ಹುಡುಕಾಟ ( Seeking ): ಓಶೋ 365 #316

ಲಾವೋತ್ಸೇ ಹೇಳುತ್ತಾನೆ, “ ಬಯಸಿದಾಗ, ಹುಡುಕಾಡಿದಾಗ ನೀವು ಮಿಸ್ ಮಾಡಿಕೊಳ್ಳುತ್ತೀರ, ಹಾಗೆ ಮಾಡದೇ ಹೋದಾಗಲೇ ಅದು ನಿಮಗೆ ದೊರೆಯುತ್ತದೆ”. ಇದು ಈವರೆಗೆ ಹೇಳಲಾಗಿರುವ ಸ್ಟೇಟಮೆಂಟ್ ಗಳಲ್ಲಿ ಬಹಳ ಮುಖ್ಯವಾಗಿರುವುದು. ಹುಡುಕಾಟದ ಕಾರಣವಾಗಿಯೇ ಹುಡುಕಾಡುವ ಸಂಗತಿ ಕಳೆದು ಹೋಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ತಾವೋ ಬಗ್ಗೆ ಹೇಳಿದರೆ ;
ಜಾಣ, ಕೂಡಲೇ ಅಪ್ಪಿಕೊಂಡುಬಿಡುತ್ತಾನೆ,
ಸಾಮಾನ್ಯ, ಅರ್ಧ ಒಪ್ಪಿಗೆ
ಅರ್ಧ ಸಂಶಯದಿಂದ ನೋಡುತ್ತಾನೆ,
ದಡ್ಡನಂತೂ, ಜೋರಾಗಿ ನಕ್ಕು ಬಿಡುತ್ತಾನೆ.
ಅವ ಹಾಗೆ ನಗದೇ ಹೋದರೆ
ಅದು ತಾವೋ ಅಲ್ಲವೇ ಅಲ್ಲ.

ಆದ್ದರಿಂದಲೇ,
ಬೆಳಕಿನ ದಾರಿ, ಕತ್ತಲೆಯಂತೆ ಕಾಣುತ್ತದೆ,
ಮುಂದೆ ಸಾಗುವ ದಾರಿ
ಹಿಂದೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ,
ನೇರ ದಾರಿ
ದೂರ ಅನಿಸುತ್ತದೆ,
ಪರಮ ಶಕ್ತಿಯನ್ನ ಜನ
ಅಶಕ್ತ ಎಂದು ಭಾವಿಸುತ್ತಾರೆ.
ಸ್ಪಷ್ಟತೆಯನ್ನ
ಅಸ್ಪಷ್ಟ ಎನ್ನಲಾಗುತ್ತದೆ,
ಕಲೆ
ಕ್ಲೀಷೆಯಾಗುತ್ತದೆ,
ಪ್ರೇಮಕ್ಕೆ
ಉದಾಸೀನದ ಹೆಸರು ಇಡಲಾಗುತ್ತದೆ,
ಜ್ಞಾನವನ್ನು
ಬಾಲಿಶ ಎಂದು ಕರೆಯಲಾಗುತ್ತದೆ.

ಹುಡುಕಿದರೆ
ತಾವೋ ಎಲ್ಲೂ ಸಿಗುವುದಿಲ್ಲ
ಆದರೆ ಎಲ್ಲವನ್ನೂ ಸಲಹುತ್ತ
ಪೂರ್ಣಗೊಳಿಸುತ್ತಲೇ ಇರುತ್ತದೆ.

~ ಲಾವೋತ್ಸೇ

ನೀವು ಹುಡುಕಾಟದಲ್ಲಿರುವಿರಾದರೆ, ನೀವು ಅತ್ಯಂತ ತಪ್ಪು ದಾರಿಯನ್ನು ತುಳಿಯುತ್ತಿದ್ದೀರಿ. ಈ ಹುಡುಕಾಟಕ್ಕೆ ತೊಡಗುವ ಮೂಲಕವೇ ನೀವು ಹುಡುಕಾಡುತ್ತಿರುವುದು ನಿಮ್ಮ ಬಳಿ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತಿದ್ದೀರಿ. ಅದು ನಿಮ್ಮ ಬಳಿ ಇದೆ; ಅದು ಈಗಾಗಲೇ ನಿಮ್ಮ ಬಳಿ ಇದೆ. ಏನನ್ನಾದರು ಹುಡುಕಾಡಲು ನೀವು ಶುರು ಮಾಡಿದ ಕ್ಷಣದಲ್ಲಿಯೇ ನೀವು ಮನೋರೋಗಿ (neurotic) ಆಗುತ್ತಿದ್ದೀರಿ. ಏಕೆಂದರೆ ನೀವು ಹುಡುಕಾಡುತ್ತಿರುವುದು ನಿಮಗೆ ಸಿಗುವುದಿಲ್ಲ ಏಕೆಂದರೆ ಅದು ನಿಮ್ಮ ಬಳಿ ಈಗಾಗಲೇ ಇರುವುದು ನಿಮಗೆ ಗೊತ್ತಿಲ್ಲ.

