ಪರತತ್ವ ಶಾಸ್ತ್ರ ( Metaphysics): ಓಶೋ 365 #Day 312



Meta ಎನ್ನುವ ಪದದ ಅರ್ಥ beyond. ಎಲ್ಲವೂ physics ಅಲ್ಲ, ಎಲ್ಲವೂ matter ಅಲ್ಲ ಮತ್ತು ಹಾಗೆ ಎಂದು ತಿಳಿದುಕೊಂಡವರು ಬದುಕಿನ ಪರಿಧಿಯ ಬಗ್ಗೆ ತೃಪ್ತಿಯನ್ನು ಹೊಂದಿದವರು. ಅವರು ಸುತ್ತುತ್ತಲೇ ಇರುತ್ತಾರೆ ಹೊರತು ಯಾವತ್ತು ಮನೆಗೆ ಬರುವುದಿಲ್ಲ, ಏಕೆಂದರೆ ಮನೆ ಇರುವುದು ಪರಿಧಿಯಲ್ಲಿ ಅಲ್ಲ, ಕೇಂದ್ರದಲ್ಲಿ. ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ



ಮೆಟಾಫಿಸಿಕ್ಸ್ ಎಂದರೆ, ನೀವು ಎಂದರೆ, ಇಡೀ ಅಸ್ತಿತ್ವ ಎಂದರೆ ಪ್ರಜ್ಞೆ ಹಾಗು ಪ್ರಜ್ಞೆ ಎನ್ನುವುದು ಭೌತಿಕತೆಯ (matter) ಉಪಉತ್ಪನ್ನ ಅಲ್ಲ ಎನ್ನುವುದನ್ನ ತಿಳಿದುಕೊಂಡು ಮನೆಗೆ ಬಂದು ಸೇರಿಕೊಳ್ಳುವುದು. ಹೌದು ಪ್ರಜ್ಞೆ ಹಾಗಲ್ಲ. Matter ಎನ್ನುವುದು ಕೇವಲ ಪ್ರಜ್ಞೆಯ ದೇಹ ಮಾತ್ರ, ಅದರ ಬಟ್ಟೆ, ಅದರ ಹೊದಿಕೆ ಮಾತ್ರ, ಅದರ ತಂಗುದಾಣ ಅದರ ಗುಡಿ ಮಾತ್ರ. ಆದರೆ ಗುಡಿಯೊಳಗಿನ ದೇವರು, ಪ್ರಜ್ಞೆ.  ಮತ್ತು ಈ ದೇವಾಲಯವನ್ನು ನಿರ್ಮಿಸಿರುವುದು ದೇವರಿಗಾಗಿ, vice versa ಅಲ್ಲ. ಪ್ರಜ್ಞೆ (consciousness) ಇರುವ ಕಾರಣಕ್ಕಾಗಿಯೇ ಭೌತಿಕತೆ ( matter) ಇದೆ, vice versa ಅಲ್ಲ.

ಭೌತಿಕತೆ ಎನ್ನುವುದು ನಿದ್ರೆ ಹೋಗಿರುವ ಪ್ರಜ್ಞೆ; ಪ್ರಜ್ಞೆ ಎನ್ನುವುದು ಜಾಗೃತಗೊಂಡಿರುವ ಭೌತಿಕತೆ. ಕೊನೆಗೂ ಇರುವುದು ಒಂದು ಸಂಗತಿ, ಇದನ್ನ x, y, z ಎನ್ನಿ ಅಥವಾ ದೇವರು ಎನ್ನಿ, ಅಥವಾ ಸತ್ಯ ಅಥವಾ ನಿಮಗೆ ಅನಿಸಿದ್ದನ್ನು ಎನ್ನಿ. ಆತ್ಯಂತಿಕವಾಗಿ ಇರುವುದು ಒಂದೇ ಸಂಗತಿ ಆದರೆ ಈ ಒಂದು ಸಂಗತಿಗೆ ಎರಡು ಸ್ಥಿತಿಗಳಿರಬಹುದು ಒಂದು ನಿದ್ರಾವಸ್ಥೆ ಇನ್ನೊಂದು ಜಾಗೃತಾವಸ್ಥೆ. ಯಾವಾಗ ಭೌತಿಕತೆ ತನ್ನ ಬಗ್ಗೆ ಅರಿವನ್ನು ಬೆಳೆಸಿಕೊಳ್ಳುತ್ತದೆಯೋ ಆಗ ಅದು ಪ್ರಜ್ಞೆ. ಯಾವಾಗ ಪ್ರಜ್ಞೆ ತನ್ನ ಅರಿವನ್ನು ಕಳೆದುಕೊಳ್ಳುತ್ತದೆಯೋ ಆಗ ಅದು matter.

