ಸಮಾಜ ಈ ಮೂರು ಸಂಗತಿಗಳನ್ನು ನಿರಂತರವಾಗಿ ಹತ್ತಿಕ್ಕುತ್ತದೆ : ಸೆಕ್ಸ್, ಸಾವು ಮತ್ತು ಅಸಂಗತತೆ, ಮತ್ತು ಅಸಂಗತತೆ ಎಲ್ಲಕ್ಕಿಂತ ಹೆಚ್ಚು ಹತ್ತಿಕ್ಕಲ್ಪಟ್ಟಿರುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕಲಿತದ್ದನ್ನು ಬಸಿದು ಖಾಲಿ ಮಾಡಿದಾಗ
ಎದೆ ತಿಳಿಯಾಗುವುದು.
ಸುತ್ತ ಬದುಕಿಗೆ ಸಾಕ್ಷಿಯಾದಾಗ
ಪ್ರಕ್ಷುಬ್ದತೆ ಹೂವಾಗಿ, ಹಣ್ಣಾಗಿ, ಕಳಚಿಕೊಂಡು
ಬೇರಿಗೆ ಶರಣಾಗುವುದು.
ಜಗತ್ತಿನ ಪ್ರತಿ ಬದುಕು ಮೂಲಕ್ಕೆ ಮರಳುತ್ತದೆ
ಮರಳಿದಾಗಲೆ ಅರಳುವುದು ಸಾಧ್ಯ.
ಎಡವಿ ಬಿದ್ದಿದ್ದಾರೆ ಮರಳುವ ಹಾದಿ ಮರೆತವರು,
ನೆನಪಿದ್ದವರು ಮಾತ್ರ
ಸಹಜವಾಗಿ ಸಹಿಷ್ಣುಗಳು, ನಿರಾಸಕ್ತರು,
ಹಿರಿಯಜ್ಜಿಯಂತೆ ಅಂತಃಕರುಣಿಗಳು
ಮಹಾ ರಾಜರಂತೆ ಘನ ಗಂಭೀರರು.
ಅಪರೂಪದ ತಾವೋದಲ್ಲಿ ಮುಳುಗಿದವರು ಮಾತ್ರ
ಬದುಕಿನ ಯಾವ ಸವಾಲಿಗೂ ಸಿದ್ಧರು
ಎದುರಾದರೆ ಸಾವಿಗೂ.
~ ಲಾವೋತ್ಸೇ
ಸೆಕ್ಸ್ ನ ಹತ್ತಿಕ್ಕುವಿಕೆಯ ವಿರುದ್ಧ ಪುಟ್ಟ ವಾತಾವರಣವೊಂದನ್ನ ನಿರ್ಮಿಸಲಾಗಿದೆ ಮತ್ತು ಈ ಕಾರಣವಾಗಿ ಜನ ಕೊಂಚ ಬಿಡುಗಡೆಯ ದಾರಿಯಲ್ಲಿದ್ದಾರೆ. ಸೆಕ್ಸ್ ಗಿಂತ ಸಾವು ಹೆಚ್ಚಾಗಿ ನಿಷಿದ್ಧ (taboo) ವಿಷಯ ಆಗಿದೆ. ಸಾವಿಗಾದರೂ ತನ್ನ ಹತ್ತಿಕ್ಕುವಿಕೆಯ ವಿರುದ್ಧ ಸೆಣಸುವ ಸಂಗತಿಗಳು ಬೇಕು, ಆಗ ಜನ ಸಾವಿನ ಕುರಿತಾದ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು, ಸಾವಿನ ಕುರಿತು ಯೋಚಿಸಬಹುದು, ಧ್ಯಾನಿಸಬಹುದು. ಸಾವು ಇರುವುದು ಖಾತ್ರಿ ಆಗಿರುವಾಗ ಅದು ಅಂಥ ನಿಷಿದ್ಧ ಸಂಗತಿಯಾಗೇನೂ ಉಳಿದಿಲ್ಲ. ಸಾವಿಗಿಂತ ಹೆಚ್ಚು ನಿಷಿದ್ಧ ಸಂಗತಿ ಎಂದರೆ ಅಸಂಗತತೆ (absurd). ನನ್ನ ಇಡೀ ಹೋರಾಟ ಈ taboo ವಿರುದ್ಧ.
