಸಲ್ಪಡುವ ಸಂಗತಿಯಾಗುತ್ತಾನೆ”
ಇದು ಅಸಂಗತ ಅಲ್ಲ, ಹದಿನಾರಾಣೆ ಸತ್ಯ.
ಜಿಡ್ಡು ಏನು ಹೇಳುತ್ತಿದ್ದಾರೆ?
ಅಕಸ್ಮಾತ್, ನೀವು ಧ್ಯಾನದಲ್ಲಿ
ಹೂವನ್ನು ಗಮನಿಸುತ್ತಿದ್ದರೆ
ನೀವೂ ಹೂವಾಗುತ್ತೀರ ಎಂದೆ?
ಹಾಗಲ್ಲ. ಆದರೆ ಒಂದರ್ಥದಲ್ಲಿ ಹೌದು,
ಭೌತಿಕವಾಗಿ ನೀವು ಹೂವಾಗುವುದಿಲ್ಲ,
ನೋಡುವ ಬುದ್ಧಿ-ಮನಸ್ಸು ಇಲ್ಲದಾಗ
ನಿಮ್ಮ ಮತ್ತು ಹೂವಿನ ನಡುವಿನ ಗಡಿ ಮಾಯವಾಗುತ್ತದೆ,
ಚಿತ್ರ ಹಿನ್ನಲೆಯೊಂದಿಗೆ ಒಂದಾಗುತ್ತದೆ,
ಆಗ ನಿಮ್ಮೊಳಗೆ ಹೂವು ಮತ್ತು ಹೂವಿನೊಳಗೆ ನೀವು.
ನಿಜ ಜೀವನದಲ್ಲಿಯೂ
ಕೆಲ ಕ್ಷಣಗಳಮಟ್ಟಿಗಾದರೂ
ನಿಮಗೆ ಈ ಅನುಭವ ಸಾಧ್ಯವಾಗುವುದು.
ಯಾರನ್ನಾದರೂ ನೀವು ತೀವ್ರವಾಗಿ ಪ್ರೀತಿಸಿದಾಗ
ನಿಮ್ಮಿಬ್ಬರ ನಡುವಿನ ಗಡಿ ನಾಶವಾಗಿ,
ಅಂತರ ಇಲ್ಲವಾಗಿ,
ನೀವಿಬ್ಬರೂ ಒಂದಾಗಿ ಅಖಂಡವಾಗುವ ಭಾವ.
ನೀವು ನಿಜವಾಗಿ ಸಂಪದ್ಭರಿತವಾದ, ಫಲವತ್ತಾದ, ಪ್ರಚಂಡ ವೈವಿಧ್ಯಮಯ ಬದುಕನ್ನು ಬಾಳ ಬಯಸುವಿರಾದರೆ, ಗಡಿಗಳನ್ನು ನಾಶಪಡಿಸುವುದರ ಹೊರತಾಗಿ ಬೇರೆ ದಾರಿ ಇಲ್ಲ. ಹೆಚ್ಚು ಹೆಚ್ಚು ಮನುಷ್ಯರೊಂದಿಗೆ ಸಂಪರ್ಕ ಸಾಧಿಸುವುದು ಒಂದೇ ಉಪಾಯ. ಹೆಚ್ಚು ಹೆಚ್ಚು ಜನರಿಗೆ ನಿಮ್ಮ ವಲಯವನ್ನು ದಾಟಿ ಒಳಗೆ ಬರಲು, ನಿಮ್ಮನ್ನು ಪ್ರವೇಶ ಮಾಡಲು ಅವಕಾಶ ಮಾಡಿಕೊಡಿ.
ಯಾರಾದರೂ ಹರ್ಟ್ ಆಗಬಹುದು, ಇದು ಭಯ ಆದರೆ ಈ ರಿಸ್ಕ್ ತೆಗೆದುಕೊಳ್ಳಲೇ ಬೇಕು. ಬೇರೆ ಯಾರೂ ನಿಮ್ಮನ್ನು ಪ್ರವೇಶ ಮಾಡದಂತೆ ಇಡೀ ಬದುಕು ನಿಮ್ಮನ್ನು ನೀವು ಕಾಪಾಡಿಕೊಳ್ಳುತ್ತೀರಾದರೆ ನೀವು ಜೀವಂತವಾಗಿ ಬದುಕುತ್ತಿರುವುದರ ಪಾಯಿಂಟ್ ಏನು? ದೈಹಿಕವಾಗಿ ಸಾಯುವ ಮೊದಲೇ ಮಾನಸಿಕವಾಗಿ ಸತ್ತುಹೋಗುತ್ತೀರಿ. ಸಂಬಂಧಗಳ ಹೊರತಾಗಿ ಬೇರೆ ಯಾವ ಬದುಕೂ ಇಲ್ಲವಾದ್ದರಿಂದ ನೀವು ನಿಮ್ಮ ಬದುಕನ್ನ ಬಾಳಿಯೇ ಇಲ್ಲ. ಆದ್ದರಿಂದ ನೀವು ಈ ರಿಸ್ಕ್ ತೆಗೆದುಕೊಳ್ಳಲೇ ಬೇಕು.
ಎಲ್ಲ ಮನುಷ್ಯರೂ ನಿಮ್ಮ ಹಾಗೆಯೇ, ಅತ್ಯಗತ್ಯವಾಗಿ ಮಾನವ ಹೃದಯ ಎನ್ನುವುದು ಒಂದೇ ಬಗೆಯದು. ಆದ್ದರಿಂದ ಜನ ನಿಮ್ಮ ಹತ್ತಿರ ಬರಲು ಅವಕಾಶ ಮಾಡಿಕೊಡಿ. ನೀವು ಹಾಗೆ ಮಾಡುವಿರಾದರೆ ಅವರೂ ನಿಮ್ಮನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತಾರೆ. ಯಾವಾಗ ನಿಮ್ಮಗಳ ಗಡಿಗಳು overlap ಆಗುತ್ತವೆಯೋ ಆಗ ಪ್ರೇಮ ಸಂಭವಿಸುತ್ತದೆ.

