ಅಂಟಿಕೊಳ್ಳುವಿಕೆ ( Clinging ): ಓಶೋ 365 #Day 330

ಮೈಂಡ್ ಗೆ ಯಾವತ್ತೂ ಅಂಟಿಕೊಳ್ಳುವಿಕೆಯಲ್ಲಿ ಆಸಕ್ತಿ – ಮತ್ತು ಈ ಅಂಟಿಕೊಳ್ಳುವಿಕೆಯನ್ನು ಡ್ರಾಪ್ ಮಾಡುವುದು ಒಳ್ಳೆಯದು. ಪ್ರತಿ ದಿನವೂ ಹೊಸತು, ಪ್ರತಿ ಕ್ಷಣವೂ ಹೊಸತು. ಮತ್ತು ಪ್ರತಿ ಕ್ಷಣದ ನಂತರ ನಾವು ಹೊಸ ಜಗತ್ತಿನಲ್ಲಿ ದಾಖಲಾಗುತ್ತೇವೆ. ನಾವು ಇದಕ್ಕೆ ಸಿದ್ಧವಾಗಿರಬೇಕು ಬೇರೆ ಯಾವುದೂ ನಮ್ಮನ್ನು ತಡೆ ಹಿಡಿಯದಂತೆ ~ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ತಾವೋ ಶಾಶ್ವತ, ಅನಂತ.

ಯಾಕೆ ಶಾಶ್ವತ ?
ಅದು ಹುಟ್ಟೇ ಇಲ್ಲ ಎಂದಮೇಲೆ
ಸಾಯುವ ಮಾತೆಲ್ಲಿಂದ ಬಂತು.

ಯಾಕೆ ಅನಂತ ?
ಸ್ವಂತದ್ದು ಏನೂ ಇಲ್ಲ ಎಂದಮೇಲೆ
ಎಲ್ಲಕ್ಕೂ ಒದಗಬಲ್ಲದು ಎಂದೇ ಅರ್ಥ.

ಸಂತ ಹಿಂದಿದ್ದಾನೆ
ಹಾಗೆಂದೇ ತಾವೋ ಮುಂದಿದೆ.

ಯಾವುದಕ್ಕೂ ಅಂಟಿಕೊಂಡಿಲ್ಲ ಎಂದೇ
ತಾವೋ ಎಲ್ಲದರಲ್ಲೂ ಒಂದಾಗಿದೆ.

ತನ್ನಿಂದ ತನ್ನನ್ನು ಕಳೆದುಕೊಂಡಿದ್ದರಿಂದಲೇ
ಪರಿಪೂರ್ಣವಾಗಿ ಮೈದುಂಬಿಕೊಂಡಿದೆ ತಾವೋ.

~ ಲಾವೋತ್ಸೇ

ಮೂರು ದಿನಕ್ಕಿಂತ ಹೆಚ್ಚು ಒಂದು ಮನೆಯಲ್ಲಿರಬೇಡಿ ಎಂದು ಬುದ್ಧ ತನ್ನ ಶಿಷ್ಯರಿಗೆ ಹೇಳುತ್ತಿದ್ದ, ಏಕೆಂದರೆ ನಾಲ್ಕನೇ ದಿನದಷ್ಟೊತ್ತಿಗೆ ಆ ಮನೆ ನಮ್ಮದೆನಿಸತೊಡಗುತ್ತದೆ. ಹೀಗೆ ಅನಿಸುವುದಕ್ಕಿಂತ ಮುಂಚೆ ನಾವು ಅಲ್ಲಿಂದ ಜಾಗ ಖಾಲೀ ಮಾಡಬೇಕು.

