ಪ್ರಾರ್ಥನೆ ಕಲಿಕೆಯ ಕಾರಣವಾಗಿ ಇರಬಾರದು, ಸಹಜವಾಗಿರಬೇಕು, ಸ್ವಾಭಾವಿಕವಾಗಿರಬೇಕು ~ ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ
ನಾನೊಬ್ಬ
ಧಾರ್ಮಿಕ ಮನುಷ್ಯನಾಗಿದ್ದೆ,
ನೀನು ನನಗೆ
ಹಾಡಿನ ಚಟ ಅಂಟಿಸಿದೆ,
ಭಜನೆ ಮಾಡುತ್ತಿದ್ದವನ ಒದ್ದು
ಶೆರೆಯಂಗಡಿಗೆ ಅಟ್ಟಿದೆ.
ಗಂಭೀರವಾಗಿ
ಪ್ರಾರ್ಥನೆಯ ಚಾಪೆ ಹಾಸಿಕೊಂಡು
ಹಿರಿಯಜ್ಜನಂತೆ
ತಲೆ ತಗ್ಗಿಸಿ ಕುಳಿತವನ
ರಸ್ತೆಯ ಮಕ್ಕಳು
ನೋಡಿ ನಗುವಂತ ತಮಾಷೆಯಾಗಿಸಿದೆ.
ಆ ಮಕ್ಕಳ ಕಣ್ಣಿನ ನಗೆಯಲ್ಲಿ
ಆನಂದವಾಗಿ ಹರಿದು
ನನ್ನ ಪೂರ್ತಿ
ಒದ್ದೆಯಾಗಿಸಿದೆ.
- ರೂಮಿ
ಬಹಳಷ್ಟು ಜನ ಮಂದಿರ, ಮಸಿದಿ, ಚರ್ಚುಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ ಆದರೆ ಅವರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ; ಏನೂ ಆಗಲಾರದು ಕೂಡ. ಅವರು ತಮ್ಮ ಬದುಕಿನುದ್ದಕ್ಕೂ ಪ್ರಾರ್ಥನೆ ಮಾಡಿದರೂ ಏನೂ ಆಗುವುದಿಲ್ಲ ಏಕೆಂದರೆ ಅವರ ಪ್ರಾರ್ಥನೆ ಸಹಜವಲ್ಲ. ಅವರು ಪ್ರಾರ್ಥನೆಯನ್ನು ಮ್ಯಾನೇಜ್ ಮಾಡುತ್ತಿದ್ದಾರೆ, ಬುದ್ಧಿಪೂರ್ವಕವಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಅವರು ಬಹಳ ಬುದ್ಧಿವಂತರು ಆದರೆ ಪ್ರಾರ್ಥನೆ ಫಲಿಸಲು ಅವರು ಬುದ್ಧಿ ಒಂದು ಅಡ್ಡಗಾಲು.
ಪ್ರಾರ್ಥನೆ ತುಂಬ ಭೋಳೆ – ದೇವರೊಂದಿಗಿನ ಈ ಸಂಭಾಷಣೆ ನಿಮಗೆ ಮುಜುಗರ ಉಂಟು ಮಾಡಬಹುದು. ಹೌದು ಇದು ಬಹಳ ಭೋಳೆ ಸಂಗತಿ, ಆದರೆ ಇದು ವರ್ಕ್ ಆಗುತ್ತದೆ. ಕೆಲವೊಮ್ಮೆ ಭೋಳೆತನವೇ ವಿವೇಕ ಮತ್ತು ವಿವೇಕ, ಭೋಳೆತನ. ಆದ್ದರಿಂದ ಯಾವ ಕ್ಷಣದಲ್ಲಾದರೂ ನಿಮಗೆ ಪ್ರಾರ್ಥನೆ ಮಾಡಬೇಕು ಅನಿಸಿದರೆ ಅದನ್ನು ಬಳಸಿಕೊಳ್ಳಿ. ನೀವು ಹೆಚ್ಚು ಹೆಚ್ಚು ಇದನ್ನು ಬಳಸಿಕೊಂಡಂತೆಲ್ಲ ಅದು ಹೆಚ್ಚು ಹೆಚ್ಚು ನಿಮಗೆ ಒದಗಿ ಬರುವುದು. ಮತ್ತು ಧ್ಯಾನದ ಮೂಲಕ ನಿಮ್ಮ ಪ್ರಾರ್ಥನೆ ಇನ್ನಷ್ಟು ಆಳವಾಗುವುದು.
