ಸಂಸ್ಕೃತದ ಪದ “ನಾದ” ದ ಅರ್ಥ ಸಂಗೀತ, ಸ್ಪ್ಯಾನಿಷ್ ನಲ್ಲಿ ಈ ಪದದ ಅರ್ಥ “ಶೂನ್ಯತೆ” ( nothingness). ಈ ಅರ್ಥ ಕೂಡ ಸುಂದರವಾದದ್ದು, ಏಕೆಂದರೆ ನಾನು ಈಗ ಮಾತನಾಡ ಬಯಸುತ್ತಿರುವುದೇ ಶೂನ್ಯತೆಯ ಸಂಗೀತದ ( music of nothingness) ಬಗ್ಗೆ. ಇದು ಮೌನದ ಸಂಗೀತ. ಅನುಭಾವಿಗಳು ಇದನ್ನ ಅನಾಹತ, ಅನಹದ – ತನ್ನಿಂದ ತಾನೇ ಹುಟ್ಚಿಕೊಂಡ ನಾದ ( Unstruck music ) ಎನ್ನುತ್ತಾರೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾರೋ ನನ್ನ ಮನೆಗೆ
ಬ್ಯಾಂಡ್ ಒಂದನ್ನ ಕಳುಹಿಸಿದ್ದರು.
ಬೆಳಿಗ್ಗೆ ಐದು ಗಂಟೆಗೇ ಆ ಬ್ಯಾಂಡಿನವರು
ಸಂಗೀತ ಶುರುಹಚ್ಚಿಕೊಂಡರು.
ನನಗೇನೋ ಇದು ನನ್ನಿಂದ ಹಾಡಿಸಲು
ಭಗವಂತ ಮಾಡಿದ ಸಂಚು ಅನ್ನಿಸಿತು.
ಆಮೇಲೆ ಚಂದ್ರ ಮತ್ತು
ಕೆಲ ಮಧುರ ಧ್ವನಿಯ ನಕ್ಷತ್ರಗಳು
ನಮ್ಮನ್ನು ಕೂಡಿಕೊಂಡವು.
ಭೂತಾಯಿ ತನ್ನ ಹೊಟ್ಟೆಯನ್ನೇ
ನಗಾರಿಯಂತೆ ಬಾರಿಸಲು
ಅವಕಾಶ ಮಾಡಿಕೊಟ್ಟಳು ನಮಗೆ
ಇದೆಲ್ಲ ಏನು ಎನ್ನುವುದು ನನಗೆ
ಗೊತ್ತಾಗುವದಕ್ಕಿಂತ ಮುಂಚೆಯೇ ಅರಿವಾಯ್ತು,
ಮನುಷ್ಯ ಜಾತಿ
ಹಾಫಿಜ್ ನಂಥ ಹಳೆಯ ಸಂಗೀತ ಮಾಂತ್ರಿಕನಿಂದ
ಕೆಲ ಸಂಗೀತದ ಪಾಠಗಳನ್ನಷ್ಟೇ
ಕಲಿತಿದ್ದರೂ ಸಾಕಿತ್ತು…….
ತೇಲಾಡುತ್ತಿತ್ತು ಖುಶಿಯಲ್ಲಿ
- ಹಾಫಿಜ್
ತನ್ನಿಂದ ತಾನೇ ಹುಟ್ಟಿಕೊಂಡ ಸಂಗೀತವೊಂದಿದೆ, ಇದು ನಮ್ಮ ಅಸ್ತಿತ್ವದ ಒಳ ಪ್ರವಾಹದಂತೆ ಹರಿಯುತ್ತಿರುತ್ತದೆ; ಇದು ನಮ್ಮ ಅಂತರಂಗದ ಸೌಹಾರ್ದದ ಅಭಿವ್ಯಕ್ತಿ. ನಮ್ಮ ಹೊರಗಿನ ಪ್ರಪಂಚದಲ್ಲಿಯೂ ಒಂದು ಸಂಗೀತವಿದೆ – ಗ್ರಹ, ನಕ್ಷತ್ರಗಳ ಸೌಹಾರ್ದ. ಇಡೀ ಅಸ್ತಿತ್ವವೇ ಒಂದು ಆರ್ಕೆಸ್ಟ್ರಾ. ಮನುಷ್ಯನ ಹೊರತಾಗಿ ಬೇರೆ ಎಲ್ಲವೂ ಲಯ ಬದ್ಧವಾಗಿವೆ, ಎಲ್ಲವೂ ಒಂದು ಪ್ರಚಂಡ ಸೌಹಾರ್ದದಲ್ಲಿವೆ. ಆದ್ದರಿಂದಲೇ ಗಿಡ ಮರಗಳಲ್ಲಿ, ಪ್ರಾಣಿ ಪಕ್ಷಿಗಳಲ್ಲಿ ಅಷ್ಟೊಂದು ಗ್ರೇಸ್ ಇರುವುದು. ಕೇವಲ ಮನುಷ್ಯತ್ವ ಮಾತ್ರ ಕುರೂಪಗೊಂಡಿದೆ. ಇದಕ್ಕೆ ಕಾರಣವೆಎದರೆ ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಪ್ರಯತ್ನಿಸಿದ್ದು; ನಾವು ಇರುವುದಕ್ಕಿಂತ ಭಿನ್ನವಾಗಿ ಬೇರೆ ಏನೋ ಆಗಲು ಬಯಸುತ್ತಿದ್ದು.
