ಯಾವುದರ ಬಗ್ಗೆ ನಿಮಗೆ ನಾಚಿಕೆ ಇದೆಯೋ, ಅದನ್ನು ನೀವು ನಿಮ್ಮ ಅರಿವುರಹಿತ (unconscious) ಸ್ಥಿತಿಯಲ್ಲಿ ಅಡಗಿಸಿಟ್ಟುಕೊಳ್ಳುವಿರಿ. ಅವು ನಿಮ್ಮ ಇರುವಿಕೆಯ ಆಳಕ್ಕೆ ಪ್ರವೇಶ ಮಾಡುತ್ತವೆ, ನಿಮ್ಮ ರಕ್ತ ಪರಿಚಲನೆಯ ಭಾಗವಾಗುತ್ತವೆ, ಹಿಂದೆ ನಿಂತುಕೊಂಡು ನಿಮ್ಮ ಎಲ್ಲ ವರ್ತನೆಗಳನ್ನು ಮ್ಯಾನ್ಯುಪುಲೇಟ್ ಮಾಡುತ್ತವೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು ಪ್ರೀತಿಯೊಡನೆ
ಒಂದಾಗಿಬಿಟ್ಟಿದ್ದೇನೆ.
ಕಾಮ, ಈಗ ನನ್ನನ್ನು ಕಾಡುವುದಿಲ್ಲ
ಎಂದೆಯಲ್ಲಾ,
ಇದು ತುಂಬಾ ಅಪಾಯಕಾರಿ ಹೇಳಿಕೆ.
ನನ್ನ ಪ್ರೇಮವೂ ಹಾಗೇ
ಎಂದು ನಂಬಬೇಡ.
ಮುಂದೊಂದು ದಿನ
ನೀನು ಹಿಂದೆ ಹೇಗೆ ಪ್ರೇಮಿಸುತ್ತಿದ್ದೆ
ಎಂಬ ಚಿತ್ರ ನೋಡಿದೆಯಾದರೆ
ನಿನಗೆ, ನಿನ್ನ ಬಗ್ಗೆಯೇ ಅಸಹ್ಯವಾಗಬಹುದು.
ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೂ
ನಾಚುವುದಿಲ್ಲ ನೀನು ಆಗ.
-ರೂಮಿ
ನೀವು ಏನನ್ನಾದರೂ ನಿಮ್ಮೊಳಗೆ ಹತ್ತಿಕ್ಕ ಬಯಸುವಿರಾದರೆ ಸುಂದರ ಸಂಗತಿಗಳನ್ನು ನಿಮ್ಮೊಳಗೆ ಹತ್ತಿಕ್ಕಿಕೊಳ್ಳಿ. ನೀವು ನೀಚುವ ಸಂಗತಿಗಳನ್ನು ನಿಮ್ಮೊಳಗೆ ಯಾವತ್ತೂ ಹತ್ತಿಕ್ಕಿಕೊಳ್ಳಬೇಡಿ, ಏಕೆಂದರೆ ಯಾವುದನ್ನು ನೀವು ಹತ್ತಿಕ್ಕಿಕೊಳ್ಳುತ್ತೀರೋ ಅದು ನಿಮ್ಮ ಆಳವನ್ನು ಪ್ರವೇಶಿಸುತ್ತದೆ ಮತ್ತು ಯಾವುದನ್ನು ನೀವು ಅಭಿವ್ಯಕ್ತಿಸುತ್ತೀರೋ ಅದು ಆಕಾಶದಲ್ಲಿ ಆವಿಯಾಗಿ ಹೋಗುತ್ತದೆ. ಆದ್ದರಿಂದ ಯಾವುದರ ಬಗ್ಗೆಯೆಲ್ಲ ನಿಮಗೆ ನಾಚಿಕೆಯಿದೆಯೋ ಅವುಗಳನ್ನೆಲ್ಲ ಅಭಿವ್ಯಕ್ತಿಸಿ ಅವುಗಳಿಂದ ಮುಕ್ತಿ ಪಡೆಯಿರಿ. ಯಾವುದೆಲ್ಲ ಸುಂದರವೋ ಅವನ್ನೆಲ್ಲ ನೀವು ನಿಮ್ಮೊಳಗೆ ನಿಧಿಯಂತೆ ಕಾಪಾಡಿಕೊಳ್ಳಿ, ಅದು ನಿಮ್ಮನ್ನು ಬದುಕಿನುದ್ದಕ್ಕೂ ಪ್ರಭಾವಿಸುತ್ತಿರುತ್ತದೆ.