ನೀವು ನಿಮ್ಮೊಳಗೆ ಪ್ರಾರ್ಥನೆ ಮಾಡಿ, ಆಗ ನಿಮ್ಮ ದೇಹದಲ್ಲಿ ಏನಾದರೂ ಸಂಭವಿಸಿದರೆ ಅದಕ್ಕೆ ಅವಕಾಶ ಮಾಡಿಕೊಡಿ. ಅದು ಏನೂ ಆಗಬಹುದು, ದೇಹದಲ್ಲಿ ಏನಾದರೂ ಚಲನೆಗಳು ಉಂಟಾದರೆ, ಯಾವುದೇ ಎನರ್ಜಿ ಹರಿದಾಡತೊಡಗಿದರೆ ಅಥವಾ ನಿಮಗೆ ಬಿರುಗಾಳಿಗೆ ಸಿಕ್ಕಿಹಾಕಿಕೊಂಡ ತರಗಲೆಯ ಅನುಭವವಾಗುತ್ತಿದ್ದರೆ , ಸುಮ್ಮನೇ ಪ್ರಾರ್ಥನೆ ಮಾಡಿ ಮತ್ತು ಇವುಗಳಿಗೆ ಅವಕಾಶ ಮಾಡಿಕೊಡಿ.
ಗಡಿಬಿಡಿಯಲ್ಲಿ ಪ್ರಾರ್ಥನಾ ಮಂದಿರಕ್ಕೆ ಬಂದ ನಸ್ರುದ್ದೀನ್ ಅವಸರದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹೊರಡಲು ಸಿದ್ಧನಾದ. ಇದನ್ನು ಗಮನಿಸಿದ ಪುರೋಹಿತ ಸಿಟ್ಟಿನಿಂದ ನಸ್ರುದ್ದೀನ್ ನ ಕೂಗಿದ,
“ ನಸ್ರುದ್ದೀನ್, ಪದ್ಧತಿಯ ಪ್ರಕಾರ ಪ್ರಾರ್ಥನೆ ಮಾಡು “
ಪುರೋಹಿತನ ಮಾತಿಗೆ ಒಪ್ಪಿ ನಸ್ರುದ್ದೀನ್, ಮತ್ತೆ ಪದ್ಧತಿಯ ಪ್ರಕಾರ ಪ್ರಾರ್ಥನೆ ಸಲ್ಲಿಸಿದ.
“ ಎರಡನೇಯ ಬಾರಿ ನೀನು ಮಾಡಿದ ಪ್ರಾರ್ಥನೆಯಿಂದ ದೇವರಿಗೆ ಖುಶಿ ಆಗಿರತ್ತೆ ಅಂತ ನಿನಗನಿಸಲ್ವಾ ನಸ್ರುದ್ದೀನ್ “
ಪುರೋಹಿತ, ನಸ್ರುದ್ದೀನ್ ನನ್ನು ಪ್ರಶ್ನೆ ಮಾಡಿದ.
“ ಹಾಗೇನಿಲ್ಲ, ಮೊದಲು ನಾನು ಅವಸರದಲ್ಲಿ ಪ್ರಾರ್ಥನೆ ಮಾಡಿದ್ದರೂ ಅದು ದೇವರಿಗಾಗಿ ಮಾಡಿದ ಪ್ರಾರ್ಥನೆಯಾಗಿತ್ತು. ಎರಡನೇಯ ಬಾರಿ ಮಾಡಿದ ಪ್ರಾರ್ಥನೆ ಪದ್ಧತಿಯ ಪ್ರಕಾರವಾಗಿದ್ದರೂ ಅದು ನಿಮ್ಮ ಕಾಟಕ್ಕೆ ಮಾಡಿದ್ದು “
ನಸ್ರುದ್ದೀನ್, ತನ್ನ ನಡೆಯನ್ನ ಸಮರ್ಥಿಸಿಕೊಂಡ.

