ಮಕ್ಕಳ ಬಿಡುಗಡೆ ಅಗತ್ಯವಾಗಿ ಆಗಬೇಕಾದದ್ದು. ಇದು ಜಗತ್ತಿನ ಅತ್ಯಂತ ಮಹತ್ವಪೂರ್ಣ ಅವಶ್ಯಕತೆಗಳಲ್ಲಿ ಒಂದು, ಏಕೆಂದರೆ ಬೇರೆ ಯಾವ ಗುಲಾಮಿತನವೂ ಇಷ್ಟು ಆಳ, ಇಷ್ಟು ಅಪಾಯಕಾರಿ ಅಲ್ಲ. ತಮ್ಮನ್ನು ತಾವು ತಿಳಿದುಕೊಳ್ಳಲು ಕೂಡ ನಾವು ಮಕ್ಕಳಿಗೆ ಅವಕಾಶ ಮಾಡಿಕೊಡುತ್ತಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತನಿಂದ
ನಾನು ಎಷ್ಟೆಲ್ಲಾ ಕಲಿತಿದ್ದೇನೆಂದರೆ
ನಾನೊಬ್ಬ
ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ, ಬೌದ್ಧ
ಎಂದೆಲ್ಲ ಹೇಳಿಕೊಳ್ಳಲೂ
ನಾಚಿಕೆಯಾಗುತ್ತದೆ ನನಗೆ.
ಸತ್ಯ ನನ್ನೊಂದಿಗೆ
ಎಷ್ಟು ಒಂದಾಗಿದೆಯೆಂದರೆ
ನನ್ನನ್ನು
ಗಂಡು, ಹೆಣ್ಣು, ಪ್ರವಾದಿ
ಅಥವಾ ಪವಿತ್ರ ಆತ್ಮಎಂದುಕೊಳ್ಳಲೂ
ಭಯವಾಗುತ್ತದೆ.
ಪ್ರೇಮ ನನ್ನನ್ನು
ಎಷ್ಟು ಅಲುಗಾಡಿಸಿದೆಯೆಂದರೆ
ತಾನೇ ಬೆಂಕಿಯಲ್ಲಿ ಹಾರಿ
ನನಗೆ ಗೊತ್ತಿರುವ ಎಲ್ಲ
ಸಿದ್ಧಾಂತಗಳಿಂದ, ವೇಷಗಳಿಂದ
ಮುಕ್ತಗೊಳಿಸಿದೆ ನನ್ನನು.
- ಹಾಫಿಜ್
ಸಮಾಜ ಮಿಥ್ಯಾಚಾರಿಗಳನ್ನು ಸೃಷ್ಟಿ ಮಾಡುತ್ತದೆ. ಅದರ ಪ್ರಕಾರ ಮಕ್ಕಳು ಹೀಗಿರಬೇಕು ಅಥವಾ ಹಾಗಿರಬೇಕು, ಅವರು ಈ ಥರ ವರ್ತಿಸಬೇಕು ಅಥವಾ ಆ ಥರ ಬಿಹೇವ್ ಮಾಡಬೇಕು. ಸಮಾಜ ಅವರ ಮೇಲೆ ಆದರ್ಶಗಳನ್ನ, ಐಡಿಯಾಗಳನ್ನ ಹೇರುತ್ತದೆ ಮತ್ತು ಆದಷ್ಟು ಬೇಗ ಮಕ್ಕಳು ಹಿಂದೂ ಆಗುತ್ತಾರೆ, ಕ್ರಿಶ್ಚಿಯನ್ ಆಗುತ್ತಾರೆ, ಗಂಡು ಅಥವಾ ಹೆಣ್ಣು ಆಗುತ್ತಾರೆ. ಗಂಡಸು ಆದ್ದರಿಂದ ಅವನು ಅಳಬಾರದು, ಅಥವಾ ಹೆಂಗಸು ಆದ್ದರಿಂದ ಆಕೆ ಮರ ಹತ್ತಬಾರದು ಇತ್ಯಾದಿಯಾಗಿ ನಿರ್ಬಂಧ ಹೇರುತ್ತಾರೆ. ನಿಧಾನವಾಗಿ ಇನ್ನೂ ಹಲವಾರು ಮಿತಿಗಳು ಅವರನ್ನು ಕಟ್ಟಿಹಾಕುತ್ತವೆ, ಮತ್ತು ಅವರು ಕಿರಿದಾಗುತ್ತ ಹೋಗುತ್ತಾರೆ; ಆಗ ಅವರಿಗೆ ಉಸಿರುಗಟ್ಟಿದಂತಾಗುತ್ತದೆ. ಇದು ಪರಿಸ್ಥಿತಿ : ಪ್ರತಿಯೊಬ್ಬರಿಗೂ ಉಸಿರುಗಟ್ಟಿದೆ, ಮತ್ತು ಪ್ರತಿಯೊಬ್ಬರೂ ಬಿಡುಗಡೆಗಾಗಿ ಹಾತೊರೆಯುತ್ತಿದ್ದಾರೆ. ಆದರೆ ಹೇಗೆ?