ಆದರೆ ನಾವು ಇದಕ್ಕೆ ಥೇಟ್ ವಿರುದ್ಧವಾದುದ್ದನ್ನು ಮಾಡುತ್ತೇವೆ. ಯಾವುದು ಸುಂದರವೋ ಅದನ್ನು ನಾವು ಅಭಿವ್ಯಕ್ತಿಸುತ್ತೇವೆ, ಅಷ್ಟೇ ಅಲ್ಲ ಅದು ಇರುವುದಕ್ಕಿಂತ ಹೆಚ್ಚು ಅಭಿವ್ಯಕ್ತಿಸುತ್ತೇವೆ. ನೀವು ಹೇಳುತ್ತ ಹೋಗುತ್ತೀರಿ…. I love you… I love you… I love you… ಆದರೆ ನೀವು ಈ ಬಗ್ಗೆ ಅಷ್ಟು ಸಿರೀಯಸ್ ಆಗಿ ಕೂಡ ಇರುವುದಿಲ್ಲ. ಆದರೆ ನೀವು ಕ್ರೋಧವನ್ನ, ದ್ವೇಷವನ್ನ, ಅಸೂಯೆಯನ್ನ, ಪೋಸೆಸ್ಸಿವ್ ನೆಸ್ ನ ನಿಮ್ಮೊಳಗೆ ಸಪ್ರೆಸ್ ಮಾಡಿಕೊಳ್ಳುತ್ತೀರಿ ಮತ್ತು ಯಾವುದನ್ನೆಲ್ಲ ನೀವು ಹತ್ತಿಕ್ಕಿದ್ದೀರೋ ನೀವೂ ಅದೇ ಆಗುತ್ತ ಹೋಗುತ್ತೀರಿ. ಆಗ ನಿಮ್ಮೊಳಗೆ ಆಳ ಗಿಲ್ಟ್ ( ತಪ್ಪಿತಸ್ಥ ಭಾವ) ಹುಟ್ಟಿಕೊಳ್ಳುತ್ತದೆ.
ನಾಚಿಕೊಳ್ಳಬೇಕಾದ ಯಾವ ಸಂಗತಿಯೂ ಇಲ್ಲ, ಪ್ರತಿಯೊಂದು ತನ್ನಷ್ಟಕ್ಕೆ ತಾನು ಪರಿಪೂರ್ಣವಾಗಿದೆ. ಇದಕ್ಕಿಂತ ಹೆಚ್ಚು ಪರಿಪೂರ್ಣ ಜಗತ್ತು ಯಾವುದೂ ಇಲ್ಲ. Right now, this moment ನಿಮ್ಮ ಇಡೀ ಇರುವಿಕೆಯ ಕ್ಲೈಮ್ಯಾಕ್ಸ್ ಆಗಿದೆ, ಇದರ ಸುತ್ತ ಎಲ್ಲವೂ ಸುತ್ತುತ್ತಿದೆ. ಬೇರೆ ಯಾವುದೂ ಇದಕ್ಕಿಂತ ಪರಿಪೂರ್ಣ ಅಲ್ಲ, ಆದ್ದರಿಂದ ಸುಮ್ಮನೇ relax & enjoy. ನಿಮ್ಮ ಇರುವಿಕೆಯ ಬಾಗಿಲುಗಳನ್ನ ಗಾಳಿ ಬೆಳಕು ಆಕಾಶಗಳಿಗೆ ತೆರೆದುಕೊಳ್ಳಿ. ಆಗ ಯಾವತ್ತೂ ತಾಜಾ ಗಾಳಿ ಮತ್ತು ಹೊಸ ಸೂರ್ಯನ ಕಿರಣಗಳು ನಿಮ್ಮ ಮೂಲಕ ಹಾಯ್ದು ಹೋಗುತ್ತಿರುತ್ತವೆ. ಇರುವಿಕೆಯ ಟ್ರಾಫಿಕ್ ಗೆ ನಿಮ್ಮ ಮೂಲಕ ಅವಕಾಶ ಮಾಡಿಕೊಡಿ. ಯಾವತ್ತೂ ನಿಮ್ಮನ್ನು ಕ್ಲೋಸ್ಡ್ ಮಾಡಿಕೊಳ್ಳಬೇಡಿ, ಹಾಗೇನಾದರೂ ಆದರೆ ಕೇವಲ ಸಾವು ಮುತ್ತು ಕೊಳಕನ್ನು ನೀವು ಶೇಖರಿಸುತ್ತೀರಿ. ಆದ್ದರಿಂದ ನಾಚಿಕೆಯ ಬಗ್ಗೆ ಇರುವ ನಿಮ್ಮ ಅನಿಸಿಕೆಗಳನ್ನ ಡ್ರಾಪ್ ಮಾಡಿ, ಮತ್ತು ಯಾವುದನ್ನೂ ಜಡ್ಜ್ ಮಾಡಲು ಹೋಗಬೇಡಿ.

