ವಿನೋದ ಸರಿಯಾದ ಪದ ಅಲ್ಲ. ಆನಂದ ಇನ್ನೂ ಆಳಕ್ಕೆ ಇಳಿಯುವಂಥದು. ಬದುಕಿನಲ್ಲಿ ಸಂತೋಷವನ್ನು ಅನುಭವಿಸಿ, ಬದುಕನ್ನು ಸಂಭ್ರಮಿಸಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಲೌಕಿಕದ ಆಮಿಷ
ನಿನ್ನ ಸೆಳೆಯುತ್ತಿದ್ದರೆ
ನೀನು ಕೇವಲ ಒಬ್ಬ ನೌಕರ.
ಅಲೌಕಿಕದ ತುಡಿತ
ನಿನ್ನ ಜಗ್ಗುತ್ತಿದೆಯಾದರೆ
ನೀನೊಬ್ಬ ಪಕ್ಕಾ ಸುಳ್ಳುಗಾರ.
ಎರಡೂ ಮೂರ್ಖ ಆಸೆಗಳೇ.
ಪ್ರೀತಿ ತಂದಿಡುವ
ಗೊಂದಲಕರ
ಅಮಾಯಕ ಆನಂದವೊಂದೆ
ನಿನ್ನ ಪರಮ ಅಗತ್ಯ.
ನೀನು ಮರೆತದ್ದನ್ನು
ಅವರು ಕ್ಷಮಿಸಿಬಿಡುತ್ತಾರೆ.
- ರೂಮಿ
ನೀವು ಸರ್ಕಸ್ ನೋಡಲು ಹೋಗುತ್ತೀರ, ಅದು ಮೋಜು, ಒಂದು ಬಗೆಯ ಹುಚ್ಚು. ಅದು ಎಂದೂ ನಿಮ್ಮ ಆಳವನ್ನು ತಾಕುವುದಿಲ್ಲ, ಎಂದೂ ನಿಮ್ಮ ಹೃದಯವನ್ನು ಸ್ಪರ್ಷಿಸುವುದಿಲ್ಲ; ಇದು ವಿದೂಷಕಮಯ. ಜನ ಮೋಜನ್ನು ಬಯಸುವುದು ಸಮಯ ಕಳೆಯಲಿಕ್ಕೆ ; ಇದು ಕೇವಲ ತೋರಿಕೆಯದು.
ಹಾಗಾಗಿ ಹೆಚ್ಚು ಆನಂದವನ್ನು ಅನುಭವಿಸಿ, ಸಂತೋಷವನ್ನು ಅನುಭವಿಸಿ, ಅದನ್ನು ಸಂಭ್ರಮಿಸಿ. ಇದರ ಮೂಲಕ ಗ್ರೇಸ್ ಫುಲ್ ಆಗಿ ಚಲಿಸಿ. ಮೋಜು ಒಂದು ಬಗೆಯ ಅಪವಿತ್ರ (profane), ಮತ್ತು ಆನಂದ ಪವಿತ್ರ – ಆದ್ದರಿಂದ ಯಾವತ್ತೂ ಪವಿತ್ರ ನೆಲದ ಮೇಲೆ ಚಲಿಸಿ. ನೀವು ನಗುತ್ತಿರುವುರಾದರೆ, ಅದು ನಿಮ್ಮ ಆನಂದದ ಮೂಲಕ ಹೊರಹೊಮ್ಮಿರಬೇಕೇ ಹೊರತು ಯಾರನ್ನೋ ಯಾವುದನ್ನೋ ಅಪಹಾಸ್ಯ ಮಾಡುವ ಮೂಲಕ ಅಲ್ಲ. ಈ ಅಪಹಾಸ್ಯದ ಒಂದು ಎಳೆ ನಿಮ್ಮೊಳಗೆ ಉಳಿದುಕೊಂಡರೂ ನೀವು ಕೊನೆಗೆ ದುಃಖಿತರಾಗುತ್ತೀರಿ, ಒಂದು ಕೊರಗು ನಿಮ್ಮೊಳಗೆ ಉಳಿದು ಹೋಗುತ್ತದೆ.
ಆದರೆ ನೀವು ಒಂದು ಸಂಗತಿಯಿಂದಾಗಿ ಆನಂದ ಅನುಭವಿಸಿದ್ದೀರಾದರೆ, ಆಗ ಒಂದು ದುಃಖರಹಿತ ಅಪರೂಪದ ಮೌನ ನಿಮ್ಮನ್ನು ತುಂಬಿಕೊಳ್ಳುವುದು, ಮತ್ತು ಈ ಮೌನಕ್ಕೆ ಪೂರ್ಣತೆಯ ಕ್ವಾಲಿಟಿ ಒದಗಿ ಬರುವುದು.
ಒಂದು ದಿನ ಸುಝುಕಿ ರೋಶಿ ತಮ್ಮ ಶಿಷ್ಯರನ್ನೆಲ್ಲ ಕರೆದುಕೊಂಡು ಮಾವಿನ ತೋಟಕ್ಕೆ ಹೋದರು. ಅದು ಮಾವಿನ ಹಣ್ಣಿನ ಸೀಸನ್ ಆದ್ದರಿಂದ ಮಾವಿನ ಮರಗಳ ತುಂಬ ಭರ್ತಿ ಮಾವಿನ ಹಣ್ಣುಗಳು ತುಂಬಿದ್ದವು. ಝೆನ್ ಕಲಿಯುತ್ತಿದ್ದ ಶಿಷ್ಯರೆಲ್ಲ ಅತ್ಯಂತ ಶಿಸ್ತಿನಿಂದ, ಗಂಭೀರವಾಗಿ ಮಾವಿನ ಹಣ್ಣುಗಳನ್ನ ಕಿತ್ತು ಬಾಕ್ಸ್ ಗೆ ತುಂಬಿ ಪ್ಯಾಕ್ ಮಾಡತೊಡಗಿದರು.
ಕೊನೆಗೆ ಮಾಸ್ಟರ್ ರೋಶಿ ಸ್ವತಃ ತಾವೇ ಮರ ಏರಿ, ಹಣ್ಣು ಕಿತ್ತು ಎಲ್ಲ ಶಿಷ್ಯರ ಮೇಲೆ ಎಸೆಯುತ್ತ, ಜೋರಾಗಿ ಕೇಕೆ ಹಾಕಿ ಕೂಗಾಡಲು ಶುರು ಮಾಡುವ ತನಕ, ಶಿಷ್ಯರಿಗೆ, ತಾವು ಪೂರ್ತಿ ಝೆನ್ ಮರೆತದ್ದು, ಮರೆತೇ ಹೋಗಿತ್ತು.

