ಗಿಲ್ಟ್ ಎನ್ನುವುದು ಅಹಂಪೂರಿತ ಮೈಂಡ್ ನ ಭಾಗ; ಇದು ಅಧ್ಯಾತ್ಮಿಕ ಅಲ್ಲ. ಮತಗಳು ಇದನ್ನು ಶೋಷಣೆ ಮಾಡುತ್ತಿವೆ, ಆದರೆ ಇದಕ್ಕೂ ಅಧ್ಯಾತ್ಮಿಕತೆಗೂ ಯಾವ ಸಂಬಂಧವಿಲ್ಲ. ನೀವು ಇನ್ನೊಂದು ರೀತಿ ಮಾಡಬಹುದಿತ್ತು ಎನ್ನುವ ಮಾಹಿತಿಯನ್ನ ಮಾತ್ರ ಗಿಲ್ಟ್ ಕೊಡುತ್ತದೆ. ಇದು ಅಹಂಪೂರಿತ ಭಾವ; ನೀವು ಅಸಹಾಯಕರಾಗಿದ್ದಿರಿ ಎನ್ನುವುದು ಗೊತ್ತಿಲ್ಲವೆಂಬಂತೆ , ಎಲ್ಲವೂ ನಿಮ್ಮ ಕೈಯಲ್ಲೇ ಇತ್ತು ಎನ್ನುವಂತೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸತ್ಯದ ಹಾದಿಯ ಮೇಲೆ
ನಮ್ಮನ್ನು ಕೈ ಹಿಡಿದು ಮುನ್ನಡೆಸುವುದು
ಹೃದಯವೇ ಹೊರತು
ಬುದ್ಧಿಯಲ್ಲ.
ಈ ಪ್ರಯಾಣದಲ್ಲಿ ಹೃದಯ
ನಿಮ್ಮ ಪ್ರಧಾನ ಮಾರ್ಗದರ್ಶಿಯಾಗಿರಲಿ.
‘ಅಹಂ’ ತಕರಾರು ಮಾಡಿದರೆ
ಮುಟ್ಟಿ ಮಾತನಾಡಿಸಿ, ಒಪ್ಪಿಸಿ
ಸಾಧ್ಯವಾಗದಿದ್ದರೆ ಸವಾಲು ಹಾಕಿ
ಭೀಕರ ಯುದ್ಧವಾದರೂ ಚಿಂತೆಯಲ್ಲ
ಹೃದಯ, ನಿಮ್ಮ ಸುಳ್ಳು ಅಹಂ ಮೇಲೆ
ವಿಜಯ ಸಾಧಿಸಲಿ.
ನಿಮ್ಮೊಳಗಿನ
‘ಅಹಂ’ ನ ಎಳೆಗಳನ್ನು ಸ್ಪಷ್ಟವಾಗಿ
ಗುರುತಿಸಬಲ್ಲಿರಾದರೆ,
ಸತ್ಯದ ಹಾದಿಯಲ್ಲಿನ ದೊಡ್ಡ ಆತಂಕವೊಂದನ್ನು
ಯಶಸ್ವಿಯಾಗಿ ನಿಭಾಯಿಸಿದಂತೆ.