ಮೈಂಡ್ ಗೆ ಯಾವತ್ತೂ ಅಂಟಿಕೊಳ್ಳುವಿಕೆಯಲ್ಲಿ ಆಸಕ್ತಿ – ಮತ್ತು ಈ ಅಂಟಿಕೊಳ್ಳುವಿಕೆಯನ್ನು ಡ್ರಾಪ್ ಮಾಡುವುದು ಒಳ್ಳೆಯದು. ಪ್ರತಿ ದಿನವೂ ಹೊಸತು, ಪ್ರತಿ ಕ್ಷಣವೂ ಹೊಸತು. ಮತ್ತು ಪ್ರತಿ ಕ್ಷಣದ ನಂತರ ನಾವು ಹೊಸ ಜಗತ್ತಿನಲ್ಲಿ ದಾಖಲಾಗುತ್ತೇವೆ. ನಾವು ಇದಕ್ಕೆ ಸಿದ್ಧವಾಗಿರಬೇಕು ಬೇರೆ ಯಾವುದೂ ನಮ್ಮನ್ನು ತಡೆ ಹಿಡಿಯದಂತೆ. ಹಿಂದಿನದೆಲ್ಲ ಸುಮ್ಮನೇ ಮಾಯವಾಗಬೇಕು; ನೀವು ನಿರಂತರವಾಗಿ ಹಿಂದಿನದಕ್ಕೆ ಸಾಯುತ್ತ ಹೋಗಬೇಕು. ಆದ್ದರಿಂದ ಸಮಯ ವ್ಯರ್ಥ ಮಾಡಬೇಡಿ. ಆಗಿ ಹೋಗಿದ್ದಕ್ಕೆಲ್ಲ ವಿದಾಯ ಹೇಳಿ; ನಿಮ್ಮ ಪಾಲಿಗೆ ಅದು ಸತ್ತಂತೆ.

ಇಲ್ಲವಾದರೆ ಹೊಸತು ನಿಮ್ಮನ್ನು ಸೇರಿಕೊಳ್ಳುತ್ತಿರುವಾಗಲೂ ನೀವು ಹಳೆಯದಕ್ಕೆ ಅಂಟಿಕೊಂಡೇ ಇರುತ್ತೀರಿ. ಹೀಗೆಯೇ ಮೈಂಡ್ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿರುತ್ತದೆ. ಯಾವತ್ತೂ ವರ್ತಮಾನಕ್ಕೆ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳಿ. ಈ ಕ್ಷಣಕ್ಕೆ ಯಾವತ್ತೂ ನಿಮ್ಮನ್ನು ನೀವು ಒಪ್ಪಿಸಿಕೊಳ್ಳಿ- ಇದರ ಹೊರತಾಗಿ ಬೇರೆ ಯಾವ ಬದ್ಧತೆಯೂ ಇಲ್ಲ.

ಒಂದು ಬದ್ಧತೆ ಸಾಕು : ಈ ಕ್ಷಣಕ್ಕೆ ನಿಮ್ಮ ಬದ್ಧತೆ, to here now.

ಸೂಫೀ ಜುನೈದ್ ತನ್ನ ಶಿಷ್ಯರೊಂದಿಗೆ ರಸ್ತೆಯ ಮೂಲಕ ಪ್ರಯಾಣ ಮಾಡುತ್ತಿದ್ದ. ರಸ್ತೆಯಲ್ಲಿ ಅವನಿಗೆ ಒಬ್ಬ ಮನುಷ್ಯ ಆಕಳೊಂದನ್ನು ಹಗ್ಗದಿಂದ ಎಳೆದುಕೊಂಡು ಬರುತ್ತಿರುವುದು ಕಾಣಿಸಿತು. ಸೂಫೀ ತನ್ನ ಶಿಷ್ಯರಿಗೆ ಹೇಳಿದ, “ ಆ ಮನುಷ್ಯನನ್ನು  ಹಿಡಿದು ನಿಲ್ಲಿಸಿ, ನಿಮಗೆಲ್ಲ ಒಂದು ಪ್ರಶ್ನೆ ಕೇಳಬೇಕು ನಾನು”

ಶಿಷ್ಯರು ಆಕಳನ್ನು ಎಳೆದುಕೊಂಡು ಹೋಗುತ್ತಿದ್ದ ಮನುಷ್ಯನನ್ನು ತಡೆದು ನಿಲ್ಲಿಸಿದರು.

