ಯಾವ ಉತ್ತರವೂ ಇಲ್ಲ. ಮೈಂಡ್ ಗೆ ಇರುವುದು ಎರಡೇ ದಾರಿಗಳು : ಪ್ರಶ್ನೆಗಳಿಂದ ತುಂಬಿಕೊಂಡಿರುವುದು ಮತ್ತು ಪ್ರಶ್ನೆಗಳಿಂದ ಖಾಲೀಯಾಗಿರುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
“ಹೇಗಿದ್ದೀರಿ ನೀವು”ಎನ್ನುವ ಪ್ರಶ್ನೆಗೆ
ನನ್ನ ಹತ್ತಿರ ಇವೆ
ಸಾವಿರ ಸುಳ್ಳು ಉತ್ತರಗಳು.
“ದೇವರು ಎಂದರೇನು” ಎನ್ನುವ ಪ್ರಶ್ನೆಗೆ ಕೂಡ
ನನ್ನ ಬಳಿ ಇವೆ
ಸಾವಿರ ಸುಳ್ಳು ಉತ್ತರಗಳು.
ಹಾಗೆಲ್ಲ ಮಾತುಗಳಲ್ಲಿ
ಉತ್ತರ ಹೇಳಬಹುದಾದರೆ,
ಸೂರ್ಯ, ಸಾಗರ
ಈ ಪುಟ್ಟ ಬಾಯಿಯ ಮೂಲಕ
ಹಾಯ್ದು ಹೊರಗೆ ಬರಬಹುದಾದರೆ,
ಓಹ್ !
ಯಾರಾದರೂ ನಕ್ಕುಬಿಡಿ !
ಇನ್ನೂ ಜೋರಾಗಿ !
- ಹಾಫಿಜ್
ಯಾವಾಗ ನೀವು ಯಾವ ಉತ್ತರಗಳಿಲ್ಲದೆಯೇ ಬದುಕಬಲ್ಲಿರೋ ಅದು ಪ್ರಬುದ್ಧತೆಯ ಸ್ಥಿತಿ ; ಅದೇ ಪ್ರಬುದ್ಧತೆ. ಮತ್ತು ಉತ್ತರಗಳಿಲ್ಲದೆಯೇ ಬದುಕುವುದು ಮಹಾ ಧೈರ್ಯದ ವಿಷಯ. ಆಗ ನೀವು ಮಗು ಅಲ್ಲ. ಮಗು ಪ್ರಶ್ನೆಗಳನ್ನು ಕೇಳುತ್ತ ಹೋಗುತ್ತದೆ, ಎಲ್ಲಕ್ಕೂ ಉತ್ತರಗಳನ್ನು ಬಯಸುತ್ತದೆ. ತಾನು ಪ್ರಶ್ನೆಗಳನ್ನು ರೂಪಿಸಬಲ್ಲೆನಾದರೆ ಅದಕ್ಕೆ ಉತ್ತರಗಳೂ ಇರಬಹುದೆಂದು ಮಗು ನಂಬುತ್ತದೆ, ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವವರು ಯಾರಾದರೂ ಇರಬಹುದೆಂದು ತಿಳಿದುಕೊಂಡಿರುತ್ತದೆ.
ನಾನು ಇದನ್ನು ಪ್ರಬುದ್ಧತೆ ಎನ್ನುತ್ತೇನೆ. ನಿಮಗೆ ಪ್ರಶ್ನೆಗಳಿವೆಯಾದರೆ ಅವಕ್ಕೆ ಉತ್ತರಗಳೂ ಇರಬಹುದು, ಆ ಉತ್ತರಗಳು ನಿಮಗೆ ಗೊತ್ತಿಲ್ಲದಿರಬಹುದು ಆದರೆ ಯಾರಾದರೂ ಒಂದಿಲ್ಲೊಂದು ದಿನ ಇವಕ್ಕೆ ಉತ್ತರಿಸುತ್ತಾರೆ ಎಂದು ನೀವು ತಿಳಿದುಕೊಂಡಿರುತ್ತೀರಿ. ಆದರೆ ಅದು ಹಾಗಲ್ಲ. ಎಲ್ಲ ಪ್ರಶ್ನೆಗಳು ಮನುಷ್ಯನೇ ರೂಪಿಸಿದಂಥವು, ಸೃಷ್ಟಿಸಿದಂಥವು.
