ತತ್ವಜ್ಞಾನಿ ಸತ್ಯವನ್ನು ಅವಿಷ್ಕಾರ ಮಾಡುತ್ತಾನೆ; ಆದರೆ ಅದು ಅನ್ವೇಷಣೆ ಅಲ್ಲ. ಅದು ತತ್ವಜ್ಞಾನಿಯ ಸ್ವಂತದ ಬೌದ್ಧಿಕ ಅವಿಷ್ಕಾರ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ತಾವೋ ಶಾಶ್ವತ, ಅನಂತ.
ಯಾಕೆ ಶಾಶ್ವತ ?
ಅದು ಹುಟ್ಟೇ ಇಲ್ಲ ಎಂದಮೇಲೆ
ಸಾಯುವ ಮಾತೆಲ್ಲಿಂದ ಬಂತು.
ಯಾಕೆ ಅನಂತ ?
ಸ್ವಂತದ್ದು ಏನೂ ಇಲ್ಲ ಎಂದಮೇಲೆ
ಎಲ್ಲಕ್ಕೂ ಒದಗಬಲ್ಲದು ಎಂದೇ ಅರ್ಥ.
ಸಂತ ಹಿಂದಿದ್ದಾನೆ
ಹಾಗೆಂದೇ ತಾವೋ ಮುಂದಿದೆ.
ಯಾವುದಕ್ಕೂ ಅಂಟಿಕೊಂಡಿಲ್ಲ ಎಂದೇ
ತಾವೋ ಎಲ್ಲದರಲ್ಲೂ ಒಂದಾಗಿದೆ.
ತನ್ನಿಂದ ತನ್ನನ್ನು ಕಳೆದುಕೊಂಡಿದ್ದರಿಂದಲೇ
ಪರಿಪೂರ್ಣವಾಗಿ ಮೈದುಂಬಿಕೊಂಡಿದೆ ತಾವೋ.
~ ಲಾವೋತ್ಸೇ
ಸತ್ಯವನ್ನು ಅವಿಷ್ಕಾರ ಮಾಡುವುದು ಸಾಧ್ಯವಿಲ್ಲ. ಯಾವುದೆಲ್ಲವನ್ನು ಅವಿಷ್ಕಾರ ಮಾಡಲಾಗಿದೆಯೋ ಅದೆಲ್ಲವೂ ಅಸತ್ಯ. ಸತ್ಯ ಮೊದಲಿನಿಂದಲೂ ಇರುವಂಥದು. ಅದನ್ನು ಅನ್ವೇಷಣೆ ಮಾಡಲು ಇದರ ಮೇಲಿನ ಪರದೆಯನ್ನು ಸರಿಸಬೇಕಷ್ಟೆ. ಅದನ್ನು ಅವಿಷ್ಕಾರ ಮಾಡುವ ಯಾವ ಅವಶ್ಯಕತೆಯೂ ಇಲ್ಲ. ಏಕೆಂದರೆ ನೀವು ಏನನ್ನ ಅವಿಷ್ಕಾರ ಮಾಡುತ್ತೀರೋ ಅದೆಲ್ಲವೂ ಸುಳ್ಳು. ಸತ್ಯ ಏನು ಎನ್ನುವುದು ನಿಮಗೆ ಗೊತ್ತಿಲ್ಲ; ಅದನ್ನು ನೀವು ಹೇಗೆ ಅವಿಷ್ಕಾರ ಮಾಡುವುದು ಸಾಧ್ಯ? ಅಜ್ಞಾನದಲ್ಲಿ, ಯಾವುದೆಲ್ಲವನ್ನು ಅವಿಷ್ಕರಿಸಲಾಗಿದೆಯೋ ಅದೆಲ್ಲವೂ ನಿಮ್ಮ ಅಜ್ಞಾನದ ಪ್ರೊಜೆಕ್ಷನ್. ಸತ್ಯವನ್ನು ಅವಿಷ್ಕಾರ (invent) ಮಾಡುವುದು ಅಸಾಧ್ಯ, ಅದನ್ನು ಅನ್ವೇಷಣೆ (discover) ಮಾಡಬಹುದು, ಏಕೆಂದರೆ ಅದು ಈಗಾಗಲೇ ಇರುವಂಥದು.
