ವಚನ ವೈವಿಧ್ಯ : ಪ್ರಸ್ತಾವನೆ

ವಚನಗಳ ಬಗ್ಗೆ ಹೆಮ್ಮೆಪಡುವುದು ಎಷ್ಟು ಸಹಜವೋ ವಚನಗಳ ವಿಚಾರವನ್ನು ಮಥಿಸುವುದು ಕೂಡ ಮುಖ್ಯ. ಯಾಕೆಂದರೆ ನಾವು ಅನ್ಯವೆಂದು ಭಾವಿಸಿರುವ ನುಡಿ-ಚಿಂತನೆಗಳ ಪ್ರಭಾವಕ್ಕೆ ಒಳಗಾಗಿರದ ಅವಧಿಯ, ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಗೆ ಸೇರಿದ, ಬೇರೆ ಜಾತಿಯ, ಕಸುಬಿನ ಜನ ವ್ಯಕ್ತಪಡಿಸಿದ ಚಿಂತನೆಗಳ ನುಡಿ ಸಂಪತ್ತು ಇದು… । ಓ.ಎಲ್.ನಾಗಭೂಷಣ ಸ್ವಾಮಿ

ನಮಸ್ಕಾರ.

ಅಕ್ಕ ಮಹಾದೇವಿಯವರ ವಚನಗಳೊಡನೆ ಸಂವಾದ ನಡೆಸಿದ ನಂತರ ವಚನ ವೈವಿಧ್ಯವನ್ನು ಸಾಧ್ಯವಾದಷ್ಟು  ಗಮನಿಸೋಣ,

ಹನ್ನೆರಡನೆಯ ಶತಮಾನದಿಂದ ಹದಿನೆಂಟನೆಯ ಶತಮಾನದವರೆಗೆ, ಆರು ನೂರು ವರ್ಷಗಳ ಅವಧಿಯಲ್ಲಿ ಸುಮಾರು ಇಪ್ಪತ್ತು ಸಾವಿರ ವಚನಗಳು ಕನ್ನಡದಲ್ಲಿ ರೂಪುಗೊಂಡವು. ಬಸವಣ್ಣ ೧೪೧೪, ಅಲ್ಲಮ ೯೭೬, ಚೆನ್ನಬಸವಣ್ಣ ೧೭೬೩, ಸಿದ್ಧರಾಮ ೧೯೯೨, ಅಕ್ಕಮಹಾದೇವಿಯೂ ಸೇರಿದಂತೆ ೩೫ ಮಹಿಳೆಯರ ೧೩೫೧ ಪ್ರಕಟವಾಗಿವೆ. ಬಸವಯುಗ ಎಂದು ಕರೆಯಲಾಗುವ ಅವಧಿಯ ೧೨೦ ವಚನಕಾರರ ೬೫೩೪ ವಚನಗಳು, ಅಂದರೆ ಹನ್ನೆರಡನೆಯ ಶತಮಾನದ ಅವಧಿಯದು ಎಂದು ೧೫೯ ಜನರ ೯೦೩೦ವಚನಗಳು ಪ್ರಕಟವಾಗಿವೆ.

