ನಿಮ್ಮ ನಿಯತಿಯವರೆಗಿನ ನಿಮ್ಮ ಬೆಳವಣಿಗೆಗಾಗಿ ಧೈರ್ಯ ಬೇಕು, ನಿರ್ಭಯತೆ ಬೇಕು . ನಿರ್ಭಯತೆ ಎನ್ನುವುದು ಬಹಳ ಮುಖ್ಯವಾದ ಧಾರ್ಮಿಕ ಗುಣಧರ್ಮ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದೆ, ನನಗೊಬ್ಬ ಶಿಷ್ಯನಿದ್ದ.
ರಾತ್ರಿಯಾಯಿತೆಂದರೆ ಸಾಕು
ಭಯ ಮತ್ತು ಆತಂಕದಿಂದ ನಡುಗುತ್ತಿದ್ದ.
ಮರುದಿನ ಬೆಳಿಗ್ಗೆ ನೋಡಿದರೆ
ದೆವ್ವವೊಂದರಿಂದ ಮಾನಭಂಗಗೊಂಡವನಂತೆ
ಬಿಳಚಿಕೊಂಡಿರುತ್ತಿದ್ದ.
ನಂತರ ನನ್ನ ಮಮತೆಗೆ
ಅವನ ಮೇಲೆ ಕರುಣೆ ಬಂತು,
ನನ್ನ ದಿವ್ಯ ಖಡ್ಗದಿಂದ
ಅವನಿಗೊಂದು ಚೂರಿ ತಯಾರಿಸಲಾಯಿತು.
ಅಮೇಲಿಂದ ನನಗೆ
ಅವನ ಮೇಲೆ ಅಭಿಮಾನ ಹೆಚ್ಚಾಗಿದೆ
ಈಗ ಅವನು ನನ್ನ ಪಟ್ಟ ಶಿಷ್ಯ.
ಈಗ ಆತ ತನ್ನ ಭಯವನ್ನೆಲ್ಲ ಕಳೆದುಕೊಂಡುಬಿಟ್ಟಿದ್ದಾನೆ.
ಅಷ್ಟೇ ಅಲ್ಲ, ರಾತ್ರಿಯಾಯಿತೆಂದರೆ ತಾನೇ
ಹೊರಟುಬಿಡುತ್ತಾನೆ
ಸಮಸ್ಯೆಗಳನ್ನು ಹುಡುಕಿಕೊಂಡು.
– ಹಾಫಿಜ್
ತಮ್ಮೊಳಗೆ ಭಯವನ್ನು ತುಂಬಿಕೊಂಡಿರುವ ಜನರು ಗೊತ್ತಿರುವುದನ್ನ (known) ಮೀರಿ ಏನನ್ನೂ ಮಾಡಲಾರರು. ಅವರಿಗೆ “ಗೊತ್ತಿರುವುದು” ಎನ್ನುವುದು ಒಂದು ಸುರಕ್ಷತೆಯನ್ನು, ಕಂಫರ್ಟ್ ನ ಕೊಡುತ್ತದೆ ಏಕೆಂದರೆ ಈ ಬಗ್ಗೆ ಅವರಿಗೆ ಪೂರ್ಣ ಮಾಹಿತಿ ಇದೆ. ಅವರಿಗೆ ಈ ಸಂದರ್ಭದ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದು ಗೊತ್ತಿದೆ. ನಿದ್ದೆಯಲ್ಲಿರುವಾಗಲೂ ಅವರು ಈ ಕೆಲಸ ಮಾಡಿ ಮುಗಿಸಬಹುದು, ಎಚ್ಚರಗೊಳ್ಳುವ ಯಾವ ಅವಶ್ಯಕತೆಯೂ ಇಲ್ಲ. ಇದು ಗೊತ್ತಿರುವುದರ ಜೊತೆ ಇರುವ ಅನುಕೂಲ.
ನೀವು ಗೊತ್ತಿರುವುದರ ಗಡಿಯನ್ನು ದಾಟಿದ ಕೂಡಲೇ ನಿಮ್ಮೊಳಗೆ ಭಯ ಹುಟ್ಟಿಕೊಳ್ಳುವುದು, ಏಕೆಂದರೆ ಇದು ನಿಮ್ಮ ಅಜ್ಞಾತದ ವಲಯ, ಇಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದರ ಬಗ್ಗೆ ನಿಮಗೆ ಮಾಹಿತಿ ಇಲ್ಲ. ಈಗ ನಿಮ್ಮ ಬಗ್ಗೆಯೇ ನಿಮಗೆ ಖಾತ್ರಿ ಇಲ್ಲ, ಈಗ ನಿಮ್ಮಿಂದ ತಪ್ಪುಗಳಾಗಬಹುದು; ಈಗ ನೀವು ದಾರಿ ತಪ್ಪಬಹುದು. ಆದ್ದರಿಂದಲೇ ಜನ ಗೊತ್ತಿರುವುದಕ್ಕೆ ಅಂಟಿಕೊಂಡಿರುತ್ತಾರೆ ಮತ್ತು ಒಮ್ಮೆ ಜನ ಗೊತ್ತಿರುವುದಕ್ಕೆ ಅಂಟಿಕೊಂಡರೆಂದರೆ ಅವರು ತಮ್ಮ ಜೀವಂತಿಕೆಯನ್ನು ಕಳೆದುಕೊಂಡುಬಿಡುತ್ತಾರೆ.