ಬೇರೆ ಏನೋ “ಆಗುವ” ಬಯಕೆ ನಮ್ಮೊಳಗೆ ಹುಟ್ಟಿದ ಕ್ಷಣದಲ್ಲಿಯೋ ನಾವು ಕುರೂಪಗೊಳ್ಳುವ ಪ್ರಕ್ರಿಯೆ ಶುರುವಾಗುತ್ತದೆ, ನಾವು ಲಯ ಹೀನರಾಗುತ್ತೇವೆ. ಏಕೆಂದರೆ ಅಸ್ತಿತ್ವಕ್ಕೆ ಗೊತ್ತಿರುವುದು “ಇರುವಿಕೆ” (being) ಮಾತ್ರ. ಆಗುವಿಕೆ (becoming) ಎನ್ನುವುದು ನಮ್ಮ ಮೈಂಡ್ ಗೆ ಅಂಟಿಕೊಂಡಿರುವ ಜ್ವರ. ಮನುಷ್ಯರು ಯಾವತ್ತೂ ಅತೃಪ್ತರು. ಅತೃಪ್ತಿ ಕುರೂಪವನ್ನು ಹುಟ್ಟುಹಾಕುತ್ತದೆ, ಏಕೆಂದರೆ ಜನ ಕಂಪ್ಲೇಂಟುಗಳಲ್ಲಿ ಮುಳುಗಿ ಹೋಗಿದ್ದಾರೆ. ಜನರಿಗೆ ಇದೂ ಬೇಕು, ಅದೂ ಬೇಕು, ಅವರು ಯಾವತ್ತೂ ತೃಪ್ತರಲ್ಲ. ಎಲ್ಲ ಸಿಕ್ಕರೂ ಅವರಿಗೆ ಇನ್ನಷ್ಟು ಬೇಕು. “ಇನ್ನಷ್ಟು” ಎನ್ನುವುದು ಮನುಷ್ಯನ ಮೈಂಡ್ ನ ಭೃಷ್ಟಗೊಳಿಸಿತ್ತದೆ. ಆದ್ದರಿಂಗಲೇ “ಆಗುವಿಕೆ” becoming ಎನ್ನುವುದು ಮನುಷ್ಯನಿಗೆ ಅಂಟಿಕೊಂಡಿರುವ ಕಾಯಿಲೆ.
ಮನುಷ್ಯ “ಆಗುವಿಕೆ” ಯನ್ನು ತ್ಯಜಿಸಿದ ಕ್ಷಣದಲ್ಲಿಯೇ ಥಟ್ಟನೇ ಅವನಿಗೆ ಸಂಗೀತವೊಂದು ಕೇಳಿಸುತ್ತದೆ. ಮತ್ತು ಯಾವಾಗ ಈ ಸಂಗೀತ ತುಂಬಿ ಹರಿಯಲು ಶುರು ಮಾಡುತ್ತದೆಯೋ ಅದು ನಿಮ್ಮನ್ನು ತುಂಬಿಕೊಳ್ಳುತ್ತದೆ ಮತ್ತು ನಿಮ್ಮನ್ನಷ್ಟೇ ಅಲ್ಲ ನಿಮ್ಮನ್ನು ದಾಟಿ ಇತರರನ್ನೂ ತುಂಬಿಕೊಳ್ಳುತ್ತದೆ. ಆಗ ಅದು sharing ಆಗುತ್ತದೆ. ಇದು ಬುದ್ಧನಂಥವರ ಗ್ರೆಸ್. ಅವರ ಈ ಅಂತರಂಗದ ಸಂಗೀತ, ಸೌಹಾರ್ದದಿಂದ ತುಂಬಿಕೊಂಡಿದೆ. ಮತ್ತು ಈ ಸೌಹಾರ್ದ ಉಕ್ಕಿ ಹರಿಯತೊಡಗಿದಾಗ ಅದು ಸುತ್ತಲಿನ ಎಲ್ಲರನ್ನೂ ತಲುಪುತ್ತದೆ.

