ವಚನ ವೈವಿಧ್ಯ#4 :  ದೇವರ ಹಂಗೇಕೆ-ಲದ್ದೆಯ ಸೋಮಣ್ಣ

ದೇವರ ಹಂಗು ಯಾಕೆ? ಕಾಯಿಲೆ ಆದಾಗ ನರಳಬೇಕು, ಬೇರೆ ವಿಧಿಯಿಲ್ಲ. ನೋವಾದರೆಅಯ್ಯೋ ಎಂದು ಚೀರಬೇಕು, ಬೇರೆ ವಿಧಿಯಿಲ್ಲ. ಜೀವ ಹೋದಾಗ ಸಾಯಬೇಕು, ಬೇರೆ ವಿಧಿಯಿಲ್ಲ… । ಓ.ಎಲ್.ನಾಗಭೂಷಣ ಸ್ವಾಮಿ

ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ
ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು
ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ
ಇದಕ್ಕಾ ದೇವರ ಹಂಗೇಕೆ
ಭಾಪು ಲದ್ದೆಯ ಸೋಮಾ (ಸಂ. ೭, ವ.೨೦)

[ಒಕ್ಕು-(ನಾಮಪದ)ಒಳಿತು,(ಕ್ರಿ. ಕಸಕಡ್ಡಿ ಬೇರೆಮಾಡು);  ಮಿಕ್ಕುದ-ಉಳಿದದ್ದನ್ನು; ಲದ್ದೆ-(ಹುಲ್ಲಿನ) ಹೊರೆ]

ನಮ್ಮ ಪಾಲಿಗೆ ಬಂದ ಕಾಯಕ ಯಾವುದಾದರೂ ಸರಿ. ನಾವೇ ಮಾಡಬೇಕಾದ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಮ್ಮ ಕಾಯಕದಿಂದ ಬಂದ ಫಲವನ್ನು ನಮಗಿಂತ ಹಿರಿಯರಾದವರಿಗೆ (ಗುರು), ಲೋಕಕ್ಕೆ (ಲಿಂಗಕ್ಕೆ), ಪ್ರಜ್ಞಾವಂತರಿಗೆ  (ಜಂಗಮರಿಗೆ) ಅರ್ಪಿಸಿ, ಉಳಿದದ್ದನ್ನು ನಮ್ಮದೆಂದು ಪಡೆದುಕೊಳ್ಳಬೇಕು. ಮಾಡಬೇಕಾದದ್ದು ಇಷ್ಟೇ. ಇದರಾಚೆಗೆ ರೋಗ ಬಂದರೆ ನರಳಬೇಕು, ನೋವಾದರೆ ಒರಲಬೇಕು, ಜೀವ ಹೋದರೆ ಸಾಯಬೇಕು. ಬದುಕು ಇಷ್ಟೇ. ಇದರಲ್ಲಿ ದೇವರ ಹಂಗು ಯಾಕೆ ಬೇಕು?

ಒಕ್ಕು ಎಂಬ ಮಾತಿಗೆ ಪ್ರಸಾದ ಮತ್ತು ಶುಭದ ಹಾರೈಕೆ ಎಂಬ ಎರಡು ಅರ್ಥಗಳಿವೆ. ನಮ್ಮ ದುಡಿಮೆಯಿಂದ ದಕ್ಕಿದ್ದೇ ಪ್ರಸಾದ. ನಮ್ಮ ದುಡಿಮೆಯಿಂದ ಹಾರೈಸಬೇಕಾದದ್ದು ಒಳಿತನ್ನೇ. ಈ ದುಡಿಮೆಯ ಗುರಿಯಾದರೋ ಸ್ವಾರ್ಥವಲ್ಲ. ಬದುಕಿಗೆ ದಾರಿ ತೋರುವ ಗುರು, ವಿಶ್ವದ ಚೈತನ್ಯ, ಪ್ರಜ್ಞಾವಂತ ಜೀವಿಗಳು ಇವರೆಲ್ಲರಿಗೆ ನಮ್ಮ ದುಡಿಮೆಯ ಫಲವನ್ನು ಅರ್ಪಿಸಿಉಳಿದದ್ದನ್ನು ನಮ್ಮದು ಎಂದುಕೊಳ್ಳಬೇಕು. ಬದುಕು ಎಂದರೆ ಪಡೆಯುವುದಲ್ಲ, ಕೊಡುವುದು. ಬದುಕು ಅಂದರೆ ನಿಷ್ಠೆಯ ದುಡಿಮೆ, ನಾನತ್ವವನ್ನು ಬಿಡುವುದು, ಅಷ್ಟೇ. ಇದರಾಚೆಗೆ ಏನೂ ಇಲ್ಲ. ದೇವರ ಹಂಗು ಯಾಕೆ? ಕಾಯಿಲೆ ಆದಾಗ ನರಳಬೇಕು, ಬೇರೆ ವಿಧಿಯಿಲ್ಲ. ನೋವಾದರೆಅಯ್ಯೋ ಎಂದು ಚೀರಬೇಕು, ಬೇರೆ ವಿಧಿಯಿಲ್ಲ. ಜೀವ ಹೋದಾಗ ಸಾಯಬೇಕು, ಬೇರೆ ವಿಧಿಯಿಲ್ಲ.

ಲದ್ದೆಯ ಸೋಮಣ್ಣ ಎಂಬ ಹೆಸರಿನಲ್ಲಿ ಇರುವ ಲದ್ದೆ ಎಂದರೆ ಹೊರೆ, ಹೊರಬಹುದಾದಷ್ಟು ದೊಡ್ಡ ಕಟ್ಟು ಎಂಬ ಅರ್ಥಗಳಿವೆ. ಲದ್ದೆ ಎಂಬುದು ಬೀದರ್‌ ಜಿಲ್ಲೆಯ ಒಂದು ಹಳ್ಳಿ ಎಂಬ ವಿವರವೂ ಇದೆ. ಬನವಾಸಿಯಲ್ಲಿ ಕಲ್ಲಿನ ಬರಹದಲ್ಲಿ ವಚನವೂ ಸೋಮಣ್ಣನವರ ಚಿತ್ರವೂ ಇದೆ ಎಂದು ಹೇಳಲಾಗಿದೆ. ಈ ವಚನಕಾರರ ವಚನ ಸಿಕ್ಕಿರುವುದು ಇದೊಂದೇ.


ಲದ್ದೆಯ ಸೋಮಣ್ಣ

ಲದ್ದೆ ಎಂಬ ಮಾತಿಗೆ (ಹುಲ್ಲಿನ) ಹೊರೆ ಎಂಬ ಅರ್ಥವಿದೆ. ಬೀದರ್‌ ಜಿಲ್ಲೆಯ ವಚನಕಾರರೆಂಬ ಪ್ರತೀತಿ ಇದೆ. ಇವರ ೧ ವಚನ ಮಾತ್ರ ದೊರೆತಿದೆ. ಲದ್ದೆಯ ಸೋಮ ಎಂಬುದು ವಚನಾಂಕಿತ. ಬನವಾಸಿಯಲ್ಲಿ ಸೋಮಣ್ಣನವರದೆಂದು ಹೇಳಲಾಗುವ ವಿಗ್ರಹವಿದೆ, ಮತ್ತು ಅವರ ವಚನವು ಕಲ್ಬರಹದಲ್ಲಿದೆ ಎನ್ನುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.