ಯಾವುದೆಲ್ಲ ಸಂಪೂರ್ಣವಾಗುತ್ತದೆಯೋ, ಆ ಎಲ್ಲವೂ ಸುಂದರವಾಗಿರುತ್ತದೆ, ಯಾವುದೆಲ್ಲ ಭಾಗಶಃವೋ ( partial) ಆ ಎಲ್ಲವೂ ಕುರೂಪ. ಆದ್ದರಿಂದ ನೀವು ಏನಾಗಿದ್ದೀರೋ ಅದರೊಳಗೆ ಪೂರ್ಣವಾಗಿರಿ, ಮತ್ತು ಈ ನಿಮ್ಮ ಪೂರ್ಣವಾಗುವಿಕೆ ನಿಮ್ಮ ಇರುವಿಕೆಯ ಕ್ವಾಲಿಟಿಯನ್ನೇ ಸಂಪೂರ್ಣವಾಗಿ ಬದಲಾಯಿಸುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ಜಗತ್ತಿನಲ್ಲಿ
ನಮ್ಮ ವಿಕಾಸಕ್ಕೆ ಕಾರಣವಾಗಿರುವುದು
ನಮ್ಮ ನಡುವೆ ಇರುವ ಸಮಾನತೆಗಳಲ್ಲ,
ಸಮಾನ ಹೋಲಿಕೆಗಳಲ್ಲ,
ಬದಲಾಗಿ
ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತಿರುವುದು
ನಮ್ಮ ನಡುವಿನ ವೈರುಧ್ಯಗಳು.
ಬ್ರಹ್ಮಾಂಡದ ಎಲ್ಲ ವೈರುಧ್ಯಗಳು
ಪ್ರತಿಯೊಬ್ಬರಲ್ಲೂ ಜಾಗ ಮಾಡಿಕೊಂಡಿವೆ.
ಪ್ರತೀ ಆಸ್ತಿಕನೂ ತನ್ನೊಳಗಿರುವ
ನಾಸ್ತಿಕನನ್ನು ಭೇಟಿ ಮಾಡಬೇಕು
ಮತ್ತು, ಪ್ರತೀ ನಾಸ್ತಿಕನೂ
ತನ್ನೂಳಗಿನ ಮೂಕ ಆಸ್ತಿಕನನ್ನು ಮುಟ್ಟಿ ಮಾತನಾಡಿಸಬೇಕು.
ಮನುಷ್ಯ
ತನ್ನ ಪರಿಪೂರ್ಣ ಸ್ಥಿತಿ ಮುಟ್ಟುವ ತನಕ
ನಂಬಿಕೆ ಕೇವಲ
ತನ್ನ ಬದ್ಧವೈರಿಯಂತೆ ಕಾಣಿಸುವ
ಅಪನಂಬಿಕೆಯನ್ನು ಉದ್ದೀಪಿಸುವ
ನಿಧಾನ ಪ್ರಕ್ರಿಯೆ ಮಾತ್ರ.
~ ಶಮ್ಸ್ ತಬ್ರೀಝಿ
ಇದು ಬದಲಾವಣೆಯ ರಸವಿದ್ಯೆ, ಅಂತರಂಗದ ಬದಲಾವಣೆ. ಸಮಸ್ತವನ್ನೂ ಸ್ವೀಕಾರ ಮಾಡುತ್ತ ಸಮಯದೊಂದಿಗೆ ಮುನ್ನಡೆಯಿರಿ. ನೀವು ನಿಜವಾಗಿಯೂ ಚಲಿಸುತ್ತಿರುವಿರಾದರೆ ಅಲ್ಲಿ ಯಾವ ಹ್ಯಾಂಗೋವರ್ ಇರುವುದಿಲ್ಲ. ನೀವು ನಿಜವಾಗಿ ಕೋಪದಲ್ಲಿ ಮುನ್ನಡೆಯುತ್ತೀರಾದರೆ ನೀವು ಅದರೊಂದಿಗೆ ಫಿನಿಶ್ ಆಗುತ್ತೀರಿ. ಏಕೆಂದರೆ ನೀವು ಅದರೊಳಗೆ ಸಂಪೂರ್ಣವಾಗಿ ಒಂದಾದಾಗ ಅದು ಫಿನಿಶ್ ಆಗುತ್ತದೆ. ಆಗ ನೀವು ಅದರಿಂದ ಹೊರಗೆ ಬರುತ್ತೀರಿ, ಸಂಪೂರ್ಣವಾಗಿ, ಭ್ರಷ್ಟಗೊಳ್ಳದೇ ಹೊರಬರುತ್ತೀರಿ.
