ತಜ್ಞತೆ (Mastery): ಓಶೋ 365 #Day322

ಜಗತ್ತಿನ ಮೇಲೆ ಅಧಿಪತ್ಯವನ್ನು ಸಾಧಿಸುವುದು ನಿಜವಾದ ಧೈರ್ಯ ಅಲ್ಲ ಬದಲಾಗಿ ತಮ್ಮ ಅದು ತಮ್ಮ ಮೇಲೆ ವಿಜಯವನ್ನು ಸಾಧಿಸುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಭಗವಂತ
ಸದಾ ನಮ್ಮ ಕೆಲಸದಲ್ಲಿಯೇ ಮಗ್ನ.

ಮನುಷ್ಯನ ವಿಕಾಸ ಯಾವತ್ತಿದ್ದರೂ
ಪ್ರಗತಿಯಲ್ಲಿರುವ ಪ್ರಕ್ರಿಯೆ.
ಕೆಲಸ ನಿಧಾನವಾಗಿರಬಹುದು
ಆದರೆ ಮುಂದುವರೆಯುತ್ತಿದೆ ನಿರಂತರವಾಗಿ.

ಪ್ರತಿಯೊಬ್ಬ ಮನುಷ್ಯನೂ
ಪೂರ್ಣವಾಗಲು
ಕಾಯುತ್ತಿರುವ, ತಹತಹಿಸುತ್ತಿರುವ
ಅಪೂರ್ಣ ಕಲಾಕೃತಿಗಳು.

ಭಗವಂತ
ಪ್ರತೀ ಮನುಷ್ಯನನ್ನು
ಪ್ರತ್ಯೇಕ ಕಲಾಕೃತಿಯಂತೆ
ಅನನ್ಯವಾಗಿ ಚಿತ್ರಿಸುತ್ತಾನೆ.

ಮನುಷ್ಯತ್ವ
ಒಂದು ಸೂಕ್ಷ್ಮ ಕಲಾಪ್ರಕಾರ,
ಪ್ರತೀ ಚುಕ್ಕೆಯೂ
ಪೂರ್ಣ ಚಿತ್ರದ ಅತ್ಯಂತ ಮುಖ್ಯ ಭಾಗ.

~ ಶಮ್ಸ್

ಈ ಜಗತ್ತಿನಲ್ಲಿ ಯೋಧನಾಗುವುದು, ಹೋರಾಟಗಾರನಾಗುವುದು ಅಂಥ ಅಸಾಮಾನ್ಯ ಸಂಗತಿಯೇನೂ ಅಲ್ಲ. ಈ ಜಗತ್ತಿನಲ್ಲಿ ಹೆಚ್ಚು ಕಡಿಮೆ ಪ್ರತಿಯೊಬ್ಬನೂ ಯೋಧ ಏಕೆಂದರೆ ಈ ಜಗತ್ತು ಸಂಘರ್ಷಗಳಿಂದ ತುಂಬಿಕೊಂಡಿದೆ. ಇದು ನಿರಂತರವಾದ ಸಂಘರ್ಷ, ಕೆಲವೊಮ್ಮೆ ಉಗ್ರ ಕೆಲವೊಮ್ಮೆ ಶೀತಲ.

ಪ್ರತಿಯೊಬ್ಬ ವ್ಯಕ್ತಿಯೂ ಹೋರಾಡುತ್ತಿದ್ದಾನೆ, ಏಕೆಂದರೆ ಪ್ರತಿಯೊಬ್ಬರಲ್ಲೂ ಮಹತ್ವಾಕಾಂಕ್ಷೆಗಳಿವೆ, ಪ್ರತಿಯೊಬ್ಬರೂ ಈ ವಿಷಕ್ಕೆ ತುತ್ತಾಗಿದ್ದಾರೆ. ಮತ್ತು ಎಲ್ಲೆಲ್ಲಿ ಮಹತ್ವಾಕಾಂಕ್ಷೆ ಇದೆಯೋ ಅಲ್ಲೆಲ್ಲ ಸ್ಪರ್ಧೆಯಿದೆ, ಸಂಘರ್ಷವಿದೆ. ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಮಹತ್ವಾಕಾಂಕ್ಷಿಗಳಾಗುತ್ತಿದ್ದಾರೆ ಏಕೆಂದರೆ ಇಲ್ಲಿಯವರೆಗಿನ ಎಲ್ಲ ಸಮಾಜಗಳ ಬುನಾದಿಯೇ ಮಹತ್ವಾಕಾಂಕ್ಷೆಯಾಗಿದೆ. ನಮ್ಮ ಎಲ್ಲ ಶಿಕ್ಷಣ ಪದ್ಧತಿಗಳು ಮಕ್ಕಳ ತಲೆಯಲ್ಲಿ ತುಂಬುವುದು ಮಹತ್ವಾಕಾಂಕ್ಷಿಗಳಾಗಿ, ಯಶಸ್ವಿಗಳಾಗಿ ಎನ್ನುವುದನ್ನ.

ನಿಜವಾದ ಧೈರ್ಯ, ನಿಜವಾದ ಹೋರಾಟ ಹೊರಗೆ ಇಲ್ಲ. ನಿಜವಾದ ಹೋರಾಟ ಒಳಗೆ ಇದೆ , ಅದು ಒಳಗಿನ ವಿಜಯದ ಕುರಿತಾದದ್ದು. ಅಲೆಕ್ಸಾಂಡರ್ ದ ಗ್ರೇಟ್ ಮಹಾ ಯೋಧನಾಗಿರಬಹುದು, ಆದರೆ ಅವನ ಒಳಗಿನ ಪ್ರವೃತ್ತಿಗಳ ( instincts) ಪ್ರಕಾರ ಅವನೊಬ್ಬ ಗುಲಾಮ. ನೆಪೋಲಿಯನ್ ಮಹಾ ವೀರನಾಗಿರಬಹುದು ಆದರೆ ಅವನ ಒಳಗಿನ ಕ್ರೋಧ, ಕಾಮ, ಉತ್ಕಟತೆಗಳ ಪ್ರಕಾರ ಅವನು ಎಲ್ಲರಂತೆ ಸಾಮಾನ್ಯ ಮನುಷ್ಯ.

ಜೀಸಸ್, ಬುದ್ಧ, ಪತಂಜಲಿ ಈ ಥರದ ಜನರು ನಿಜವಾದ ಧೈರ್ಯಶಾಲಿಗಳು. ಅವರು ತಮ್ಮನ್ನು ತಾನು ಮೀರಿದವರು. ಈಗ ಯಾವ ಬಯಕೆಯೂ ಅವರನ್ನು ಅಲ್ಲಾಡಿಸುವಪದಿಲ್ಲ; ಈಗ ಯಾವ ಅಪ್ರಜ್ಞಾಪೂರ್ವಕ ಪ್ರವೃತ್ತಿಯೂ ಅವರ ಮೇಲೆ ಅಧಿಕಾರ ಸ್ಥಾಪಿಸುವುದಿಲ್ಲ. ಅವರು ತಮ್ಮ ತಮ್ಮ ಬದುಕುಗಳ ಮಾಸ್ಟರ್ ಗಳು.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.