ವಚನ ವೈವಿಧ್ಯ#6 : ಸಾಧನೆ ಸ್ವಪ್ರಯತ್ನದಿಂದ ಮಾತ್ರ-ಸಕಳೇಶ ಮಾದರಸ

ಒಬ್ಬರು ಇನ್ನೊಬ್ಬರಿಗೆ ಏನು ಕೊಡಬಹುದು, ಕೊಡುವುದರ ಮಿತಿಗಳೇನು ಅನ್ನುವುದನ್ನು ಈ ವಚನ ಹೇಳುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ

ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ
ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ
ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ
ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ
ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಲೋಕದ ಗಾದೆಮಾತಿನಂತೆ
ಸದ್ಗುರುಕಾರುಣ್ಯವಾದಡೂ ಸಾಧಿಸಿದವನಿಲ್ಲ ಸಕಳೇಶ್ವರಾ (ಸಂ.೯, ವ. ೪೩೧)

[ಕೈದು-ಆಯುಧ, ನೆನಹ-ಧ್ಯಾನವ]

ಕೆರೆಗೆ ಏರಿಯನ್ನು  ಕಟ್ಟಿಸಬಹುದು ನೀರು ಬರಬೇಕು; ಕೈದು, ಅಂದರೆ ಆಯುಧ, ಕೊಡಬಹುದು, ಆದರೆ ಆಯುಧ ಹಿಡಿದು ಹೋರಾಡಬಲ್ಲ ಶೌರ್ಯ ಮಾತ್ರ ಒಳಗಿನಿಂದಲೇ ಬರಬೇಕು; ಒಳ್ಳೆಯ ಹೆಣ್ಣನ್ನು ನೋಡಿ ಮದುವೆ ಮಾಡಬಹುದು, ಆದರೆ ಬಾಳುವೆ ನಡೆಸಲು ಬೇಕಾದ ಗಂಡಸುತನ, ಒಳಗೇ ಇರಬೇಕು.  ಹರಸುವುದರಿಂದ ಪೌರುಷ ಬರುವುದಿಲ್ಲ. ಮಹತ್ತಾದುದನ್ನು ತೋರಬಹುದು, ಆದರೆ ಕಂಡದ್ದು ನೆನಪು ಉಳಿಯುವಂತೆ ಮಾಡಲು ಸಾಧ್ಯವೇ?  ಓದಿ ತಿಳಿದದ್ದು ಕಾಲು ಭಾಗ, ಬುದ್ಧಿಯಿಂದ ಅರಿತದ್ದು ಅದಕ್ಕಿಂತ ಮೂರು ಪಟ್ಟು ಹೆಚ್ಚು. ಗುರುವಿನ ಕಾರುಣ್ಯ ದೊರೆಯಬಹುದು ಆದರೆ ಸಾಧನೆಯ ಜವಾಬ್ದಾರಿ ಮಾತ್ರ ಅವರವರದ್ದೇ ಆಗಿರುತ್ತದೆ.

ಒಬ್ಬರು ಇನ್ನೊಬ್ಬರಿಗೆ ಏನು ಕೊಡಬಹುದು, ಕೊಡುವುದರ ಮಿತಿಗಳೇನು ಅನ್ನುವುದನ್ನು ಈ ವಚನ ಹೇಳುತ್ತದೆ. ನಾವು ಯಾವುದನ್ನು ʻಶಿಕ್ಷಣʼ ವ್ಯಕ್ತಿತ್ವ ರೂಪಣ ಎಂದು ನಂಬಿ ಆಚರಿಸುತ್ತಿದ್ದೇವೋ ಅದರ ಮಿತಿಗಳನ್ನು ಮನದಟ್ಟು ಮಾಡುವಂತಿದೆ. ನಾವು ಏನಾಗುತ್ತೇವೋ ಅದಕ್ಕೆ ನಾವೇ ಜವಾಬ್ದಾರರು. ನಾವು ಹೇಗಿದ್ದೇವೋ ಅದಕ್ಕೂ ನಾವೇ ಜವಾಬ್ದಾರರು. ಶುಭ ಹಾರೈಕೆ ಅನ್ನುವುದು ಕೇವಲ ಹಾರೈಕೆ ಮಾತ್ರ, ಸಾಧನೆ ಮಾತ್ರ ಅವರವರ ಪ್ರಯತ್ನದ ಫಲ. ಈ ಮಾತು ವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಹೊಣೆಗಾರಿಕೆಗಳನ್ನು ಸೂಚಿಸುವಂತೆಯೂ ತೋರಬಹುದು; ವ್ಯಕ್ತಿತ್ವವು ʻಇರುವುದೇʼ ಹೊರತು, ಇರುವುದನ್ನು ತೋರುವುದೇ ಹೊರತು ಕಲಿಸಿ ರೂಪಿಸಲು ಸಾಧ್ಯವಿಲ್ಲ ಎಂಬ ನಿಲುವಿನಂತೆಯೂ ಕಾಣಬಹುದು.


ಸಕಳೇಶ ಮಾದರಸ

ಸಕಳೇಶ ಮಾದರಸರ ೧೩೫ ವಚನಗಳು ಪ್ರಕಟವಾಗಿವೆ. ಸಕಳೇಶ್ವರ ಎಂಬುದು ವಚನಾಂಕಿತ. ಇವರನ್ನು ಕುರಿತು ಅನೇಕ ಮಧ್ಯಕಾಲೀನ ಕೃತಿಗಳು ಉಲ್ಲೇಖ ಮಾಡುತ್ತವೆ.   ಸಂಗೀತಜ್ಞ,  ವೀಣಾದಿ ವಾದ್ಯಗಳ ಕಲಾವಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.