ಗಮನಿಸಬೇಕಾದ ಮುಖ್ಯವಾದ ಮಾತೆಂದರೆ ಈ ಯಾವ ವಚನಕಾರರ ಜೀವಿತಾವಧಿಯ ಹಸ್ತಪ್ರತಿಗಳು ನಮಗೆ ಸಿಕ್ಕಿಲ್ಲ. ಸುಮಾರು ಮುನ್ನೂರು ವರ್ಷಗಳ ನಂತರ ರಚನೆಗೊಂಡ ಬೇರೆ ಬೇರೆಯ ಬಗೆಯ ಸಂಕಲನಗಳಲ್ಲಿ ಇಷ್ಟು ವಚನಗಳು ಸಿಗುತ್ತವೆ. ಹಾಗಾಗಿ ಬೇರೆ ಬೇರೆಯ ಶತಮಾನಗಳ ಮನಸ್ಸು ಹನ್ನೆರಡನೆಯ ಶತಮಾನದ ರಚನೆಗಳಿಗೆ ಹೇಗೆ ಸ್ಪಂದಿಸಿತು ಅನ್ನುವ ಸಂಗತಿಯನ್ನೂ ಈ ವಚನಗಳು ಒಳಗೊಂಡಿವೆ. ಹಾಗೆ ಯಾವುದು ತಿದ್ದುಪಡಿ, ಯಾವುದು ವಚನಕಾರರ ರಚನೆಯ ನಿಜರೂಪ ಅನ್ನುವುದನ್ನು ಬಿಡಿಸಿ ತೋರಿಸುವುದು ಬಹಳ ಕಷ್ಟದ ಕೆಲಸ, ಅಂಥ ಶ್ರಮಕ್ಕೆ ಯಾರೂ ಇದುವರೆಗೆ ಕೈ ಹಾಕಿಲ್ಲ.

ಇಂದಿನ ಓದುಗನಾಗಿ ನನಗೆ ಹನ್ನೆರಡನೆಯ ಶತಮಾನದ ಸುಮಾರು ಒಂಬತ್ತು ಸಾವಿರ ವಚನಗಳಲ್ಲಿ ಮನುಷ್ಯಾನುಭವವನ್ನು ಕುರಿತ ರಚನೆಗಳು ಬಹಳ ಮುಖ್ಯವಾಗಿ ಕಂಡಿವೆ. ಪಾರಿಭಾಷಿಕಗಳ ಗೋಜಲು ಇರುವ, ಕೇವಲ ಆಚರಣೆಯ ವಿವರಗಳಲ್ಲಿ ಮಗ್ನವಾದ, ಅನ್ಯ ಮತವನ್ನು ಖಂಡಿಸುವುದೇ ಮುಖ್ಯ ಆಸಕ್ತಿಯಾದ ವಚನಗಳನ್ನು ಗಮನಿಸದೆ ಸದ್ಯಕ್ಕೆ ಪಕ್ಕಕ್ಕೆ ಇರಿಸಿದರೆ ಅಂದಾಜು ೧೦೦೦ ಅಥವಾ ಹೆಚ್ಚೆಂದರೆ ೧೫೦೦ ವಚನಗಳು ಗಮನ ಸೆಳೆಯುತ್ತವೆ.

ಇದೇನೂ ಕಡಿಮೆ ಸಂಖ್ಯೆಯಲ್ಲ. ಇಂಥ ವಚನಗಳನ್ನು ಕಂಡು ಹಿಡಿಯುವುದು ಹೇಗೆ ಎಂದು ಸರಳವಾದ ನಿಯಮಗಳನ್ನು ರೂಪಿಸಿಕೊಂಡೆ. ಸಂಸ್ಕೃತದ ಶ್ಲೋಕ ಅಥವಾ ವಾಕ್ಯಗಳನ್ನು ಸೇರಿಸಿಕೊಂಡಿರುವ, ಮತೀಯ/ಧಾರ್ಮಿಕ ಪರಿಭಾಷೆಗಳ ಅರ್ಥವನ್ನು ವಿವರಿಸುವ, ಚರ್ಚಿಸುವ, ಸುಮಾರು ಎಂಟರಿಂದ ಹತ್ತು ಸಾಲುಗಳಿಗಿಂತ ದೊಡ್ಡದಾಗಿರುವ ವಚನಗಳನ್ನು ಪ್ರತ್ಯೇಕ ಗಮನ ಬಯಸುವ ವಚನಗಳೆಂದು ಬೇರೆಯಾಗಿ ಇರಿಸಿಕೊಂಡೆ. ವಾಸ್ತವದ ಚಿತ್ರಣ, ಅದು ಮೂಡಿಸುವ ಭಾವ, ಆನಂತರ ಬೌದ್ಧಿಕವಾಗಿ ತಳೆಯುವ ನಿಲುವನ್ನು ಖಚಿತವಾಗಿ ಮಂಡಿಸುವ ವಚನಗಳಿಗೆ ಹೆಚ್ಚಿನ ಗಮನ ನೀಡಿದೆ. ಅಂಥ ಸುಮಾರು ಒಂದು ಸಾವಿರದ ಅರುವತ್ತು ವಚನಗಳನ್ನು ಆಯ್ಕೆ ಮಾಡಿ ವಚನಸಾವಿರವೆಂಬ ಹೆಸರಿನಲ್ಲಿ ಸಂಕಲನ ಮಾಡಿದೆ. ಅದು ೨೦೧೪ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಯಿತು.