ನೀವು ಅಸಂಗತರಾಗಿರಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ಇಡೀ ಅಸ್ತಿತ್ವ ಇರುವುದೇ ಹಾಗೆ. ಅದು ಅರ್ಥವಿಲ್ಲದಷ್ಟು ಅರ್ಥವತ್ತಾದದ್ದು, ತರ್ಕಹೀನ ಎನಿಸುವಷ್ಟು ತರ್ಕಬದ್ಧವಾದದ್ದು. ಎಲ್ಲ ವಿರೋಧಾಭಾಸಗಳು, ಎಲ್ಲ ದ್ವಂದ್ವಗಳು ಅಂತರಂಗದ ಸೌಹಾರ್ದದಲ್ಲಿ ಒಂದಾಗಿವೆ. ಸ್ವತಃ ನೀವೇ ಅಸಂಗತ ಎಂದು ನಿಮಗೆ ಅನಿಸುವುದಿಲ್ಲವೆ? ಇಲ್ಲಿ ನಿಮ್ಮ ಅವಶ್ಯಕತೆ ಇದೆ ಎನ್ನುವುದನ್ನ ಹೇಗೆ ಪ್ರೂವ್ ಮಾಡುತ್ತೀರಿ? ಅಸ್ತಿತ್ವಕ್ಕೆ ನಿಮ್ಮ ಅವಶ್ಯಕತೆ ಇದೆಯೇ? ನಿಮ್ಮ ಹೊರತಾಗಿಯೂ ಅಸ್ತಿತ್ವ ಇರಬಲ್ಲದು, ಪರಿಪೂರ್ಣವಾಗಿ ಇರಬಲ್ಲದು. ಹಾಗಾಗಿ ಇಲ್ಲಿ ನಿಮ್ಮ ಇರುವಿಕೆಯ ಪಾಯಿಂಟ್ ಏನು?
ನೀವು ನಗುವಿಗೆ ಅವಕಾಶ ಮಾಡಿಕೊಟ್ಟು ಅದನ್ನು ಅಸಂಗತ ಎನ್ನುವಿರಾದರೆ, ನಿಮ್ಮ ಅನಿಸಿಕೆಯ ಹಿಂದೆಯೇ ನಿಜವಾದ ಅಸಂಗತತೆ ಇದೆ – ನಗು ಅಲ್ಲ ಆದರೆ ನಗುವವರು. ಇದಕ್ಕೆ ಅವಕಾಶ ಮಾಡಿಕೊಡುವಿರಾದರೆ ನಿಮಗೆ ಬೇಗ ಗೊತ್ತಾಗುತ್ತದೆ ಅದು ನಿಮ್ಮನ್ನು ಅಪರಿಮಿತ ಅವಕಾಶಕ್ಕೆ ತೆರೆದುಕೊಳ್ಳುವಂತೆ ಮಾಡಿದ್ದು. ಲಾಜಿಕ್ ನ ನಿರ್ಬಂಧವೂ ಡ್ರಾಪ್ ಆಗಿದೆ. ಆಗ ನೀವು ಸಹಜವಾಗಿ ಬದುಕುತ್ತೀರಿ, ಯಾವ ಅರ್ಥವನ್ನೂ ಬಯಸುವುದಿಲ್ಲ. ಆಗ ಪ್ರತಿ ಕ್ಷಣವೂ ಒಳಗೊಳಗೆ ಅರ್ಥಬದ್ಧ ಅಥವಾ ಅರ್ಥಹೀನ; ಈ ಎರಡು ಕೂಡ ಒಂದೇ.
ಒಬ್ಬ ಯುವ ಸನ್ಯಾಸಿಗೆ ಹೂ, ಗಿಡ ಮರ ಬಳ್ಳಿಗಳ ಬಗ್ಗೆ ತೀವ್ರ ಪ್ರೀತಿ, ಆದ್ದರಿಂದ ಅವನಿಗೆ ಝೆನ್ ದೇವಸ್ಥಾನದ ಗಾರ್ಡನ್ ನ ಜವಾಬ್ದಾರಿ ವಹಿಸಲಾಗಿತ್ತು. ಈ ದೇವಸ್ಥಾನದ ಪಕ್ಕದಲ್ಲಿಯೇ ಇನ್ನೊಂದು ಪುಟ್ಟ ಝೆನ್ ಆಶ್ರಮವಿತ್ತು. ಅಲ್ಲಿ ವಯಸ್ಸಾದ ಝೆನ್ ಮಾಸ್ಟರ್ ಒಬ್ಬರು ವಾಸ ಮಾಡುತ್ತಿದ್ದರು.
