ಗುಲಾಮಿ ಸ್ಥಿತಿ ( Bondage ) : ಓಶೋ 365 #Day 323

ನೀವು 100% ಜವಾಬ್ದಾರಿಯನ್ನು ಹೊರಬೇಕಾಗಿದೆ, ಆಗ ಮಾತ್ರ ನೀವು ಸ್ವತಂತ್ರರಾಗಬಹುದು. ಮತ್ತು ಆಗ ಈ ಜಗತ್ತಿನಲ್ಲಿ ಯಾವ ಗುಲಾಮಿ ಮನೋಭಾವವೂ ಇರುವುದಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ಸಣ್ಣ ಮನೆಯಲ್ಲಿ
ದುಃಖ ಮತ್ತು ಗೊಂದಲಗಳೊಡನೆ
ವಾಸವಾಗಿದ್ದೆ.

ಆಮೇಲೊಬ್ಬ ಗೆಳೆಯ ಸಿಕ್ಕ
ರಾತ್ರಿಯಿಡೀ  ಹಾಡು, ಕುಣಿತ
ಮತ್ತು ಕುಡಿತ.

ದುಃಖ ಮತ್ತು ಗೊಂದಲ
ಸಿಟ್ಟಿಗೇಳತೊಡಗಿದರು
ಆವಾಜ್ ಹಾಕತೊಡಗಿದರು.

“ಈ ಮೋಜು
ಮುಂದುವರೆಸಿದರೆ
ಮನೆ ಬಿಟ್ಟು ಹೋಗುತ್ತೇವೆ ನೋಡು.”

~ ಹಾಫೀಜ್

ಹಾಗೆ ನೋಡಿದರೆ, ಕೋಪವೂ ಒಂದು ಬಗೆಯ ಗುಲಾಮಿ ಸ್ಥಿತಿ ( bondage). ನಾನು ಇಂಥ ಸ್ಥಿತಿಯಲ್ಲಿ ಇಲ್ಲದಿರುವ ಕಾರಣ ನನಗೆ ಕೋಪ ಬರುವುದಿಲ್ಲ. ನಾನು ಇನ್ನೊಬ್ಬರ ಮೇಲೆ ಸಿಟ್ಟಿಗೆದ್ದು ವರ್ಷಗಳೇ ಆದವು, ಏಕೆಂದರೆ ನಾನು ಯಾವುದಕ್ಕೂ ಬೇರೆ ಯಾರನ್ನೂ ಜವಾಬ್ದಾರರನ್ನಾಗಿಸುವುದಿಲ್ಲ. ನಾನು ಸ್ವತಂತ್ರ, ಹಾಗಾಗಿ ನಾನು ಯಾಕೆ ಸಿಟ್ಟಿಗೇಳಬೇಕು? ನಾನು ದುಃಖಿತನಾಗ ಬಯಸಿದರೆ ಅದು ನನ್ನ ಸ್ವಾತಂತ್ರ್ಯ. ನಾನು ಖುಶಿಯಾಗಿರಲು ಬಯಸಿದರೆ, ಅದು ನನ್ನ ಸ್ವಾತಂತ್ರ್ಯ. ಸ್ವಾತಂತ್ರ್ಯ ಯಾವುದಕ್ಕೂ ಹೆದರುವುದಿಲ್ಲ, ಸ್ವಾತಂತ್ರ್ಯ ಸಿಟ್ಟಿಗೇಳುವುದಿಲ್ಲ. ಒಮ್ಮೆ ನಿಮಗೆ ನಿಮ್ಮ ಜಗತ್ತು ನೀವೇ ಎನ್ನುವುದು ಗೊತ್ತಾಗಿಬಿಟ್ಟರೆ, ಆಗ ನೀವು ಒಂದು ವಿಭಿನ್ನ ತಿಳುವಳಿಕೆಯನ್ನು ಮುಟ್ಟುತ್ತೀರಿ. ಆಗ ಯಾವುದೂ ಮ್ಯಾಟರ್ ಆಗುವುದಿಲ್ಲ. ಆಗ ಬಾಕಿ ಎಲ್ಲವೂ ಆಟ ಮತ್ತು ಸಮಜಾಯಿಷಿ.

ಒಮ್ಮೆ ಶಿಷ್ಯನೊಬ್ಬ ಝೆನ್ ಮಾಸ್ಟರ್ ಬಳಿ ಹೋಗಿ ಅವರ ಸಲಹೆ ಕೇಳಿದ.

“ಮಾಸ್ಟರ್, ನನ್ನ ಸಿಟ್ಟು ಹತೋಟಿಗೆ ಸಿಗುತ್ತಿಲ್ಲ, ಏನಾದರೂ ಉಪಾಯ ಹೇಳಿ “

ಮಾಸ್ಟರ್ : ಹಂ, ಇದೇನೋ ವಿಚಿತ್ರವಾಗಿದೆಯಲ್ಲ, ಎಲ್ಲಿ ಒಮ್ಮೆ ನಿನ್ನ ಸಿಟ್ಟು ತೋರಿಸು, ಹೇಗಿದೆ ನೋಡೋಣ.

ಶಿಷ್ಯ : ಆದರೆ ಮಾಸ್ಟರ್, ನನಗೀಗ ಸಿಟ್ಟು ಬಂದಿಲ್ಲ, ಹೇಗೆ ತೋರಿಸಲಿ?

ಮಾಸ್ಟರ್ : ಹಾಗಾದ್ರೆ ಯಾವಾಗ ತೋರಸ್ತೀಯಾ?

ಶಿಷ್ಯ : ಅಯ್ಯೋ  ಅದು ಹಾಗೆ ಹೇಳಕ್ಕಾಗಲ್ಲ, ಅಚಾನಕ್ ಆಗಿ ಬರತ್ತೆ.

ಮಾಸ್ಟರ್ : ಹಾಗಾದ್ರೆ ಅದು ನಿನ್ನ ಸ್ವಂತದ್ದಲ್ಲ. ಸ್ವಂತದ್ದಾಗಿದ್ರೆ ಕೇಳಿದಾಗೆಲ್ಲ ನೀನು ಅದನ್ನ ನನಗೆ ತೋರಿಸಬಹುದಾಗಿತ್ತು. ಅದು ಹುಟ್ಟಿನಿಂದ ಬಂದದ್ದಲ್ಲ, ಅಪ್ಪ ಅಮ್ಮ ಕೊಟ್ಟಿದ್ದಲ್ಲ. ನಿನ್ನದಲ್ಲ ಅಂದ ಮೇಲೆ ನಿನ್ನ ಹತೋಟಿಗೆ ಹೇಗೆ ಬರತ್ತೆ ಆ ಸಿಟ್ಟು?

ಈ ಸಮಜಾಯಿಶಿ ಕೇಳಿ ಶಿಷ್ಯ ಕುಣಿದು ಕುಪ್ಪಳಿಸಿಬಿಟ್ಟ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.