ನಿಜವಾದ ಧ್ಯಾನಕ್ಕೆ ಬೇಕಾದದ್ದು ಕಲೆ ಅಲ್ಲ ಚಾತುರ್ಯ, ಸಹಜ ಮೌನದೊಳಗೆ ಜಾರಿಕೊಳ್ಳುವ ಚಾತುರ್ಯ. ನೀವು ಗಮನಿಸಿದರೆ, ಪ್ರತಿ ದಿನದ ೨೪ ಗಂಟೆಗಳಲ್ಲಿ ನೀವು ಸಹಜವಾಗಿ ಮೌನವನ್ನು ಕೂಡಿಕೊಳ್ಳುವ ಕೆಲವು ಕ್ಷಣಗಳಾದರೂ ಇರುತ್ತವೆ. ಈ ಕ್ಷಣಗಳು ತಾವೇ ತಾವಾಗಿ ಒದಗಿ ಬರುವಂಥವು; ಇವು ನಮ್ಮ ಗಮನಕ್ಕೆ ಬಂದುರುವುದಿಲ್ಲ ಅಷ್ಟೇ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮನುಷ್ಯನ ಈ ಅಸ್ತಿತ್ವ
ಅತಿಥಿಗಳ ಒಂದು ತಂಗುದಾಣ
ಪ್ರತೀ ಮುಂಜಾನೆ
ಹೊಸ ಹೊಸ ಆಗಮನ.
ಆನಂದ, ದುಗುಡ, ಸ್ವಾರ್ಥ,
ಆಗಾಗ್ಗೆ ಪ್ರಕಟವಾಗುವ
ಕೊಂಚ ತಾತ್ಕಾಲಿಕ ಅರಿವು ಎಲ್ಲ
ಕರೆಯದೇ ಬಂದು ಹೋಗುವ
ಅತಿಥಿಗಳು.
ಎಲ್ಲರನ್ವೂ ಸ್ವಾಗತಿಸಿ, ಸತ್ಕರಿಸಿ.
~ ರೂಮಿ
ನಮಗೆ ಅರಿವಿರಬೇಕಾದ ಮೊದಲ ಸಂಗತಿಯೆಂದರೆ ಯಾವಾಗ ಈ ಮೌನ ಕ್ಷಣಗಳು ಒದಗಿ ಬರುತ್ತವೆ ಎನ್ನುವುದು. ಮತ್ತು ಇವು ಒದಗಿ ಬಂದಾಗ ಸುಮ್ಮನೇ ನೀವು ಮಾಡುತ್ತಿರುವ ಎಲ್ಲವನ್ನೂ ನಿಲ್ಲಿಸಿ. ಮೌನದಲ್ಲಿ ಕುಳಿತುಕೊಂಡು ಆ ಕ್ಷಣದ ಹರಿವಿನೊಂದಿಗೆ ಒಂದಾಗಿ. ಇಂಥ ಕ್ಷಣಗಳು ಬಂದೇ ಬರುತ್ತವೇ – ಇದು ಬಹಳ ಸ್ವಾಭಾವಿಕ. ಕೆಲವು ಕಿಟಕಿಗಳು ತಾವೇ ತಾವಾಗಿ ತೆರೆದುಕೊಳ್ಳುತ್ತವೆ . ಆದರೆ ನಾವು ಎಷ್ಟು busy ಆಗಿರುತ್ತೇವೆಂದರೆ ಈ ಕಿಟಕಿಗಳು ತೆರೆದಿಕೊಂಡಿದ್ದು, ತಂಗಾಳಿ ಒಳಗೆ ಬಂದದ್ದು, ಬಿಸಿಲಿನ ಕಿರಣಗಳು ನಮ್ಮನ್ನು ತಾಕಿದ್ದು ನಮ್ಮ ಗಮನಕ್ಕೆ ಬರುವುದೇ ಇಲ್ಲ.
ಆದ್ದರಿಂದ ಗಮನಿಸಿ…… ಮುಂಜಾನೆ ಎಲ್ಲಕ್ಕಿಂತ ಮೊದಲು, ಇಡೀ ರಾತ್ರಿಯ ಆಳ ನಿದ್ರೆಯ ನಂತರ, ಹಕ್ಕಿಗಳ ಚಿಲಿಪಿಲಿ ಶುರುವಾಗುವಾಗ, ಸೂರ್ಯ ಆಗಸದಲ್ಲಿ ಕಾಣಿಸಿಕೊಳ್ಳುತ್ತಿರುವಾಗ. ಇಂಥದೊಂದು ಕ್ಷಣ ನಿಮ್ಮನ್ನು ಸುತ್ತುವರೆದಿದೆ ಎಂದು ನಿಮಗೆ ಅನಿಸಿದರೆ, ನಿಮ್ಮೊಳಗೊಂದು ಅವಕಾಶ ಹುಟ್ಟಿಕೊಳ್ಳುತ್ತಿದೆಯೆಂದರೆ, ಸುಮ್ಮನೇ ಈ ಗಳಿಗೆಯಲ್ಲಿ ಒಂದಾಗಿ. ಮರದ ಕೆಳಗೆ ಮೌನವಾಗಿ ಕುಳಿತುಕೊಳ್ಳಿ, ನದಿಯ ದಂಡೆಯ ಮೇಲೆ, ಅಥವಾ ನಿಮ್ಮ ರೂಮಿನೊಳಗೆ, ಸುಮ್ಮನೇ …. ಏನೂ ಮಾಡದೇ. ಆ ಅವಕಾಶವನ್ನು ಆನಂದಿಸಿ – ಮತ್ತು ಆ ಕ್ಷಣವನ್ನು ಜಗ್ಗಿ ಎಳೆಯುವ ಪ್ರಯತ್ನ ಮಾಡಬೇಡಿ.