ಆದ್ದರಿಂದ ಎಲ್ಲವೂ matter ಎಂದು ತಿಳಿದುಕೊಂಡಿರುವವರು ನಿದ್ದೆಯಲ್ಲಿರುವವರು. ಅವರ ಬದುಕು ಕತ್ತಲಲ್ಲಿ ತಡಕಾಡುತ್ತಿರುತ್ತದೆ. ಅವರಿಗೆ ಬೆಳಕು ಎಂದರೆ ಏನು ಎನ್ನುವುದು ಯಾವತ್ತೂ ಗೊತ್ತಾಗುವುದಿಲ್ಲ, ಅವರು ಎಂದೂ ಮುಂಜಾನೆಯನ್ನು ತಲುಪುವುದಿಲ್ಲ. ಮತ್ತು ಸಹಜವಾಗಿ ಅವರು ಕತ್ತಲಲ್ಲಿ ಎಡವುತ್ತ ತಮ್ಮನ್ನಷ್ಟೇ ಘಾಸಿಗೊಳ್ಳುವುದಿಲ್ಲ ಇತರರಿಗೂ ಗಾಯ ಮಾಡುತ್ತಾರೆ. ಮತ್ತು ಅವರ ಇಡೀ ಬದುಕು ಬಿಕ್ಕಟ್ಟುಗಳಿಂದ, ತಿಕ್ಕಾಟಗಳಿಂದ, ಹಿಂಸೆಯಿಂದ, ಹೊಡೆದಾಟಗಳಿಂದ ತುಂಬಿಕೊಂಡಿರುತ್ತದೆ. ಪ್ರೇಮ ಎಂದರೆ ಏನು ಎನ್ನುವುದು ಅವರಿಗೆ ಯಾವತ್ತೂ ಗೊತ್ತಾಗುವುದಿಲ್ಲ, ಏಕೆಂದರೆ ಪ್ರೇಮ ಸಾಧ್ಯವಾಗುವುದು ಪೂರ್ಣ ಬೆಳಕಿನಲ್ಲಿ ಮಾತ್ರ.

Metaphysics ಎನ್ನುವುದು ಒಂದು ಸಿಹಿ ತಿಳುವಳಿಕೆ, ತರ್ಕ ಎನ್ನುವುದು ಕಹಿ, ಜಗಳಗಂಟ ; ತತ್ವಜ್ಞಾನಿಗಳು ನಿರಂತರವಾಗಿ ಜಗಳಾಡುತ್ತಲೇ ಇರುತ್ತಾರೆ. ತಮ್ಮನ್ನು ತಾವು  ತಿಳಿದುಕೊಂಡವರು ಮಾತ್ರ ಸಿಹಿ, ಮಧುರ; ಅವರ ಹಾಜರಾತಿ ಜೇನಿನಂತೆ.

ಝೆನ್ ಶಾಸ್ತ್ರದಲ್ಲಿ, ಕಲಿಕೆಯಲ್ಲಿ ಪಾರಂಗತನಾದ ಸನ್ಯಾಸಿಯೊಬ್ಬನಿದ್ದ. ತಾನು ಕಲಿತದ್ದನ್ನು ಆತ ಯಾರೊಂದಿಗೂ ಹಂಚಿಕೊಂಡಿರಲಿಲ್ಲ.

ಒಂದು ರಾತ್ರಿ ದಾರಿಯಲ್ಲಿ ಹೋಗುವಾಗ ಆತನ ಹೆಜ್ಜೆ,  ಯಾವುದೋ ಒಂದು ವಸ್ತುವಿನ ಮೇಲೆ ಬಿತ್ತು. ಆತ ಅದನ್ನು ತುಳಿಯುತ್ತಿದ್ದಂತೆಯೇ ಪಿಚಕ್ ಎಂದು ಸದ್ದಾಯಿತು. ಮೊಟ್ಟೆ ಧರಿಸಿದ ಕಪ್ಪೆ ಅದು ಎಂದು ಆತ ಭಾವಿಸಿದ.

ಅವನಿಗೆ ತೀವ್ರ ಆತಂಕವಾಗತೊಡಗಿತು. ಬೌದ್ಧರ ಪ್ರಕಾರ ಜೀವಹತ್ಯೆ ಮಹಾಪಾಪ. ರಾತ್ರಿ ಅವ ನಿದ್ದೆಗಿಳಿಯುತ್ತಿದ್ದಂತೆಯೇ ನೂರಾರು ಕಪ್ಪೆಗಳು ಕನಸಲ್ಲಿ ಬಂದು ಅವನ ಜೀವ ಕೇಳತೊಡಗಿದವು.

ಸನ್ಯಾಸಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಬೆಳಕು ಹರಿಯುತ್ತಿದ್ದಂತೆ ಆತ ರಾತ್ರಿ ಘಟನೆ ನಡೆದ ಜಾಗಕ್ಕೆ ಹೋಗಿ ನೋಡಿದ. ರಾತ್ರಿ ಅವ ತುಳಿದದ್ದು ಕಪ್ಪೆಯಾಗಿರದೇ, ಕಳೆತ ಬದನೆಕಾಯಿಯಾಗಿತ್ತು.

ಆ ಕ್ಷಣದಲ್ಲಿ ಅವನ ಅನಿಶ್ಚಿತತೆ ಕೊನೆಯಾಯಿತು ಮೊದಲ ಬಾರಿಗೆ ಅವನಿಗೆ “ ವಾಸ್ತವದ ಜಗತ್ತು ಇಲ್ಲ “ ಎಂಬ ಬುದ್ಧನ ಮಾತಿನ ಅರ್ಥ ಗೊತ್ತಾಯಿತು, ಝೆನ್ ಆಚರಿಸುವುದು ಹೇಗೆ ಎನ್ನುವುದು ಸ್ಪಷ್ಟವಾಯಿತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.