ಇನ್ನೊಂದು ವಿಷಯವೆಂದರೆ, ಸತ್ಯವನ್ನು ಯಾವ ಪರದೆಯಿಂದಲೂ ಕವರ್ ಮಾಡಲಾಗಿಲ್ಲ. ಹಾಗೆ ಕವರ್ ಮಾಡಲಾಗಿರುವುದು ನಿಮ್ಮ ಕಣ್ಣುಗಳನ್ನ. ಸತ್ಯವನ್ನು ಮುಚ್ಚಿಡುವುದು ಅಸಾಧ್ಯ. ಸತ್ಯ, ನಿಮ್ಮ ಕಣ್ಣುಗಳ ಎದುರು ಅತ್ಯಂತ ಸ್ಪಷ್ಚ. ನೀವು ಯಾವ ಕಡೆ ನೋಡಿದರೂ ಸತ್ಯದ ಕಡೆಯೇ ನೋಡುತ್ತಿದ್ದೀರಿ. ನೀವು ಏನು ಮಾಡಿದರೂ ಸತ್ಯವನ್ನೇ ಮಾಡುತ್ತಿದ್ದೀರಿ. ಈ ಬಗ್ಗೆ ನಿಮಗೆ ಗೊತ್ತಿರುವುದು, ಗೊತ್ತಿಲ್ಲದಿರುವುದು ಪಾಯಿಂಟ್ ಅಲ್ಲ.
ಸತ್ಯವನ್ನು ಯಾರು ಅವಿಷ್ಕಾರ ಮಾಡುವುದಿಲ್ಲವೋ, ಯಾರು ಊಹೆ ಮಾಡುವುದಿಲ್ಲವೋ, ಯಾರು ಅಭಿಪ್ರಾಯ ಹೇಳುವುದಿಲ್ಲವೋ, ಯಾರು ತಾರ್ಕಿಕತೆಗೆ ಎಳೆಯುವುದಿಲ್ಲವೋ, ಯಾರು ಸುಮ್ಮನೇ ಸತ್ಯವನ್ನು ಸ್ವೀಕರಿಸುತ್ತಾರೆಯೋ, ಯಾರು ಈ ಕುರಿತು ಮುಕ್ತತೆಯನ್ನು ಹೊಂದಿದ್ದಾರೋ, ಯಾರು ಪ್ರತಿಕ್ರಯಿಸುತ್ತಾರೆಯೋ, ಯಾರು vulnerable ಆಗಿದ್ದಾರೆಯೋ, ಯಾರು ಸತ್ಯಕ್ಕೆ ತೆರೆದುಕೊಂಡಿದ್ದಾರೆಯೋ ಅವರು ಮಾತ್ರ ಸತ್ಯದ ನಿಜವಾದ ಸೀಕರ್. ಸತ್ಯವನ್ನು ಬಯಸುವವರು ಒಂದು ಸಂಗತಿಯನ್ನಂತೂ ಕಲಿಯಲೇ ಬೇಕು. ಅದೇನೆಂದರೆ, ಈ ಬಗ್ಗೆ ಅಪಾರ, ಸಮಾಧಾನ, ಕಾಯುವಿಕೆ, ನಿಷ್ಪಕ್ಷಪಾತವನ್ನು ಹೊಂದಬೇಕು. ಸ್ವೀಕರಿಸಲು ನೀವು ಮುಕ್ತವಾಗಿ ತೆರೆದುಕೊಂಡಿದ್ದಾಗ ಮಾತ್ರ ಸತ್ಯ ಸಂಭವಿಸುತ್ತದೆ.
********************************