ಅಸ್ತಿತ್ವದ ಬಳಿ ಯಾವ ಉತ್ತರವೂ ಇಲ್ಲ. ಅಸ್ತಿತ್ವ ಇದೆಯಾದರೂ ಅದರ ಬಳಿ ಯಾವ ಉತ್ತರಗಳೂ ಇಲ್ಲ, ಅದು ಸಂಪೂರ್ಣ ಮೌನದಲ್ಲಿದೆ. ನೀವು ಪ್ರಶ್ನೆಗಳನ್ನು ಡ್ರಾಪ್ ಮಾಡುವಿರಾದರೆ ಆಗ ನಿಮ್ಮ ಮತ್ತು ಅಸ್ತಿತ್ವದ ನಡುವೆ ಒಂದು ಸಂವಹನ ಏರ್ಪಡುತ್ತದೆ. ನೀವು ಪ್ರಶ್ನೆಗಳನ್ನು ಡ್ರಾಪ್ ಮಾಡಿದ ಕೂಡಲೇ, ಫಿಲಾಸೊಫಿಯನ್ನೂ ಡ್ರಾಪ್ ಮಾಡುತ್ತೀರಿ, ಧರ್ಮಶಾಸ್ತ್ರಗಳನ್ನೂ ಡ್ರಾಪ್ ಮಾಡುತ್ತೀರಿ, ಲಾಜಿಕ್ ನ ಡ್ರಾಪ್ ಮಾಡುತ್ತೀರಿ ಮತ್ತು ನಿಜವಾಗಿ ಬದುಕಲು ಶುರು ಮಾಡುತ್ತೀರಿ. ಆಗ ನೀವು ಅಸ್ತಿತ್ವವಾದಿಯಾಗುತ್ತೀರಿ. ಯಾವಾಗ ನಿಮ್ಮ ಬಳಿ ಪ್ರಶ್ನೆಗಳಿರುವುದಿಲ್ಲವೋ ಅಂಥ ಸ್ಥಿತಿಯೇ ನಿಮ್ಮ ಉತ್ತರ.
ರೂಮಿಯದೊಂದು ಪದ್ಯ ಇದೆ………
ನಮ್ಮೊಳಗಿನ ದಿವ್ಯ ಶಕ್ತಿಗಳನ್ನು
ಹೇಗೆ ಕಂಡುಕೊಳ್ಳುವುದು?
ಪ್ರತಿಮೆ, ರೂಪಕಗಳ ಮೂಲಕ
ಉತ್ತರ ಹುಡುಕುವ ಪ್ರಯತ್ನ
ವ್ಯರ್ಥ ಎಂಬುದು ಸಿದ್ಧವಾಗಿ ಹೋಗಿದೆ.
ಕಾಮ ಹೇಗಿರತ್ತೆ ಎಂಬ ಮಗುವಿನ ಪ್ರಶ್ನೆಗೆ
ಸಿಹಿಯಾಗಿರತ್ತೆ, ಸಕ್ಕರೆಯ ಬೊಂಬೆಯಂತೆ
ಎಂದು ಉತ್ತರಿಸಿದರೆ ಹೇಗೆ?
ಇಂಥ ನಿಗೂಢಗಳ ಬಗ್ಗೆ ನೀವು ಏನೇ ಹೇಳಿ
ನನಗೆ ಗೊತ್ತು ಎಂಬ ಉತ್ತರ
ಮತ್ತು
ನನಗೆ ಗೊತ್ತಿಲ್ಲ ಎಂಬ ಉತ್ತರ ಮಾತ್ರ
ಸತ್ಯಕ್ಕೆ ಹತ್ತಿರವಾದ ಉತ್ತರಗಳು
ಎರಡೂ ಉತ್ತರಗಳಲ್ಲಿ ಅಂಥ ಸುಳ್ಳೆನಿಲ್ಲ.