ಸಮಾಜದಿಂದ ಇನ್ನೂ ಭೃಷ್ಟಗೊಳ್ಳದ ಪುಟ್ಟ ಮಗುವನ್ನು ಗಮನಿಸಿ. ಅದಕ್ಕೆ ಕೋಪ ಬಂದಾಗ ಅದಕ್ಕೆ ನಿಜವಾಗಿ, ಪೂರ್ಣವಾಗಿ ಕೋಪ ಬಂದಿರುತ್ತದೆ; ಆಗ ಅದು ಸಿಡಿಯುತ್ತದೆ. ಪುಟ್ಟ ಮಗು ಆದರೆ ಆಗ ಅದಕ್ಕೆ ಇಡೀ ಜಗತ್ತನ್ನು ನಾಶ ಮಾಡುವಷ್ಟು ಸಿಟ್ಟು ಇರುತ್ತದೆ. ಆಗ ಅದು ಕೆಂಡದುಂಡೆಯನ್ನು ನುಂಗಿದಂತೆ ಕೆಂಪಾಗುತ್ತದೆ. ಸುಮ್ಮನೇ ಆ ಮಗುವನ್ನು ಗಮನಿಸಿ, ಎಷ್ಟು ಸುಂದರ, ಎಷ್ಟು ಜೀವಂತ ಅದು. ಮತ್ತು ಮುಂದಿನ ಗಳಿಗೆಯಲ್ಲಿಯೇ ಅದು ನಗುನಗುತ್ತ ಆಟವಾಡುತ್ತಿರುತ್ತದೆ, ಈಗ ಅದರೊಳಗೆ ಸಿಟ್ಟಿನ ಯಾವ ಲವಲೇಶವೂ ಇಲ್ಲ. ಕೆಲವು ಕ್ಷಣಗಳ ಹಿಂದೆಯಷ್ಟೇ ಅದು ಕೋಪದಿಂದ ಕುದಿಯುತ್ತಿತ್ತು ಎನ್ನುವುದನ್ನು ನಂಬಲಿಕ್ಕಾಗುವುದಿಲ್ಲ. ಈಗ ಅದು ಎಷ್ಟು ಪ್ರೇಮಮಯಿ, ಎಷ್ಟು ಹೂವಿನಂತೆ – ಆದರೆ ಕೆಲವು ಕ್ಷಣ ಹಿಂದೆಯಷ್ಟೇ ಅದು ಬೆಂಕಿಯ ಕೆಂಡದಷ್ಟು ಕೆಂಪಾಗಿತ್ತು!
ನಿಮ್ಮ ಬದುಕು ಹೀಗೆ ಮುಂದುವರೆಯಬೇಕು. ನೀವು ಪೂರ್ಣವಾಗಿದ್ದಾಗ ಕೆಲವು ಕ್ಷಣಗಳ ಹಿಂದಿನ ಹ್ಯಾಂಗೋವರ್ ಈಗ ಇಲ್ಲ. ನೀವು ಈಗ ಯಾವತ್ತೂ ತಾಜಾ ಮತ್ತು ಯಂಗ್, ಮತ್ತು ಯಾವ ಹಳೆಯ ಭಾರವೂ ನಿಮ್ಮ ಮೇಲೆ ಇಲ್ಲ. ಇದನ್ನೇ ನಾನು ಅಧ್ಯಾತ್ಮಿಕ ಬದುಕು ಎನ್ನುವುದು. ಅಧ್ಯಾತ್ಮಿಕ ಬದುಕು ಎಂದರೆ ಶಿಸ್ತಿನ ಬದುಕು ಅಲ್ಲ. ಅದು ಸಹಜತೆಯ, ಸ್ವಾಭಾವಿಕತೆಯ ಬದುಕು.

