ಪ್ರತಿಯೊಬ್ಬರೂ ಹುಚ್ಚರು. ನೀವು ಹುಚ್ಚರು ಎನ್ನುವುದು ನಿಮಗೆ ಅರಿವಾದ ಕೂಡಲೇ ನಿಮ್ಮೊಳಗೆ ವಿವೇಕ ಹುಟ್ಟಿಕೊಳ್ಳುವುದು; ಅದು ಈಗಾಗಲೇ ನಿಮ್ಮ ಹತ್ತಿರದಲ್ಲಿದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹುಚ್ಚುತನ ಅನುಗ್ರಹ ಅನ್ನುತ್ತಾನೆ ನೀಷೆ.
ನೀವು ಹುಚ್ಚರು ಎನ್ನುವುದು ನಿಮಗೆ ಅರಿವಾದ ಕ್ಷಣದಲ್ಲಿಯೇ ನೀವು ಅದನ್ನು ದಾಟಿ ಹೋಗುವಿರಿ; ಆಗಲೇ ನೀವು ವಿವೇಕದೆಡೆ ಮೊದಲ ಹೆಜ್ಜೆಯನ್ನು ಇಟ್ಟಿರುವಿರಿ. ತಾವು ಹುಚ್ಚರು ಎನ್ನುವುದು ಜನರಿಗೆ ಅರಿವಾಗುವುದೇ ಇಲ್ಲ ಆದ್ದರಿಂದಲೇ ಅವರು ಕೊನೆವರೆಗೂ ಹುಚ್ಚರಾಗಿಯೇ ಉಳಿಯುತ್ತಾರೆ. ಜನರಿಗೆ ಹುಚ್ಚುತನದ ಬಗ್ಗೆ ಗೊತ್ತಿಲ್ಲ ಅಷ್ಟೇ ಅಲ್ಲ, ಹಾಗೆಂದು ನೀವು ಅವರಿಗೆ ಗೊತ್ತು ಮಾಡಿಸಲು ಪ್ರಯತ್ನ ಮಾಡಿದಾಗ ಅವರು ತಮ್ಮನ್ನು ಡಿಫೆಂಡ್ ಮಾಡಿಕೊಳ್ಳುತ್ತಾರೆ. ಅವರು ಈ ಬಗ್ಗೆ ನಿಮ್ಮೊಡನೆ ವಾದ ಮಾಡುತ್ತ ಅವರು ಹುಚ್ಚರಲ್ಲ ನೀವು ಹುಚ್ಚರು ಎಂದು ಸಾಧಿಸುತ್ತಾರೆ. ಪ್ರತಿಯೊಬ್ಬರೂ ಹುಚ್ಚರು. ನೀವು ಹುಚ್ಚರು ಎನ್ನುವುದು ನಿಮಗೆ ಅರಿವಾದ ಕೂಡಲೇ ನಿಮ್ಮೊಳಗೆ ವಿವೇಕ ಹುಟ್ಟಿಕೊಳ್ಳುವುದು; ಅದು ಈಗಾಗಲೇ ನಿಮ್ಮ ಹತ್ತಿರದಲ್ಲಿದೆ. ನಿಮ್ಮ ಹುಚ್ಚಿನ ಬಗ್ಗೆ ನಿಮ್ಮೊಳಗೆ ಅರಿವು ಮೂಡಿದ ಕ್ಷಣದಲ್ಲಿಯೇ , ನೀವು ನಿಮ್ಮ ಹುಚ್ಚುತನವನ್ನು ಡ್ರಾಪ್ ಮಾಡುತ್ತೀರಿ.
ಖಲೀಲ್ ಜಿಬ್ರಾನ್ ಒಂದು ಕಥೆ ಹೇಳುತ್ತಾನೆ…..
ಒಂದಾನೊಂದು ಕಾಲದಲ್ಲಿ, ದೂರದ ವಿರಾನಿ ಶಹರವನ್ನು ಒಬ್ಬ ಅತ್ಯಂತ ಸಾಮರ್ಥ್ಯಶಾಲಿ ಮತ್ತು ಬುದ್ಧಿವಂತ ದೊರೆ ಆಳುತ್ತಿದ್ದ. ಅವನ ಶಕ್ತಿ ಸಾಮರ್ಥ್ಯಗಳನ್ನು ಕಂಡು ವೈರಿಗಳು ಹೆದರುತ್ತಿದ್ದರು ಮತ್ತು ಅವನ ಬುದ್ಧಿವಂತಿಕೆಗಾಗಿ ಎಲ್ಲರೂ ಅವನನ್ನು ಮನಸೋ ಇಚ್ಛೆ ಹೊಗಳುತ್ತಿದ್ದರು.