~ ಶಮ್ಸ್
ಯಾವುದೂ ನಿಮ್ಮ ಕೈಯಲ್ಲಿ ಇಲ್ಲ. ಸ್ವತಃ ನೀವು ಕೂಡ ನಿಮ್ಮ ಕೈಯಲ್ಲಿ ಇಲ್ಲ. ಸಂಗತಿಗಳು ತಾವೇ ಸಂಭವಿಸುತ್ತಿವೆ; ಯಾವುದನ್ನೂ ಮಾಡಲಾಗುತ್ತಿಲ್ಲ. ಒಮ್ಮೆ ಇದು ನಿಮಗೆ ಅರ್ಥವಾಯಿತೆಂದರೆ ಗಿಲ್ಟ್ ಮಾಯವಾಗುತ್ತದೆ. ಕೆಲವೊಮ್ಮೆ ನೀವು ಒಂದು ಸಂಗತಿಗಾಗಿ ಅಳಬಹುದು, ಶೋಕಿಸಬಹುದು ಆದರೆ ನಿಮ್ಮ ಆಳದಲ್ಲಿ ನಿಮಗೆ ಗೊತ್ತಿದೆ ಅದು ಸಂಭವಿಸುತ್ತದೆ ಎನ್ನುವುದು ಏಕೆಂದರೆ ನೀವು ಅಸಹಾಯಕರು, ಸಂಪೂರ್ಣತೆಯ ಪುಟ್ಟ ಭಾಗ ಮಾತ್ರ. ಇದು ಹೇಗೆಂದರೆ ಮರದ ಮೆಲಿನ ಎಲೆ ಬಿರುಗಾಳಿಗೆ ಕಳಚಿ ಬಿದ್ದಂತೆ. ಆದರೆ ಎಲೆ ಸಾವಿರಾರು ಆಲೋಚನೆಗಳನ್ನು ಮಾಡುತ್ತದೆ; ನಾನು ಹಾಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು, ಹೀಗೆ ಮಾಡಿದ್ದರೆ ನಾನು ಕಳಚಿ ಬೀಳುತ್ತಿರಲಿಲ್ಲ ಇತ್ಯಾದಿಯಾಗಿ. ಬಿರುಗಾಳಿ ಅಷ್ಟು ಭಯಂಕರವಾಗಿದ್ದಾಗ, ಆ ಪುಟ್ಟ ಎಲೆಯ ಕೈಯಲ್ಲಿ ಏನಿತ್ತು, ಆ ಎಲೆ ಏನು ಮಾಡಬಹುದಾಗಿತ್ತು?
ನೀವು ಸಾಮರ್ಥ್ಯಶಾಲಿಗಳು, ನಿಮ್ಮಿಂದ ಎಲ್ಲವೂ ಸಾಧ್ಯ ಎನ್ನುವ ತಪ್ಪು ಭಾವನೆಯನ್ನು ಗಿಲ್ಟ್ ನಿಮ್ಮಲ್ಲಿ ಹುಟ್ಟಿಸುತ್ತದೆ. ಗಿಲ್ಟ್, ಅಹಂ ನ ನೆರಳು ಇದ್ದಹಾಗೆ: ನಿಮ್ಮಿಂದ ಸಂದರ್ಭವನ್ನು ಬದಲಾಯಿಸುವುದು ಸಾಧ್ಯವಿಲ್ಲವಾದರೂ ನಿಮಗೆ ಈ ಬಗ್ಗೆ ಗಿಲ್ಟ್ ಇದೆ. ನೀವು ಆಳಕ್ಕಿಳಿದು ಗಮನಿಸಿದಾಗ, ನೀವು ಅಸಹಾಯಕರಾಗಿರುವುದು ನಿಮಗೆ ಗೆತ್ತಾಗುತ್ತದೆ, ಮತ್ತು ಈ ಇಡೀ ಅನುಭವ ಕಡಿಮೆ ಅಹಂ ಹೊಂದಲು ನಿಮಗೆ ಸಹಾಯ ಮಾಡುತ್ತದೆ.
ನೀವು ಸಂಗತಿಗಳು ರೂಪಗೊಳ್ಳುವುದನ್ನು ಗಮನಿಸುತ್ತಲೇ ಹೋದಂತೆ, ಸೃಷ್ಟಿಯಾಗುವ ಮತ್ತು ಸಂಭವಿಸುವ ಸಂಗತಿಗಳು, ನಿಮ್ಮ ಅಹಂ ನ ಕಡಿಮೆ ಮಾಡುತ್ತ ಹೋಗುತ್ತವೆ. ಪ್ರೀತಿ ಹುಟ್ಟಿಕೊಳ್ಳುತ್ತದೆ – ಮತ್ತು ಬೇರ್ಪಡುವಿಕೆಯೂ. ಈ ಬಗ್ಗೆ ನಾವು ಏನೂ ಮಾಡುವುದು ಸಾಧ್ಯವಿಲ್ಲ. ಇದನ್ನೇ ನಾನು ಅಧ್ಯಾತ್ಮಿಕ ದೃಷ್ಟಿಕೋನ ಎನ್ನುವುದು : ಏನು ಮಾಡುವುದೂ ಸಾಧ್ಯವಿಲ್ಲ ಎನ್ನುವುದು ನಿಮಗೆ ಗೊತ್ತಾಗುವುದು ಮತ್ತು ನೀವು ಈ ಪ್ರಚಂಡ ಅಪಾರತೆಯ ಪುಟ್ಟ ಭಾಗ ಮಾತ್ರ ಎನ್ನುವುದು.

