ವಚನ ವೈವಿಧ್ಯ#1 : ಕಾಲಿಲ್ಲದ ಕುದುರೆ-ಅಮುಗೆ ರಾಯಮ್ಮ

ಇಲ್ಲಿರುವ ಸಂಕೇತ ತೀರ ಸ್ಪಷ್ಟವಾಗಿಯೇ ಇದೆ.  ಇದೆ. ಕುದುರೆಯ ಸವಾರಿ ಕಷ್ಟವಿರಬಹುದು ಆದರೆ ಅಸಾಧ್ಯವಲ್ಲ. ಕಲಿತುಕೊಂಡರೆ ಯಾರು ಬೇಕಾದರೂ ರಾವುತರಾಗಬಹುದು… । ಓ.ಎಲ್.ನಾಗಭೂಷಣ ಸ್ವಾಮಿ

ಕಾಲಿಲ್ಲದ ಕುದುರೆಯನೇರಿ ರಾವುತಿಕೆಯ ಮಾಡಬೇಕು.
ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು
ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ
ಇಹಲೋಕಕ್ಕೆ ವೀರನೆಂಬೆ
ಪರಲೋಕಕ್ಕೆ ಧೀರನೆಂಬೆ
ಅಮುಗೇಶ್ವರಲಿಂಗಕ್ಕೆ ಅಧಿಕನೆಂಬೆ(೫. ೬೩೨)

(ರಾವುತಿಕೆ-ಕುದುರೆಯ ಸವಾರಿ, ಧೀರ- ʻಧೀʼ ಅಂದರೆ ಬುದ್ಧಿ ಉಳ್ಳವನು, ವಿವೇಕಿ; ಅಧಿಕ-ಹೆಚ್ಚು, ಮಿಗಿಲು)

ಕಾಲಿಲ್ಲದ ಕುದುರೆಯ ಸವಾರಿ ಮಾಡಬೇಕು. ಕಡಿವಾಣ ಇರದ ಕುದುರೆಯನ್ನು ಹಿಡಿದು ನಿಲ್ಲಿಸಬೇಕು. ಕಾಲಿಲ್ಲದ ಕುದುರೆಯನ್ನು ಬೀದಿಯಲ್ಲಿ ಕುಣಿಸಬೇಕು. ಹಾಗೆಲ್ಲ ಮಾಡುವುದಕ್ಕೆ ಸಾಧ್ಯವಾದರೆ ಅಂಥವರನ್ನು ಈ ಲೊಕದ ವೀರ, ಪರಲೋಕಕ್ಕೆ ತಕ್ಕ ಬುದ್ಧಿವಂತ, ವಿವೇಕಿ ಅನ್ನುತ್ತೇನೆ. ಅಮುಗೇಶ್ವರನಿಗಿಂತ ಮಿಗಿಲು ಅನ್ನುತ್ತೇನೆ.

ಇಲ್ಲಿರುವ ಸಂಕೇತ ತೀರ ಸ್ಪಷ್ಟವಾಗಿಯೇ ಇದೆ.  ಇದೆ. ಕುದುರೆಯ ಸವಾರಿ ಕಷ್ಟವಿರಬಹುದು ಆದರೆ ಅಸಾಧ್ಯವಲ್ಲ. ಕಲಿತುಕೊಂಡರೆ ಯಾರು ಬೇಕಾದರೂ ರಾವುತರಾಗಬಹುದು. ಕಲಿತುಕೊಂಡರೆ ಯಾರು ಬೇಕಾದರೂ ಕುದುರೆಯನ್ನು ಕುಣಿಸಬಹುದು. ಓಡುತ್ತಿರುವ ಕುದುರೆಯನ್ನು ನಿಲ್ಲಿಸಲೂಬಹುದು. ಆದರೆ ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ, ಅದರ ಸವಾರಿ (ರಾವುತಿಕೆ) ಸಾಧ್ಯವಾಗುವುದಾದರೆ…ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ, ಆದ್ದರಿಂದಲೇ ಎತ್ತ ಹೋಗುವುದೆಂದು ಅರಿವಾಗದು. ಅದನ್ನು ಹಿಡಿದು ನಿಲ್ಲಿಸಲು ಕಡಿವಾಣವೂ ಇಲ್ಲ. ಮನಸಿನ ಕುದುರೆಯನ್ನು ನಿಲ್ಲಿಸಲು ಸಾಧ್ಯವಾಗುವುದಾದರೆ…ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ, ಅದನ್ನು ನಮ್ಮಿಚ್ಛೆಯಂತೆ ಬೀದಿಯಲ್ಲಿ, ಇತರರಿಗೂ ತಿಳಿಯುವಂತೆ, ಕುಣಿಸಲು ಆಗುವುದಾದರೆ–ಆಗ ಅಂಥವರನ್ನು ಈ ಲೋಕದ ವೀರರು, ಪರಲೋಕದ ವಿವೇಕಿಗಳು (ಧೀರ-ಧೀ=ವಿವೇಕ/ ಬುದ್ಧಿ ಇರುವವರು) ಎನ್ನುತ್ತೇನೆ.