ಆ ಊರಿನ ಹೃದಯ ಭಾಗದಲ್ಲಿ ಒಂದು ದೊಡ್ಡ ಬಾವಿಯಿತ್ತು. ಆ ಬಾವಿಯ ನೀರು ಅತ್ಯಂತ ಸ್ವಚ್ಛ, ಸಿಹಿ ಮತ್ತು ತಂಪಾಗಿತ್ತು. ಊರಿನ ಎಲ್ಲ ಜನ, ರಾಜ ಪರಿವಾರವನ್ನೂ ಸೇರಿಸಿ ಕುಡಿಯುವ ನೀರಿಗಾಗಿ ಈ ಬಾವಿಯನ್ನೇ ಆಶ್ರಯಿಸಿದ್ದರು. ಆ ಊರಿನಲ್ಲಿ ಈ ಬಾವಿ ಬಿಟ್ಟರೆ ಇನ್ನೊಂದು ನೀರಿನ ವ್ಯವಸ್ಥೆ ಇರಲಿಲ್ಲ.
ಒಂದು ರಾತ್ರಿ ಎಲ್ಲ ನಿದ್ದೆಯಲ್ಲಿರುವಾಗ ಒಬ್ಬಳು ಮಾಟಗಾತಿ ಊರು ಪ್ರವೇಶಿಸಿ ಆ ಬಾವಿಯಲ್ಲಿ ಏಳು ಹನಿ ಒಂದು ವಿಚಿತ್ರ ದ್ರವ ಸುರಿದು ಘೋಷಿಸಿದಳು.
“ ಇನ್ನು ಮೇಲೆ ಈ ಬಾವಿಯ ನೀರು ಕುಡಿದವರು ಹುಚ್ಚರಾಗುತ್ತಾರೆ “
ಮರುದಿನ ಮುಂಜಾನೆ ರಾಜ ಮತ್ತು ಅವನ ಮಂತ್ರಿಯನ್ನು ಹೊರತುಪಡಿಸಿ ಊರಿನ ಎಲ್ಲ ಜನರು ಆ ಬಾವಿಯ ನೀರು ಕುಡಿದು ಮಾಟಗಾತಿ ಹೇಳಿದಂತೆ ಹುಚ್ಚರಂತೆ ವರ್ತಿಸತೊಡಗಿದರು.
ಆ ದಿನದುದ್ದಕ್ಕೂ ಊರಿನ ಬೇರೆ ಬೇರೆ ಜಾಗಗಳಲ್ಲೆಲ್ಲ ಜನ ತಮ್ಮೊಳಗೆ ಮಾತನಾಡಿಕೊಳ್ಳಲು ಶುರುಮಾಡಿದರು, “ ಊರಿನ ರಾಜ ಮತ್ತು ಮಂತ್ರಿಗೆ ತಲೆ ಸರಿ ಇಲ್ಲ, ಇಂಥ ಹುಚ್ಚರು ನಮ್ಮನ್ನು ಆಳಲು ನಾವು ಅವಕಾಶಮಾಡಿಕೊಡಬಾರದು ಕೂಡಲೇ ಅವರಿಬ್ಬರನ್ನೂ ಪದಚ್ಯುತಗೊಳಿಸಬೇಕು. “ ಈ ಮಾತು ಊರಿನ ತುಂಬ ಹಬ್ಬಿತು.
ಅಂದು ಸಂಜೆ ರಾಜ ಒಂದು ಬಂಗಾರದ ಕೊಡದ ತುಂಬ ಆ ಬಾವಿಯ ನೀರನ್ನು ಅರಮನೆಗೆ ತರಿಸಿಕೊಂಡು ಬಾಯ್ತುಂಬ ಕುಡಿದ ಮತ್ತು ತನ್ನ ಮಂತ್ರಿಗೂ ಕುಡಿಯಲು ಕೊಟ್ಟ. ರಾತ್ರಿಯ ಹೊತ್ತಿಗೆ ಊರಿನಲ್ಲೆಲ್ಲ ಖುಶಿ ತುಂಬಿಕೊಂಡಿತು. ಊರಿನ ಜನ ತಮ್ಮ ರಾಜ ಮತ್ತು ಮಂತ್ರಿ ತಮ್ಮ ಹುಚ್ಚುತನ ಕಳೆದುಕೊಂಡು ಮತ್ತೆ ಮೊದಲಿನಹಾಗೆ ರಾಜ್ಯ ಆಳಲು ಯೋಗ್ಯರಾಗಿರುವ ಸಂಗತಿಯನ್ನು ಸಂಭ್ರಮಿಸಲು ಶುರು ಮಾಡಿದರು.
********************************

