ನಮ್ಮಿಂದ ನಾವು ಪಲಾಯನ ಮಾಡುವುದು ಸಾಧ್ಯವಿಲ್ಲ. ಮತ್ತು ಈ ಏಕಾಂಗಿತನ ಎಷ್ಟು ಮೂಲಭೂತವೆಂದರೆ, ಇದರಿಂದ ತಪ್ಪಿಸಿಕೊಂಡು ಓಡಿಹೋಗುವುದು ಸಾಧ್ಯವೇ ಇಲ್ಲ ~ ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ
ಒಂಟಿತನ ಮತ್ತು ಏಕಾಂತ
ಎರಡೂ ಬೇರೆ ಬೇರೆ.
ಒಂಟಿತನ ಕಾಡುತ್ತಿರುವಾಗ,
ಸರಿಯಾದ ದಾರಿಯಲ್ಲಿದ್ದೇವೆಂದು
ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುವುದು
ಬಹಳ ಸುಲಭ.
ಏಕಾಂತ ಒಳ್ಳೆಯದು.
ಇಲ್ಲಿಯೂ ಇರುವುದು ಕೇವಲ ನಾವು ಮಾತ್ರ,
ಆದರೆ ಒಂಟಿತನದ ಜಿಗುಪ್ಸೆ ಇಲ್ಲಿಲ್ಲ.
ಕನ್ನಡಿಯಂಥ ಸಂಗಾತಿಯನ್ನ ಹುಡುಕಿ.
ಆ ಇನ್ನೊಬ್ಬರ ಹೃದಯದಲ್ಲಿ ಮಾತ್ರ
ನೀವು ನಿಮ್ಮ ನಿಜವನ್ನು ಕಾಣುವಿರಿ
ಮತ್ತು
ನಿಮ್ಮೊಳಗಿನ ಭಗವಂತನನ್ನು ಕೂಡ.
~ ಶಮ್ಸ್ ತಬ್ರೀಝಿ
ಒಂಟಿತನದಿಂದ ತಪ್ಪಿಸಿಕೊಳ್ಳಲು ಹೆಚ್ಚು ಪ್ರಯತ್ನ ಮಾಡಿದಂತೆಲ್ಲ ಇನ್ನೂ ಹೆಚ್ಚು ಒಂಟಿತನ ನಿಮ್ಮನ್ನು ಕಾಡುತ್ತ ಹೋಗುವುದು. ಒಮ್ಮೆ ನೀವು ಒಂಟಿತನವನ್ನು ಸ್ವೀಕಾರ ಮಾಡಲು ಶುರು ಮಾಡಿದಿರೆಂದರೆ, ಏಕಾಂಗಿತನವನ್ನು ಪ್ರೀತಿಸಲು, ಅದನ್ನು ಎಂಜಾಯ್ ಮಾಡಲು ಶುರು ಮಾಡಿದಿರೆಂದರೆ, ಆಗ ಒಂಟಿತನ ತಾನೇ ಮಾಯವಾಗುವುದು. ಆಗ ಏಕಾಂಗಿತನಕ್ಕೆ ಒಂದು ಚೆಲುವು, ಪ್ರಚಂಡ ಸೌಂದರ್ಯ ಪ್ರಾಪ್ತವಾಗುತ್ತದೆ.
