ಸುಮ್ಮನೇ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಖುಶಿಯಾಗಿರಿ. ಇನ್ನೊಬ್ಬರ ಬಗ್ಗೆ ಯೋಚನೆ ಮಾಡಬೇಡಿ. ನೀವು ಖುಶಿಯಾಗಿದ್ದಾಗ ನಿಮ್ಮ ಖುಶಿ ಇನ್ನೊಬ್ಬರಿಗೆ ಸಹಾಯ ಮಾಡುತ್ತದೆ. ನಿಮ್ಮಿಂದ ಸಹಾಯ ಸಾಧ್ಯವಾಗದಿರಬಹುದು ಆದರೆ ನಿಮ್ಮ ಖುಶಿಯಿಂದ ಸಹಾಯ ಸಾಧ್ಯ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿನ್ನೆ ರಾತ್ರಿ
ದೇವರು ತುಂಬಾ ಕುಡಿದಿದ್ದ.
ನಿಶೆಯಲ್ಲಿ ತೊದಲುತ್ತ
ನನ್ನೆದುರು ಬಿಚ್ಚಿಟ್ಟ
ಒಂದು ದೊಡ್ಡ ರಹಸ್ಯವನ್ನ.
ಈ ಜಗತ್ತಿನಲ್ಲಿ
ನನ್ನೆದುರು ನಿಂತು ಕ್ಷಮೆ ಕೇಳಬೇಕಾದಂಥ
ಒಬ್ಬ ಮನುಷ್ಯನೂ ಇಲ್ಲ,
ಇಲ್ಲವೇ ಇಲ್ಲ
ನಿಜ ಅರ್ಥದಲ್ಲಿ ಪಾಪ ಎನ್ನುವುದು.
ದೇವರು ಎಷ್ಟು ಚಿತ್ತಾಗಿದ್ದ ಎಂದರೆ
ನನ್ನೊಳಗೆ ಪೂರ್ಣವಾಗಿ
ತನ್ನನ್ನು ಸುರಿದುಕೊಂಡು ಬಿಟ್ಟ.
ನಾನೀಗ ಖುಷಿಯಿಂದ ಮತ್ತನಾಗಿದ್ದೇನೆ
ಗೆಳೆಯರೆ,
ನನ್ನ ಮಧುರ ದೇಹದಿಂದ
ಹೀರಿಕೊಂಡು ಬಿಡಿ ಬದುಕನ್ನ
ಸಾಧ್ಯವಾದಷ್ಟು.
- ಹಾಫೀಜ್
ನೀವು ಸಹಾಯ ಮಾಡಲಾರಿರಿ – ನೀವು ನಾಶ ಮಾಡಬಹುದು – ಆದರೆ ನಿಮ್ಮ ಖುಶಿ ಸಹಾಯ ಮಾಡುತ್ತದೆ. ಖುಶಿಗೆ ತನ್ನದೇ ಆದ ಕೆಲಸದ ರೀತಿ ಇದೆ, ನೇರವಲ್ಲದ ಆದರೆ ಸೂಕ್ಷ್ಮವಾದ, ಸ್ತ್ರೀತ್ವದ ರೀತಿ. ನೀವು ಕೆಲಸ ಮಾಡಲು ಶುರುಮಾಡಿದಾಗ ನಿಮ್ಮ ಎನರ್ಜಿ ಆಕ್ರಮಣಕಾರಿಯಾಗಿರುತ್ತದೆ ಮತ್ತು ಆಗ ನೀವು ಸಹಾಯ ಮಾಡಲು ಮುಂದಾದಾಗ ಜನ ಅದನ್ನು ರೆಸಿಸ್ಟ್ ಮಾಡುತ್ತಾರೆ. ಜನ ತಮಗೆ ಗೊತ್ತಿಲ್ಲದಂತೆಯೇ ನಿಮ್ಮ ಪ್ರಯತ್ನವನ್ನ ರೆಸಿಸ್ಟ್ ಮಾಡುತ್ತಾರೆ, ಏಕೆಂದರೆ ಅವರಿಗೆ ನೀವು ಅವರಿಗಿಂತ ಮೇಲೆ ಇರುವಿರಿ ಎಂದನಿಸುತ್ತದೆ ಮತ್ತು, ಯಾರಿಗೂ ಇನ್ನೊಬ್ಬರು ತಮ್ಮನ್ನು ಮುಕ್ತರಾಗಿಸುವುದು ಇಷ್ಟವಾಗುವುದಿಲ್ಲ. ಯಾರಿಗೂ ತಾವು ಇನ್ನೊಬ್ಬರ ಸಹಾಯದಿಂದ ಖುಶಿಯಾಗಿರುವುದು ಒಪ್ಪಿಗೆಯಾಗುವುದಿಲ್ಲ ಏಕೆಂದರೆ ಅವರು ಅದನ್ನ ಅವಲಂಬನೆ ಎಂದುಕೊಳ್ಳುತ್ತಾರೆ. ಹಾಗಾಗಿ ಅವರಿಂದ ತೀವ್ರ ಪ್ರತಿರೋಧ ಎದುರಾಗುತ್ತದೆ.