ಬದುಕನ್ನು ಕೇವಲ ಅಪಾಯಕಾರಿಯಾಗಿ ಮಾತ್ರ ಬದುಕಬಹುದು – ಇದರ ಹೊರತಾಗಿ ಬದುಕುವ ಯಾವ ದಾರಿಯೂ ಇಲ್ಲ. ಕೇವಲ ಅಪಾಯದ ಮೂಲಕ ಮಾತ್ರವೇ ಬದುಕು ಪ್ರಬುದ್ಧತೆಯನ್ನ, ಬೆಳವಣಿಗೆಯನ್ನ ಸಾಧಿಸಬಹುದು. ಜನ ಸಾಹಸಿಗಳಾಬೇಕು, ಜ್ಞಾತವನ್ನು ಅಜ್ಞಾತಕ್ಕಾಗಿ ರಿಸ್ಕ್ ಮಾಡಲು ತಯಾರಾಗಿರಬೇಕು. ಅನ್ವೇಷಕ (seeker) ಆಗುವುದೆಂದರೆ ಇದು ಮಾತ್ರ. ಒಮ್ಮೆ ನೀವು ನಿರ್ಭಯತೆಯ ಸ್ವಾತಂತ್ರ್ಯದ ರುಚಿಯನ್ನು ಉಂಡಿರಾದರೆ ಮುಂದೆ ಯಾವತ್ತೂ ಈ ಬಗ್ಗೆ ಪಶ್ಚಾತಾಪ ಪಡುವುದಿಲ್ಲ , ಏಕೆಂದರೆ optimum ಆಗಿ ಬದುಕುವುದರ ಬಗ್ಗೆ ಆಗ ನಿಮಗೆ ಗೊತ್ತಾಗುತ್ತದೆ. ಆಗ ನಿಮಗೆ ಬದುಕಿನ ಬತ್ತಿಯನ್ನು ಎರಡೂ ಬದಿಯಿಂದ ಹೇಗೆ ಉರಿಸಬೇಕು ಎನ್ನುವುದು ಗೊತ್ತಾಗಿರುತ್ತದೆ. ಇಂಥ ಒಂದೇ ಒಂದು ತೀವ್ರತೆಯ ಕ್ಷಣ ಕೂಡ ಶಾಶ್ವತವಾದ ಸಾಧಾರಣ (mediocre) ಬದುಕಿಗಿಂತ ಬಹಳಷ್ಟು ತೃಪ್ತಿದಾಯಕವಾಗಿರುತ್ತದೆ.
ಮುಲ್ಲಾ ನಸ್ರುದ್ದೀನ ನಿಗೆ ಕರಡಿಗಳೆಂದರೆ ಭಾರಿ ಭಯ. ಒಂದು ದಿನ ರಾಜ್ಯದ ಸುಲ್ತಾನ ಕರಡಿ ಬೇಟೆಗೆ ತನ್ನೊಡನೆ ಬರುವಂತೆ ನಸ್ರುದ್ದೀನ ನನ್ನು ಆಹ್ವಾನಿಸಿದ.
ತನ್ನ ಕರಡಿಗಳ ಕುರುತಾದ ಭಯವನ್ನು ಸುಲ್ತಾನನಿಗೆ ಹೇಗೆ ಹೇಳುವುದು ಎಂದು ಗೊತ್ತಾಗದೆ, ನಸ್ರುದ್ದೀನ್ ಹೆದರಿಕೆಯಿಂದಲೇ ಸುಲ್ತಾನನಿಗೆ ಒಪ್ಪಿಗೆ ಕೊಟ್ಟುಬಿಟ್ಟ.
ಬೇಟೆ ಮುಗಿಸಿ ಹಿಂತಿರುಗಿದ ನಸ್ರುದ್ದೀನ ನನ್ನು ಅವನ ಗೆಳೆಯ ಪ್ರಶ್ನೆ ಮಾಡಿದ, “ ಹೇಗಿತ್ತು ಕರಡಿ ಬೇಟೆ? “
“ ಅದ್ಭುತವಾಗಿತ್ತು“ ನಸ್ರುದ್ದೀನ್ ಉತ್ತರಿಸಿದ.
“ ಹೌದಾ, ಎಷ್ಟು ಕರಡಿಗಳನ್ನು ಬೇಟೆಯಾಡಿದಿರಿ? “ ಗೆಳೆಯ ತಿರುಗಿ ಪ್ರಶ್ನೆ ಮಾಡಿದ.
“ ಒಂದೂ ಇಲ್ಲ “ ಉತ್ತರಿಸಿದ ನಸ್ರುದ್ದೀನ.
“ ಮತ್ತೆ ಯಾಕೆ ಹೇಳಿದೆ? ಬೇಟೆ ಅದ್ಭುತವಾಗಿತ್ತು ಅಂತ? “ ಗೆಳೆಯನ ಪ್ರಶ್ನೆ.
“ ಕರಡಿಗಳನ್ನು ಕಂಡರೆ ಹೆದರಿ ಸಾಯುವವನಿಗೆ ಒಂದು ಕರಡಿಯೂ ಕಾಣಿಸಲಿಲ್ಲವೆಂದರೆ , ಅದು ಅವನಿಗೆ ಅದ್ಭುತವೇ ಅಲ್ವ “ ಮುಲ್ಲಾ ನಗುತ್ತ ಉತ್ತರಿಸಿದ.
********************************