ನಮ್ಮನ್ನು ಏಕಾಂಗಿಯಾಗಿಯೇ ಸೃಷ್ಟಿ ಮಾಡಲಾಗಿದೆ. ಈ ಏಕಾಂಗಿತನವೇ ನಮ್ಮ ಸ್ವಾತಂತ್ರ್ಯ. ಮತ್ತು ಇದು ಪ್ರೀತಿಗೆ ವಿರುದ್ಧವಲ್ಲ. ಬದಲಾಗಿ, ಏಕಾಂಗಿಯಾಗಿರುವ ಮನುಷ್ಯ, ಮತ್ತು ಏಕಾಂಗಿಯಾಗಿ ಹೇಗಿರಬೇಕೆಂದು ಗೊತ್ತಿರುವ ಮನುಷ್ಯ ಪ್ರೀತಿಸಬಲ್ಲ. ಇದು ಪ್ರೀತಿಯ ದ್ವಂದ್ವ : ಏಕಾಂಗಿಯಾಗಿ ಇರಬಲ್ಲ ಮನುಷ್ಯ ಮಾತ್ರ ಪ್ರೀತಿಸಬಲ್ಲ. ಮತ್ತು ಪ್ರೀತಿ ಮಾಡುವ ಮನುಷ್ಯ ಮಾತ್ರ ಏಕಾಂಗಿಯಾಗಿ ಇರಬಲ್ಲ. ಈ ಎರಡೂ ಕೂಡಿಯೇ ಇರುವಂಥವು. ಆದ್ದರಿಂದ, ನಿಮಗೆ ಏಕಾಂಗಿಯಾಗಿರುವುದು ಸಾಧ್ಯವಿಲ್ಲವಾದರೆ ನಿಮಗೆ ಪ್ರೀತಿಸುವುದೂ ಸಾಧ್ಯವಾಗುವುದಿಲ್ಲ. ಆಗ ನಿಮ್ಮ ಪ್ರೀತಿ ಎನ್ನುವ ಸಂಗತಿಗಳೆಲ್ಲ ಕೇವಲ ನಿಮ್ಮಿಂದ ಪಲಾಯನ ಮಾಡಬಲ್ಲ ಸಂಗತಿಗಳು. ಇದು ನಿಜವಾದ ಪ್ರೀತಿ ಅಲ್ಲ, ಇದು ನೈಜವಾದ ಸಂಬಂಧವಲ್ಲ. ಯಾರು ಯಾರೊಂದಿಗೆ ಸಂಬಂಧ ಬೆಳೆಸುವುದು? ನೀವು ಇನ್ನೂ ನಿಮ್ಮ ಜೊತೆಯೇ ಸಂಬಂಧ ಬೆಳೆಸಿಲ್ಲ; ಇನ್ನೊಬ್ಬರ ಜೊತೆ ನೀವು ಹೇಗೆ ಸಂಬಂಧ ಬೆಳೆಸುತ್ತೀರಿ? ಅದ್ದರಿಂದ ಈ ಜಗತ್ತಿನಲ್ಲಿ ಮಿಥ್ಯಾ ಪ್ರೀತಿಯೊಂದು ಅಸ್ತಿತ್ವದಲ್ಲಿದೆ : ನೀವು ನಿಮ್ಮಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ, ಅವನು/ಅವಳು ತನ್ನಿಂದ ತಾನು ತಪ್ಪಿಸುಕೊಳ್ಳುವ ಪ್ರಯತ್ನಲ್ಲಿ, ಆದರೆ ನೀವಿಬ್ಬರೂ ಒಬ್ಬರು ಇನ್ನೊಬ್ಬರಲ್ಲಿ ಶರಣಾಗತಿಯನ್ನು ಬಯಸುತ್ತಿದ್ದೀರಿ. ಇದು ನೀವು ಒಬ್ಬರಿಗೊಬ್ಬರು ಮಾಡಿಕೊಳ್ಳುತ್ತಿರುವ ಮೋಸ. ಏಕಾಂಗಿತನ ನಮ್ಮ ವ್ಯಕ್ತಿತ್ವದ ಮೂಲಭೂತ ಅಂಶ ಎನ್ನುವುದನ್ನ ನಾವು ಮನಗಾಣಬೇಕು. ಮತ್ತು ಈ ಏಕಾಂಗಿತನದ ಮೂಲಕವೇ ಕ್ರಿಯೆಗೆ ಇಳಿಯಬೇಕು. ನಿಮ್ಮ ಪ್ರೀತಿ ಕೂಡ ಈ ನೆಲೆಯಿಂದಲೇ ಕೆಲಸ ಮಾಡಬೇಕು. ಆಗ ನಿಮಗೆ ಪ್ರೀತಿಸುವುದು ಸಾಧ್ಯವಾಗುತ್ತದೆ.