ಒಂದು ದಿನ ದೇವಸ್ಥಾನಕ್ಕೆ ವಿಶೇಷ ಅತಿಥಿಗಳು ಬರುವ ಕಾರ್ಯಕ್ರಮವಿದ್ದುದರಿಂದ, ಯುವ ಸನ್ಯಾಸಿ ಗಾರ್ಡನ್ ಬಗ್ಗೆ ವಿಶೇಷ ಕಾಳಜಿ ವಹಿಸಿದ. ಗಾರ್ಡನ್ ನ ಕಸಗುಡಿಸಿ ಸ್ವಚ್ಛ ಮಾಡಿದ. ಬಾಡಿಹೋಗಿದ್ದ ಹೂಗಳನ್ನು ಕಿತ್ತಿದ. ಬಳ್ಳಿಗಳನ್ನು ಸುಂದರವಾಗಿ ಕಾಣುವಂತೆ ಟ್ರಿಮ್ ಮಾಡಿದ. ಶರತ್ಕಾಲದ ಎಲೆಗಳನ್ನು ನೆಲದ ಮೇಲೆ ನೀಟಾಗಿ ಹಾಸಿದ. ಸನ್ಯಾಸಿಯ ಈ ಕಾಳಜಿಯನ್ನು ಗೋಡೆಯಾಚೆ ನಿಂತಿದ್ದ ವೃದ್ಧ ಝೆನ್ ಮಾಸ್ಟರ್ ಗಮನಿಸುತ್ತಿದ್ದ.
ತನ್ನ ಕೆಲಸ ಮುಗಿದ ಮೇಲೆ ಸನ್ಯಾಸಿ ಒಮ್ಮೆ ಹಿಂತಿರುಗಿ ನೋಡಿ ತೃಪ್ತಿಯಿಂದ ಕಣ್ಣರಳಿಸಿದ.
“ ಎಷ್ಟು ಸುಂದರವಾಗಿ ಕಾಣಸ್ತಾ ಇದೆಯಲ್ಲ ಗಾರ್ಡನ್? “ ಗೋಡೆಯಾಚೆ ನಿಂತಿದ್ದ ಮಾಸ್ಟರ್ ನ ಅಭಿಪ್ರಾಯ ಕೇಳಿದ. “ ಹೌದು ಬಹಳ ಚಂದ, ಆದರೆ ಏನೋ ಕೊರತೆ ಅನಿಸ್ತಾ ಇದೆ. ಗೋಡೆಯಾಚೆ ನನ್ನ ಎತ್ತಿಕೋ, ನಾನು ಸರಿ ಮಾಡ್ತೀನಿ” ಎಂದ ಮಾಸ್ಟರ್. ಸನ್ಯಾಸಿ, ಮಾಸ್ಟರ್ ನ ಎತ್ತಿ, ಗಾರ್ಡನ್ ಒಳಗೆ ಇಳಿಸಿಕೊಂಡ.
ನಿಧಾನವಾಗಿ ಗಾರ್ಡನ್ ಒಳಗೆ ಬಂದ ಮಾಸ್ಟರ್ ನೇರವಾಗಿ ಗಾರ್ಡನ್ ನ ನಟ್ಟ ನಡುವೆ ಇದ್ದ ಮರದ ಬಳಿ ಬಂದು, ಅದರ ಟೊಂಗೆಯೊಂದನ್ನು ಜಗ್ಗಿ ಹಿಡಿದು ಜೋರಾಗಿ ಅಲ್ಲಾಡಿಸಿದ. ಹಣ್ಣಾದ ಎಲೆಗಳೆಲ್ಲ ನೆಲದ ಮೇಲೆ ಬಿದ್ದವು. “ ಹಾಂ, ಈಗ ಸರಿಯಾಯಿತು “ ಎನ್ನುತ್ತ ಮಾಸ್ಟರ್ ಗೋಡೆ ಜಿಗಿದು ತನ್ನ ಆಶ್ರಮಕ್ಕೆ ಹೊರಟುಬಿಟ್ಟ.
********************************