ನಮ್ಮನ್ನು ಸುತ್ತುವರೆದಿರುವ ಗೋಡೆಗಳು ಬಹಳ ಬಲಿಷ್ಠವಾಗಿರುವ ಹಾಗಿದೆ. ಮತ್ತು ಜನ ಇಂಥ ಜೈಲುಗಳಲ್ಲಿ ವರ್ಷಗಳಿಂದ ಬದುಕುತ್ತಿದ್ದಾರೆ. ಅವರು ಜೈಲುಗಳಲ್ಲಿ ಬದುಕುತ್ತಿದ್ದಾರೆ ಮತ್ತು ಜೈಲುಗಳಲ್ಲಿ ಸಾಯುತ್ತಾರೆ. ಬದುಕು ಹೇಗಿರಬೇಕು? ಬದುಕು ಯಾಕೆ ಹಾಗಿರಬೇಕು? ಎನ್ನುದು ಅವರಿಗೆ ಗೊತ್ತೇ ಆಗುವುದಿಲ್ಲ. ಅವರು ಬದುಕಿನ ವೈಭವ ಮತ್ತು ಭವ್ಯತೆಯಿಂದ ವಂಚಿತರಾಗಿದ್ದಾರೆ.
ಇದು ಮೈಂಡ್ ನ ಕಂಡಿಷನ್ಡ್ ಸ್ಥಿತಿ. ಧ್ಯಾನದ ಇಡೀ ಪ್ರಕ್ರಿಯೆಯೇ ಮೈಂಡ್ ನ್ನು ಈ ಕಂಡಿಷನಿಂಗ್ ನಿಂದ ಮುಕ್ತವಾಗಿಸುವುದು, ಸುತ್ತುವರೆದಿರುವ ಗೋಡೆಗಳನ್ನು ಬೀಳಿಸಿಬಿಡುವುದು. ಯಾವುದನ್ನೆಲ್ಲ ತಂದೆ-ತಾಯಿ, ಸಮಾಜ, ಪುರೋಹಿತ ವರ್ಗ ಮತ್ತು ರಾಜಕಾರಣಿಗಳು ಮಾಡಿದ್ದಾರೋ ಅದನ್ನೆಲ್ಲ ಇಲ್ಲವಾಗಿಸುವುದು ಧ್ಯಾನದ ಕೆಲಸ.
ಝೆನ್ ಮಾಸ್ಟರ್ ತನ್ನ ವಿದ್ಯಾರ್ಥಿಗಳಿಗೆ, ತಾನು ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆಯೊಂದನ್ನು ವಿವರಿಸಿ ಹೇಳುತ್ತಿದ್ದ.
ನಮ್ಮ ಟೀಚರ್ ಮಧ್ಯಾಹ್ನ ಊಟ ಆಗುತ್ತಿದ್ದಂತೆಯೇ ಕ್ಲಾಸಿನಲ್ಲಿ ನಿದ್ದೆ ಹೋಗಿಬಿಡುತ್ತಿದ್ದ, ಯಾಕೆ ಹೀಗೆ ಎಂದು ಕೇಳಿದಾಗಲೆಲ್ಲ
“ ಪ್ರತೀ ಮಧ್ಯಾಹ್ನ ನಾನು ನಿದ್ದೆಯಲ್ಲಿ ಕನಸಿನೂರಿಗೆ ಹೋಗಿ ಜ್ಞಾನಿಗಳಾದ ಪೂರ್ವಜರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ, ಕನ್ಫ್ಯೂಸಿಯಸ್ ನಂತೆ. “ ಎಂದು ಸಮಜಾಯಿಷಿ ಕೊಡುತ್ತಿದ್ದ.
ಒಂದು ಮಧ್ಯಾಹ್ನ, ಸಿಕ್ಕಾಪಟ್ಟೆ ಬಿಸಿಲಿತ್ತು. ನಾವು ಕೆಲವು ಹುಡುಗರು ಮಧ್ಯಾಹ್ನ ಊಟ ಆದ ಮೇಲೆ ಕ್ಲಾಸಿನಲ್ಲಿ ನಿದ್ದೆ ಹೋಗಿ ಬಿಟ್ಟಿದ್ದೆವು. ಕ್ಲಾಸಿಗೆ ಬಂದ ಟೀಚರ್ ನಮ್ಮನ್ನೆಲ್ಲ ನೋಡಿ ಬಯ್ಯತೊಡಗಿದ.
ನಾನು ಎದ್ದು ನಿಂತು “ ನಾವೂ ಕನ್ಫ್ಯೂಸಿಯಸ್ ನಂತೆ ಕನಸಿನೂರಿಗೆ ಹೋಗಿ ಪೂರ್ವಜರನ್ನು ಭೇಟಿ ಮಾಡಿದೆವು“ ಎಂದು ಉತ್ತರಿಸಿದೆ.
“ ಹೌದಾ, ಹಾಗಾದರೆ ಏನು ಹೇಳಿದರು ಪೂರ್ವಜರು? “
ಟೀಚರ್ ಪಟ್ಟು ಸಡಿಲಿಸಲಿಲ್ಲ.
“ ಪ್ರತೀ ಮಧ್ಯಾಹ್ನ ನಮ್ಮ ಟೀಚರ್ ಇಲ್ಲಿ ಬರುತ್ತಾರಾ ಎಂದು ಕೇಳಿದೆವು, ಆದರೆ ಆ ಥರದ ಯಾವ ಟೀಚರ್ ನನ್ನೂ ಅಲ್ಲಿ ಅವರು ನೋಡಿಯೇ ಇಲ್ಲವೆಂದು ಹೇಳಿದರು” ನಾನು ಉತ್ತರಿಸಿದೆ.
ಟೀಚರ್ ಮತ್ತೆ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ.

