ಬಹಳಷ್ಟು ಜನರು ಅಸ್ತಿತ್ವವನ್ನು ಸಂಧಿಕಾಲದ ಮೂಲಕವೇ ಪ್ರವೇಶ ಮಾಡಿದ್ದಾರೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ
ಯಾವ ದಿಕ್ಕಾದರೂ ಸರಿ
ಅಂಥ ವ್ಯತ್ಯಾಸವೆನೂ ಆಗದು.
ನಿಮ್ಮ ಗುರಿ ಏನಾದರೂ ಇರಲಿ,
ಆದರೆ ಪ್ರತೀ ಪ್ರಯಾಣ
ನಿಮ್ಮ ಆಂತರ್ಯದ ಪ್ರಯಾಣವಾಗುವುದನ್ನ
ಖಚಿತಪಡಿಸಿಕೊಳ್ಳಿ ದಯಮಾಡಿ.
ನೀವು ನಿಮ್ಮ ಅಂತರಂಗವನ್ನು ಪ್ರವೇಶಿಸಿದಾಗ
ಇಡೀ ಜಗತ್ತನ್ನೇ ಎದುರುಗೊಳ್ಳುತ್ತೀರಿ
ಮತ್ತು ಜಗತ್ತಿನಾಚೆಗೂ ಹೆಜ್ಜೆ ಹಾಕುತ್ತೀರಿ.
~ ಶಮ್ಸ್
ಭಾರತದಲ್ಲಿ ಸಂಧ್ಯಾ- Twilight ಎನ್ನುವ ಪದ ಪ್ರಾರ್ಥನೆಯೊಂದಿಗೆ ಒಂದಾಗಿ ಹೋಗಿದೆ. ಪ್ರಾರ್ಥನೆ ಮಾಡುತ್ತಿರುವ ಸಾಂಪ್ರದಾಯಿಕ ಹಿಂದೂ ನ ನೀವು ಕೇಳಿದರೆ ನಾನು ಸಂಧ್ಯಾವಂದನೆ ಮಾಡುತ್ತಿದ್ದೇನೆ ಎನ್ನುತ್ತಾನೆ ಅವನು. ಸೂರ್ಯೋದಯಕ್ಕಿಂತ ಸ್ವಲ್ಪ ಮುಂಚೆ, ಬಹಳಷ್ಚು ಬದಲಾವಣೆಗಳಾಗುತ್ತಿರುತ್ತವೆ. ಇಡೀ ನಿಷ್ಕ್ರೀಯ ಜಗತ್ತು ಕ್ರಿಯಾತ್ಮಕವಾಗಿ ರೂಪಿತವಾಗುತ್ತಿರುತ್ತದೆ. ನಿದ್ರೆ ಮುಗಿದು, ಕನಸುಗಳು ಮಾಯವಾಗಿವೆ. ಗಿಡ ಮರಗಳು, ಪ್ರಾಣಿ ಪಕ್ಷಿಗಳು ಮತ್ತು ಎಲ್ಲ ಬದುಕು ಹೊಸದಾಗಿ ಮೈ ಮುರಿಯುತ್ತಿವೆ. ಇದು ಪುನರುತ್ಥಾನ. ಇದು ಪ್ರತಿ ದಿನದ ಪವಾಡ. ಆ ಕ್ಷಣದಲ್ಲಿ ನೀವು ನಿಮ್ಮನ್ನು ಅದರೊಂದಿಗೆ ತೇಲಲು ಅವಕಾಶ ಮಾಡಿಕೊಡುವಿರಾದರೆ ಬಹಳ ಎತ್ತರಗಳನ್ನು ತಲುಪುತ್ತೀರಿ.
ಸೂರ್ಯಾಸ್ತದ ಸಮಯದಲ್ಲಿ ಥೇಟ್ ಇದೇ ಥರದ ಬದಲಾವಣೆಗಳು ಸಂಭವಿಸುತ್ತವೆ. ಪ್ರತಿಯೊಂದೂ ಮೌನಗೊಳ್ಳುತ್ತದೆ, ಪ್ರಶಾಂತವಾಗುತ್ತದೆ. ಸಮಾಧಾನ, ನೆಮ್ಮದಿ, ಆಳ ಮೌನ, ಅಸ್ತಿತ್ವವನ್ನು ಕೂಡಿಕೊಳ್ಳುತ್ತವೆ. ಆ ಕ್ಷಣಗಳಲ್ಲಿ ನೀವು ಅಪಾರ ಆಳವನ್ನು ತಲುಪಬಹುದು. ಮುಂಜಾನೆ ನೀವು ಅಪಾರ ಎತ್ತರಗಳನ್ನು ಏರಬಲ್ಲಿರಾದರೆ, ಸಂಜೆ ನೀವು ಅಸಾಧ್ಯ ಆಳಗಳಲ್ಲಿ ಇಳಿಯಬಲ್ಲಿರಿ. ಈ ಎರಡು ಕೂಡ ಬಹಳ ಸುಂದರ. ಈ ಎರಡರ ಮೂಲಕವೂ ನೀವು ನಿಮ್ಮನ್ನು ಮೀರಬಲ್ಲಿರಿ.