ನಾವು ಬಹಳಷ್ಟು ಜನ ಮನಸ್ಸಿನ ಕುದುರೆಯ ಸವಾರರಲ್ಲ, ನಾವೇ ಕುದುರೆಗೆ ವಶವಾಗಿದ್ದೇವೆ ಅನ್ನುವುದು ನಮಗೆ ಗೊತ್ತಿಲ್ಲ. ಮನಸಿನ ಕುದುರೆಗೆ ವಶವಾಗಿದ್ದರೂ ನಾವು ವೀರರು, ಧೀರರು ಎಂಬ ಭ್ರಮೆಯಲ್ಲಿರುತ್ತೇವೆ, ಅಲ್ಲವೇ? ಅಲ್ಲಮ ವಚನವೊಂದು ಕೂಡ ಕೊಟ್ಟ ಕುದುರೆಯನ್ನು ಏರಲು ಅರಿಯದ ಮತ್ತೊಂದು ಕುದುರೆಯನ್ನು ಬಯಸುತ್ತಾ ಬದುಕು ವ್ಯರ್ಥಮಾಡಿಕೊಳ್ಳುವ ಬಗ್ಗೆ ಹೇಳುತ್ತದೆ (ಸಂ.೨, ವ.೧೨೭)


ಅಮುಗೆ ರಾಯಮ್ಮ

ಸು. ೧೧೫೦ರ ಕಾಲದ ವಚನಕಾರ್ತಿ, ವರದಾನಿಯಮ್ಮ ಎಂಬುದು ಈಕೆಯ ಇನ್ನೊಂದು ಹೆಸರು. ಈಕೆಯ ೧೧೬ ವಚನಗಳು ಪ್ರಕಟವಾಗಿವೆ. ಅಮುಗೇಶ್ವರ ಎಂಬುದು ವಚನಾಂಕಿತ. ರಾಯಮ್ಮನು ಅಮುಗೆ ದೇವಯ್ಯನ ಹೆಂಡತಿ. ನೇಕಾರ ವೃತ್ತಿಯವರು. ಸೊನ್ನಲಿಗೆಯ ಸಮೀಪದ ಪುಳಜೆ,ಇದ್ದೆ ಎಂಬ ಊರುಗಳಲ್ಲಿದ್ದವರು. ಅಮುಗಿ ದೇವಯ್ಯನಿಗೆ ಇದ್ದೆ ಎಂಬ ಗ್ರಾಮವನ್ನು ದಾನವಾಗಿ ಕೊಟ್ಟ ಬಗ್ಗೆ ೧೧೯೯ರ ಶಾಸನವೊಂದು ಹೇಳುತ್ತದೆ, ಅಥವಾ ಈಗಿನ ಸೊಲ್ಲಾಪುರದಲ್ಲಿದ್ದ ದಂಪತಿ ಇವರು. ಅಮುಗೆ ದೇವಯ್ಯನ ಬಗ್ಗೆ ಅಮುಗೆ ದೇವಯ್ಯ ಸಾಂಗತ್ಯ ಎಂಬ ಕೃತಿ ನಡುಗನ್ನಡ ಕಾಲದಲ್ಲಿ ರಚನೆಯಾಗಿದೆ.  ಈ ದಂಪತಿ ಕುರಿತು ಹಲವು ಐತಿಹ್ಯಗಳಿವೆ. ದೇವಯ್ಯನು ಸಿದ್ಧರಾಮನನ್ನು ಭವಿ ಎಂದು ಕರೆದು, ಆತ ನೀಡಿದ ಭಿಕ್ಷೆ ತಿರಸ್ಕಾರ ಮಾಡಿದ; ಸಿದ್ಧರಾಮನ ಆಜ್ಞೆಯಂತೆ ಊರು ಬಿಟ್ಟು ಹೋಗುವಾಗ ಸ್ವತಃ ಕಪಿಲಸಿದ್ಧ ಮಲ್ಲಿಕಾರ್ಜುನನು ಬಂದು ಅವನ ಸಾಮಗ್ರಿಗಳನ್ನು ಹೊತ್ತು ನಡೆದ ಎಂಬ ಕಥೆ ಪ್ರಸಿದ್ಧವಾಗಿದೆ. ಸಿದ್ಧರಾಮ ಅನುಸರಿಸುತ್ತಿದ್ದ ಸ್ಥಾವರ ಪೂಜೆಯನ್ನು ತಿರಸ್ಕಾರ ಮಾಡಿ ಇಷ್ಟಲಿಂಗದ ಆರಾಧನೆಯತ್ತ ಜನ ಒಲಿದದ್ದರ ಸಂಕೇತವೆಂದು ಈ ಕಥೆಯನ್ನು ವ್ಯಾಖ್ಯಾನಿಸುವುದಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.