ಜುನೈದ್ ತನ್ನ ಶಿಷ್ಯರಿಗೆ ಪ್ರಶ್ನೆ ಮಾಡಿದ. “ ಹೇಳಿ , ಇಲ್ಲಿ ಯಾರು ಯಾರನ್ನು ಕಟ್ಟಿ ಹಾಕಿದ್ದಾರೆ? ಮನುಷ್ಯ ಆಕಳನ್ನು ಹಗ್ಗದಿಂದ ಕಟ್ಟಿದ್ದಾನೋ ಅಥವಾ ಆಕಳು ಮನುಷ್ಯನನ್ನು ಹಗ್ಗದಿಂದ ಕಟ್ಟಿ ಹಾಕಿದೆಯೋ? “

“ ಇದೆಂಥ ಪ್ರಶ್ನೆ ? ಮನುಷ್ಯ ತಾನೇ ಆಕಳನ್ನು ಕಟ್ಟಿ ಹಾಕಿರುವುದು” ಶಿಷ್ಯನೊಬ್ಬ ಉತ್ತರಿಸಿದ.

“ ಓಹ್ ಹೌದಾ ! ಈಗ ನೋಡಿ “ ಎನ್ನುತ್ತಾ ಜುನೈದ್ ಚಾಕುವಿನಿಂದ ಆಕಳನ್ನು ಕಟ್ಟಿ ಹಾಕಿದ್ದ ಹಗ್ಗ ಕತ್ತರಿಸಿಬಿಟ್ಟ.  ಹಗ್ಗ ಕತ್ತರಿಸಿದೊಡನೆ ಆಕಳು ಅಲ್ಲಿಂದ ಓಡತೊಡಗಿತು. ಆಕಳ ಮಾಲಿಕನಿಗೆ ಸಿಟ್ಟು ಬಂತು, ಅವನೂ ಆಕಳ ಹಿಂದೆ ಓಡತೊಡಗಿದ.

“ ಈಗ ಹೇಳಿ ? ಆಕಳಿಗೆ ಆ ಮನುಷ್ಯನ ಬಗ್ಗೆ ಆಸಕ್ತಿ ಇಲ್ಲ, ಬದಲಾಗಿ ಅದು ಇವನಿಂದ ತಪ್ಪಿಸಿಕೊಳ್ಳಲು ಬಯಸುತ್ತಿದೆ. ಆದರೆ ಆ ಮನುಷ್ಯ ತನ್ನ ಲಾಭಕ್ಕಾಗಿ ಆಕಳನ್ನು ಬಯಸುತ್ತಿದ್ದಾನೆ.  ಹೀಗೆಯೇ ನಮ್ಮ ಮತ್ತು ನಮ್ಮ ಮನಸ್ಸಿನೊಡನೆಯ ಸಂಬಂಧ. ನಮ್ಮ  ಮನಸ್ಸಿನಲ್ಲಿ ಬರುತ್ತಿರುವ ನೂರಾರು ವಿಚಾರಗಳಿಗೆ ನಮ್ಮ ಬಗ್ಗೆ ಆಸಕ್ತಿ ಇಲ್ಲ. ನಾವೇ ಆ ವಿಚಾರಗಳ ಬಗ್ಗೆ  ತಲೆಕೆಡಿಸಿಕೊಂಡಿದ್ದೇವೆ. ಆ ವಿಚಾರಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಕ್ಷಣದಲ್ಲಿಯೇ ಅವು ಆ ಆಕಳು ಓಡಿ ಹೋದಂತೆ ಓಡಿ ಹೋಗುತ್ತವೆ “

*******************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.