ಇದು ಒಬ್ಬ ಮನುಷ್ಯ ತನ್ನ ಕನ್ನಡಕ ಹುಡುಕುತ್ತಿರುವಂತೆ. ಅವನ ಕನ್ನಡಕ ಅವನ ಕಣ್ಣುಗಳ ಮೇಲೆಯೇ ಇದೆ, ಅವನ ಮೂಗಿನ ಮೇಲೆ, ಮತ್ತು ಅವನು ಆ ಕನ್ನಡಕದ ಮೂಲಕ ನೋಡುತ್ತಲೇ ಅವನು ತನ್ನ ಕನ್ನಡಕಕ್ಕಾಗಿ ಹುಡುಕಾಡುತ್ತಿದ್ದಾನೆ! ಹೀಗಿರುವಾಗ ತನ್ನ ಹುಡುಕಾಟ ವ್ಯರ್ಥ ಎಂದು ಅವನಿಗೆ ಗೊತ್ತಾಗುವವರೆಗೆ, ಅವನ ಕನ್ನಡಕ ಎಲ್ಲಿದೆ ಎನ್ನುವುದು ಅವನಿಗೆ ನೆನಪಾಗುವವರೆಗೆ ಅವನ ಕನ್ನಡಕ ಅವನಿಗೆ ಸಿಗುವುದಿಲ್ಲ. “ ನನಗೆ ಕಣ್ಣು ಕಾಣಿಸುತ್ತಿದೆಯಾದರೆ, ನನ್ನ ಕನ್ನಡಕ ನನ್ನ ಕಣ್ಣ ಮುಂದಿರಬೇಕು” ಎನ್ನುವುದು ಅವನಿಗೆ ನೆನಪಾಗಬೇಕು.

ನಮ್ಮ ನೋಡುವಿಕೆಯಲ್ಲಿಯೇ ಸತ್ಯ ಅಡಗಿದೆ, ನಮ್ಮ ಹುಡುಕಾಟದಲ್ಲಿಯೇ ಸಂಪತ್ತು ಅಡಗಿದೆ. ಹುಡಾಕಾಡುತ್ತಿರುವವನೇ ಹುಡುಕುತ್ತಿರುವ ಸಂಗತಿ – ಇದು ಸಮಸ್ಯೆ. ಈ ಸಮಸ್ಯೆಯನ್ನೇ ಮನುಷ್ಯ ಶತಶತಮಾನಗಳಿಂದ ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಮತ್ತು ಇದೇ ಅವರನ್ನು ಹೆಚ್ಚು ಹೆಚ್ಚು ಅಚ್ಚರಿಗೆ ಒಳಪಡಿಸುತ್ತಿರುವುದು.

ಲಾವೋತ್ಸೇ ಹೇಳುತ್ತಾನೆ, “ ಬಯಸಿದಾಗ, ಹುಡುಕಾಡಿದಾಗ ನೀವು ಮಿಸ್ ಮಾಡಿಕೊಳ್ಳುತ್ತೀರ, ಹಾಗೆ ಮಾಡದೇ ಹೋದಾಗಲೇ ಅದು ನಿಮಗೆ ದೊರೆಯುತ್ತದೆ”. ಇದು ಈವರೆಗೆ ಹೇಳಲಾಗಿರುವ ಸ್ಟೇಟಮೆಂಟ್ ಗಳಲ್ಲಿ ಬಹಳ ಮುಖ್ಯವಾಗಿರುವುದು. ಹುಡುಕಾಟದ ಕಾರಣವಾಗಿಯೇ ಹುಡುಕಾಡುವ ಸಂಗತಿ ಕಳೆದು ಹೋಗುತ್ತದೆ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.