ಒಮ್ಮೆ ನಿಮಗೆ ಹೀಗೆ ಗಳಿಗೆಯೊಳಗೆ ಒಂದಾಗುವ ಚಾತುರ್ಯ ಪ್ರಾಪ್ತವಾಯಿತೆಂದರೆ, ಇಂಥ ಹೆಚ್ಚು ಹೆಚ್ಚು ಕ್ಷಣಗಳು ನಿಮಗೆ ಒದಗಿ ಬರುವವು. ಆಗ ನಿಮಗೆ ಇದರೊಂದಿಗೆ ಒಂದು ಸೌಹಾರ್ದ ಸಾಧ್ಯವಾಗುವುದು. ಆಗ ನಿಮ್ಮ ಮತ್ತು ಆ ಮೌನ, ಪ್ರಶಾಂತತೆ, ನೆಮ್ಮದಿ, ನಿಶ್ಚಲತೆ ಎನ್ನುವ ಅವಕಾಶದ ನಡುವೆ ಪ್ರೇಮ ಸಂಬಂಧ ಏರ್ಪಡುವುದು. ಮತ್ತು ಈ ಬಂಧ ಆಳವಾಗುತ್ತಲೇ ಹೋಗುವುದು. ನೀವು ಕಣ್ಣು ಮುಚ್ಚಿಕೊಂಡಾಗ ಈ ಸೌಹಾರ್ದ ನಿಮ್ಮ ಅನುಭವಕ್ಕೆ ಬರುವುದು. ಬಹುತೇಕ ನೀವು ಇದನ್ನು ಸ್ಪರ್ಶಿಸಬಹುದು- ಆಗ ಇದು ಮೂರ್ತ. ಆದರೆ ಇದು ಕಲೆಯಲ್ಲ ಚಾತುರ್ಯ. ಇದನ್ನು ಕಲಿಯುವುದು ಸಾಧ್ಯವಿಲ್ಲ : ಇದನ್ನು ನೀವು ಒಳಗೊಳ್ಳಬೇಕು.
ಸೆಂಟ್ ಫ್ರಾನ್ಸಿಸ್ ಜಪಾನ್ ಪ್ರವಾಸಕ್ಕೆ ಬಂದಾಗ, ಝೆನ್ ಮಾಸ್ಟರ್ ನಿನ್ಶಿಸ್ತು ನ ಆಶ್ರಮ ನೋಡುವ ಆಸೆ ವ್ಯಕ್ತ ಪಡಿಸಿದ. ಮಾಸ್ಟರ್ ನಿನ್ಶಿಸ್ತು ಅತಿಥಿಯನ್ನು ಕರೆದುಕೊಂಡು ತನ್ನ ಆಶ್ರಮದ ಎಲ್ಲ ವಿಭಾಗಗಳನ್ನು ತೋರಿಸುತ್ತ ಬಂದ.
ಧ್ಯಾನದ ಭಾಗಕ್ಕೆ ಬಂದಾಗ, ಅಲ್ಲಿ ಹತ್ತಾರು ಸನ್ಯಾಸಿಗಳು ಗಂಭೀರವಾಗಿ ಧ್ಯಾನ ಮಾಡುತ್ತ ಕುಳಿತಿರುವುದನ್ನೂ, ಆ ಸನ್ಯಾಸಿಗಳ ಮುಖದಲ್ಲಿನ ತೇಜಸ್ಸನ್ನೂ ಕಂಡು ಸೆಂಟ್ ಫ್ರಾನ್ಸಿಸ್ ಗೆ ತುಂಬ ಖುಶಿಯಾಯಿತು.
“ ಏನು ಮಾಡುತ್ತಿದ್ದಾರೆ ಇವರೆಲ್ಲ? ಯಾವ ಧ್ಯಾನ ಇದು? “ ಎಂದು ಮಾಸ್ಟರ್ ನಿನ್ಶಿಸ್ತು ನ ಪ್ರಶ್ನೆ ಮಾಡಿದ.
ನಿನ್ಶಿಸ್ತು, ನಗುತ್ತ ಉತ್ತರಿಸಿದ.
“ಕೆಲವರು ಕಳೆದ ತಿಂಗಳು ಗಳಿಸಿದ ಲಾಭ ಲೆಕ್ಕ ಹಾಕುತ್ತಿದ್ದಾರೆ. ಇನ್ನೂ ಕೆಲವರು ಬರುವ ತಿಂಗಳ ಖರ್ಚಿಗೆ ಚಿಂತೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಬರಲಿರುವ ರಜೆ ಹೇಗೆ ಕಳೆಯಬೇಕೆಂದು ವಿಚಾರ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಂಥ ಮುಖ್ಯ ಕೆಲಸ ಏನೂ ಮಾಡುತ್ತಿಲ್ಲ “

