ಪ್ರತಿ ಕ್ಷಣವೂ ಅಣು. ಎರಡು ಕ್ಷಣಗಳಿಗೆ ಯಾವುದೇ ಅನುಕ್ರಮ ( sequence) ಇರುವ ಅವಶ್ಯಕತೆಯಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭೂತ ಕಾಲದ ವಿಷಯ
ವ್ಯಾಖ್ಯಾನಕ್ಕೆ ಮಾತ್ರ ಯೋಗ್ಯ ,
ಭವಿಷ್ಯದ ನಿರೀಕ್ಷೆಗಳು
ಭ್ರಮೆಯ ಭಾಗ.
ಭೂತದಿಂದ ಭವಿಷ್ಯಕ್ಕೆ
ಕಾಲದ ಮೂಲಕ ಸಾಗುವ
ಜಗತ್ತಿನ ಪಯಣ
ಸರಳ ರೇಖೆಯಲ್ಲಲ್ಲ
ಬದಲಾಗಿ ಕಾಲದ ಚಲನೆ
ನಮ್ಮ ಮೂಲಕ, ನಮ್ಮೊಳಗೆ
ಕೊನೆಯಿಲ್ಲದ ಸುರುಳಿಯಾಕಾರದ
ದಿವ್ಯ ಪಥದಲ್ಲಿ.
ಶಾಶ್ವತ ಎಂದರೆ ಅನಂತ ಕಾಲವಲ್ಲ,
ಬದಲಾಗಿ ಶಾಶ್ವತ
ಕಾಲದ ಪರಿವೆಯೇ ಇಲ್ಲದ್ದು.
ಭೂತ, ಭವಿಷ್ಯಗಳನ್ನು
ಬುದ್ಧಿಯ ಪರಿಧಿಯಿಂದ ಹೊರಗಿಟ್ಟು
ವರ್ತಮಾನದ ಕ್ಷಣಗಳಲ್ಲಿ
ಬದುಕು ಸಾಧ್ಯವಾದಾಗ
ಒಳಗೆ ಇಳಿಯುತ್ತದೆ
ಶಾಶ್ವತದ ಬೆಳಕು
~ ಶಮ್ಸ್ ತಬ್ರೀಝಿ
ಏಕ ಆಯಾಮದ ಮೈಂಡ್ ಮಾತ್ರ ನಿರಂತರವಾಗಿ ಒಂದು ಅರ್ಥವನ್ನು ಬಯಸುತ್ತಿರುತ್ತದೆ, ಎಲ್ಲ ಕ್ಷಣಗಳಿಗೂ ಸರಿಹೊಂದುವ ಒಂದು ಅರ್ಥ, ಎಲ್ಲ ಸಂಗತಿಗಳನ್ನೂ ಕಾರಣ-ಪರಿಣಾಮಗಳ ಪರಿಧಿಯಲ್ಲಿ ಕಟ್ಚಿಹಾಕುವ ಅರ್ಥ, ಎಲ್ಲವೂ ಎಲ್ಲಿಗೋ ಚಲಿಸಬೇಕು, ಏನನ್ನೋ ಮುಟ್ಚಬೇಕು, ಎಲ್ಲಿಗೋ ಹೋಗಿ ತಲುಪಬೇಕು ಎನ್ನುವ ಆಶಯ. ಇದು ತಾರ್ಕಿಕ, ಏಕ ಆಯಾಮದ ಮೈಂಡ್ ನ ಕೆಲಸ.
ಆದರೆ ಬದುಕು ಬಹು ಆಯಾಮಗಳನ್ನು ಹೊಂದಿರುವಂಥದು. ನಿಜವಾಗಿಯೂ ಅದಕ್ಕೆ ಯಾವ ಗುರಿ, ಯಾವ ನಿಯತಿಯೂ ಇಲ್ಲ. ಮತ್ತು ಇದಕ್ಕೆ ಯಾವ ಅರ್ಥವೂ ಇಲ್ಲ, ಎಲ್ಲ ಕ್ಷಣಗಳು ಒಂದನ್ನೊಂದು ಸರತಿಯಲ್ಲಿ ಹಿಂಬಾಲಿಸುತ್ತಿವೆ, ಎಲ್ಲಿಗೋ ಹೋಗಿ ತಲುಪುತ್ತವೆ ಎನ್ನುವ ಅರ್ಥದ ಯಾವ ಅರ್ಥವೂ ಇಲ್ಲ. ಇಲ್ಲ, ಬದುಕು ಎಲ್ಲಿಗೂ ಚಲಿಸುತ್ತಿಲ್ಲ. ಅದು ಇದ್ದಲ್ಲಿಯೇ ಕುಣಿದಾಡುತ್ತಿದೆ. ಡಾನ್ಸ್ ಎನ್ನುವುದು ಸರಿಯಾದ ಪದ, ಚಲನೆ ( movement) ಅಲ್ಲ.
ಪ್ರತಿ ಕ್ಷಣವೂ ನೃತ್ಯ, ಎಲ್ಲರೂ ಪ್ರತಿ ಕ್ಷಣವನ್ನು ಅದು ಸಂಭವಿಸುತ್ತಿದ್ದಂತೆಯೇ ಆನಂದಿಸಬೇಕು. ಆಗ ನಿಮ್ಮ ಮೇಲಿನ ಭಾರ ಸಂಪೂರ್ಣವಾಗಿ ಮಾಯವಾಗುತ್ತದೆ. ಭೂತ ಭವಿಷ್ಯಗಳ ಚಿಂತೆ ಮಾಡದೇ, ಮತ್ತು ಯಾವುದರ ಬಗ್ಗೆಯೂ ತಾರ್ಕಿಕ ಸಿಕ್ವೆನ್ಸ್ ಸೃಷ್ಟಿ ಮಾಡಿಕೊಳ್ಳದೆಯೇ, ಕ್ಷಣಗಳಲ್ಲಿಯೇ ಬದುಕುವುದೇ ಸ್ವಾತಂತ್ರ್ಯ .
**************************************