ವಚನಗಳನ್ನು ಧಾರ್ಮಿಕ, ಮತೀಯ ರಚನೆಗಳೆಂದು, ಆಧಾರ ಗ್ರಂಥಗಳೆಂದು ಪರಿಗಣಿಸುವುದು ಬೇರೆಯದೇ ಬಗೆಯ ವಿದ್ವತ್ತು, ಆಸಕ್ತಿ, ನಂಬಿಕೆಗಳನ್ನು ಬೇಡುವ ಕೆಲಸ. ಅದಕ್ಕ ಅಗತ್ಯವಾದ ಸಿದ್ಧತೆ, ಮನೋಧರ್ಮ, ವಿದ್ವತ್ತು ನನ್ನದಲ್ಲ. ಮನುಷ್ಯಾನುಭವಕ್ಕೆ ನುಡಿರೂಪಕೊಡುವ, ಬದುಕಿನ ಬಗ್ಗೆ ಸ್ವಸ್ಥವಾದ ನೋಟವನ್ನು ನೀಡುವ, ವೈಚಾರಿಕ ಚರ್ಚೆಗೆ ಅನುವುಮಾಡಿಕೊಡುವ ರಚನೆಗಳು ನನ್ನನ್ನು ಸೆಳೆದಿವೆ. ಇಂಥ ಸಾವಿರ ವಚನಗಳಲ್ಲಿ ಒಂದೇ ಬಗೆಯ ಚಿಂತನೆ ಇಲ್ಲ. ಆಯಾ ವಚನಕಾರರ ವೃತ್ತಿ, ಬದುಕಿದ ಪರಿಸರ, ಲೋಕ ದೃಷ್ಟಿಗೆ ಅನುಸಾರವಾಗಿ ಬೇರೆ ಬೇರೆಯ ನಿಲುವು, ಪ್ರತಿಪಾದನೆಗಳು ಕಾಣುತ್ತವೆ.

ವಚನಗಳ ಬಗ್ಗೆ ಹೆಮ್ಮೆಪಡುವುದು ಎಷ್ಟು ಸಹಜವೋ ವಚನಗಳ ವಿಚಾರವನ್ನು ಮಥಿಸುವುದು ಕೂಡ ಮುಖ್ಯ. ಯಾಕೆಂದರೆ ನಾವು ಅನ್ಯವೆಂದು ಭಾವಿಸಿರುವ ನುಡಿ-ಚಿಂತನೆಗಳ ಪ್ರಭಾವಕ್ಕೆ ಒಳಗಾಗಿರದ ಅವಧಿಯ, ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಗೆ ಸೇರಿದ, ಬೇರೆ ಜಾತಿಯ, ಕಸುಬಿನ ಜನ ವ್ಯಕ್ತಪಡಿಸಿದ ಚಿಂತನೆಗಳ ನುಡಿ ಸಂಪತ್ತು ಇದು.