ಸುಮ್ಮನೇ ನೀವು ಇದರ ಬಗ್ಗೆ ಚಿಂತೆಯನ್ನೇ ಮಾಡಬೇಡಿ. ಚಿಂತೆ ಮಾಡುವುದು ಇನ್ನೊಬರ ಕೆಲಸ. ಇನ್ನೊಬ್ಬರಿಗೆ ಸಮಸ್ಯೆಯಾಗುವಂಥದ್ದನ್ನು ನೀವು ಏನೂ ಮಾಡಿಲ್ಲ. ಅವರು ಅವನ್ನ ತಮ್ಮ ಹಲವಾರು ಕರ್ಮಗಳಿಂದ ಪಡೆದುಕೊಂಡಿದ್ದಾರೆ, ಆದ್ದರಿಂದ ಅವರೇ ಅವನ್ನು ಡ್ರಾಪ್ ಮಾಡಬೇಕು. ಸುಮ್ಮನೇ ಖುಶಿಯಾಗಿರಿ ಮತ್ತು ನಿಮ್ಮ ಖುಶಿ ಇತರರಿಗೆ ಧೈರ್ಯ ನೀಡುತ್ತದೆ. ನಿಮ್ಮ ಖುಶಿ ಅವರಿಗೆ ಉತ್ತೇಜನವನ್ನೂ, ಪ್ರಚೋದನೆಯನ್ನೂ, ಸವಾಲುಗಳನ್ನು ನೀಡುತ್ತದೆ. ನಿಮ್ಮ ಖುಶಿ ಅವರಿಗೆ, ಅವರು ಒಪ್ಪಿದಾಗ ಸನ್ನಿವೇಶ ಹೇಗೆ ಇರಬಹುದು ಎನ್ನುವ ಐಡಿಯಾ ಕೊಡುತ್ತದೆ ಅಷ್ಟೇ…..
ತನ್ನ ಗೆಳತಿಯರೆಲ್ಲ ಬಿಟ್ಚು ಹೋದರೆಂದು ನಸ್ರುದ್ದೀನ್ ನ ಹೆಂಡತಿ ಬೇಸರದಲ್ಲಿದ್ದಳು.
“ ನನ್ನ ಮಾತು ಕೇಳು ಒಂದು ತಿಂಗಳು ಏಕಾಂತದಲ್ಲಿರು, ಸ್ವತಃ ನಿನ್ನ ಜೊತೆ ಕಾಲ ಕಳೆ ಆಗ ನಿನ್ನ ಬೇಸರ ಕಡಿಮೆಯಾಗಬಹುದು “
ನಸ್ರುದ್ದೀನ್ ಹೆಂಡತಿಗೆ ಸಲಹೆ ನೀಡಿದ.
“ ಏನು ! ಒಂದು ತಿಂಗಳು ನಾನು ಒಬ್ಬಳೇ ಇರಬೇಕಾ ?
ಸಾಧ್ಯವಿಲ್ಲ ನನಗೆ ಬೋರ್ ಆಗತ್ತೆ “
ನಸ್ರುದ್ದೀನ್ ನ ಹೆಂಡತಿ ಏಕಾಂತವನ್ನು ನಿರಾಕರಿಸಿದಳು.
“ ನೋಡು ನಿನ್ನ ಸಹವಾಸವೇ ನಿನಗೆ ಬೋರ್ ಅನಿಸುವಾಗ, ನಿನ್ನ ಗೆಳತಿಯರಿಗೆ ಹೇಗೆ ನೀನು ಇಂಟರೆಸ್ಟಿಂಗ್ ಆಗಿರುವುದು ಸಾಧ್ಯ? “
ನಸ್ರುದ್ದೀನ್ ಹೆಂಡತಿಗೆ ಅವಳ ಸಮಸ್ಯೆಯ ಕಾರಣ ವಿವರಿಸಿದ.