ಕನ್ನಡದ ಪ್ರಮುಖ ವಚನಕಾರರ ಆಯ್ದ ರಚನೆಗಳ ಸಂವಾದದ  ಜೊತೆಗೇ ಅಷ್ಟಾಗಿ ಗಮನ ಸೆಳೆಯದೆ ಇರುವ ವಚನಕಾರರ ವಿಚಾರ ವೈವಿಧ್ಯವನ್ನು ಓದುಗರ ಗಮನಕ್ಕೆ ತರುವ ಆಸೆಯಿಂದ ಈ ಅಂಕಣ ರೂಪುಗೊಂಡಿದೆ. ವಚನ, ಅದರಲ್ಲಿ ತೊಡಕೆನಿಸುವ ಪದ, ನುಡಿಗಟ್ಟುಗಳ ಅರ್ಥ, ನಮ್ಮ ಈಗಿನ ನುಡಿರೂಪದಲ್ಲಿ ವಚನದ ಸಾರಾಂಶ, ಆನಂತರ ಅದರ ವಿಚಾರ ಕುರಿತ ಮಾತು ಎಂದು ಅಕ್ಕನ ವಚನಗಳಿಗೆ ಅನುಸರಿಸಿದ ಮಾದರಿಯಲ್ಲೇ ಈ ಬರಹಗಳೂ ಇವೆ. ಹೆಚ್ಚು ಪ್ರಚಲಿತವಲ್ಲದ ವಚನಕಾರರ ಬಗ್ಗೆ ಪುಟ್ಟ ಪರಿಚಯವನ್ನೂ ನೀಡಿದ್ದೇನೆ.

ನಾವೆಲ್ಲರೂ ಎದುರಿಸುವ, ಅನುಭವಿಸುವ, ಸಂದೇಹಪಡುವ ಸಂಗತಿಗಳನ್ನೇ ಎಲ್ಲ ಕಾಲದ ಎಲ್ಲ ನುಡಿಯ ಜನರೂ ಅನುಭವಿಸಿರುತ್ತಾರೆ, ಅನುಭವಕ್ಕೆ ನುಡಿ ರೂಪ ಕೊಟ್ಟಿರುತ್ತಾರೆ. ನಮ್ಮದಲ್ಲದ ಕಾಲದ ಮನುಷ್ಯರ ಮಾತು ನಿಮ್ಮನ್ನು ನಾವೇ ನೋಡಿಕೊಳ್ಳುವ ನುಡಿಕನ್ನಡಿಯಾಗಿ ನನಗೆ ಕಂಡಿದೆ. ಗಂಡು-ಹೆಣ್ಣು-ಅಧಿಕಾರ; ಅರಿವು-ಆಚರಣೆ-ಕ್ರಿಯೆ; ಮರೆವು, ಸಂಬಂಧ ಮಾತು; ಸಂದೇಹ-ವಿಶ್ವಾಸ; ಏನು ಬೇಕು, ಏನು ಯಾಕೆ ಬೇಡ ಅನ್ನುವ ಚರ್ಚೆ ಇವೆಲ್ಲ ಬಗೆಬಗೆಯಾಗಿ ವ್ಯಕ್ತವಾಗಿರುವ, ಆದರೆ ಪ್ರತ್ಯೇಕ ಗಮನವನ್ನು ಬಯಸುವ ಬಸವ, ಅಲ್ಲಮ, ಅಕ್ಕಮಹಾದೇವಿ, ನೀಲಾಂಬಿಕೆ ಇವರನ್ನು ಬಿಟ್ಟು ಉಳಿದವರ  ವಚನಗಳನ್ನು ದಿನ ಬಿಟ್ಟು ದಿನ, ಸುಮಾರು ಎರಡು ತಿಂಗಳ ಕಾಲ ನೋಡೋಣ. 


(ನಾಳೆಯಿಂದ ವಚನಗಳ ವ್ಯಾಖ್ಯಾನ ಸರಣಿ ಆರಂಭವಾಗಲಿದ್ದು, ಎರಡು ದಿನಗಳಿಗೆ ಒಂದು ಲೇಖನ ಮೂಡಿಬರಲಿದೆ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.